ಹರ್ಷ ಕೊಲೆ ಪ್ರಕರಣಕ್ಕೂ ಹಿಜಾಬ್ ಪ್ರತಿಭಟನೆಗಳಿಗೂ ನಂಟಿದೆ ಎಂದು ಹೈಕೋರ್ಟಿನಲ್ಲಿ ಹೇಳಿದ ವಕೀಲ ಸುಭಾಶ್ ಝಾ
"ಪ್ರಕರಣದ ತನಿಖೆ ನಡೆಯುತ್ತಿರುವಾಗ ಊಹೆಗಳ ಆಧಾರದಲ್ಲಿ ಮುಂದುವರಿಯಲು ಸಾಧ್ಯವಿಲ್ಲ" ಎಂದ ಹೈಕೋರ್ಟ್

ಬೆಂಗಳೂರು: "ಭಾರತವನ್ನು ಇಸ್ಲಾಮೀಕರಣಗೊಳಿಸುವ ಉದ್ದೇಶದಿಂದ ಸೌದಿ ವಿಶ್ವವಿದ್ಯಾಲಯಗಳು ಸಂಘಟನೆಗಳಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‍ಐ), ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‍ಐ), ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ (ಎಸ್‍ಐಒ) ಮತ್ತು ಜಮಾತ್-ಇ-ಇಸ್ಲಾಮ್ (ಜೆಐಎಚ್) ಇವುಗಳಿಗೆ ಹಣಕಾಸು ಸಹಾಯ ಒದಗಿಸುತ್ತಿವೆ" ಎಂದು ಹಿಜಾಬ್ ವಿವಾದದ ಕುರಿತ ವಿಚಾರಣೆ ವೇಳೆ ಶುಕ್ರವಾರ ಹಿರಿಯ ವಕೀಲ ಸುಭಾಶ್ ಝಾ ಹೇಳಿದರು.
ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಹಿಂದುತ್ವ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೂ ಹಿಜಾಬ್ ವಿವಾದದ ಕುರಿತ ಪ್ರತಿಭಟನೆಗಳಿಗೂ ನಂಟಿದೆ ಎಂದೂ ಝಾ ಹೇಳಿದರಲ್ಲದೆ ಹಿಜಾಬ್ ವಿವಾದದ ಕುರಿತಂತೆ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಸಿಬಿಐ/ಎನ್‍ಐಎ ತನಿಖೆ ನಡೆಸಬೇಕೆಂದೂ ಕೋರಿದರು.
ತಮ್ಮ ವಾದಗಳಿಗೆ ಪೂರಕವಾಗಿ ಯಾವುದೇ ಸಾಕ್ಷ್ಯವಿದೆಯೇ ಎಂದು ಈ ಸಂದರ್ಭ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಅವರು ಝಾ ಅವರನ್ನು ಕೇಳಿದರು.
"ಹಿಜಾಬ್ ಕುರಿತಂತೆ ಈ ಪ್ರಮಾಣದ ಪ್ರತಿಭಟನೆಗಳನ್ನು ರಾತ್ರಿ ಬೆಳಗಾಗುವುದರೊಳಗಾಗಿ ಆಯೋಜಿಸಲು ಸಾಧ್ಯವಿಲ್ಲ. ಹುಡುಗಿಯರು ಈ ಹಿಂದೆ ಹಿಜಾಬ್ ಧರಿಸುತ್ತಿರಲಿಲ್ಲ ಎಂದು ತೋರಿಸುವ ಛಾಯಾಚಿತ್ರಗಳಿವೆ. ದಿಢೀರನೆ ಒಂದರ ಮೇಲೊಂದು ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ. ದೇಶಾದ್ಯಂತ ಹಿರಿಯ ವಕೀಲರು ಇದರಲ್ಲಿಯೇ ವ್ಯಸ್ತರಾಗಿದ್ದಾರೆ" ಎಂದು ಅವರು ಹೇಳಿದರು.
ಶಿವಮೊಗ್ಗ ಹತ್ಯೆ ಘಟನೆ ಕುರಿತು ಉಲ್ಲೇಖಿಸಿದ ಅವರು "ಒಬ್ಬ ಯುವಕ ಹರ್ಷ ಕೊಲೆಯಾಗಿದ್ದಾನೆ ಹಾಗೂ ಈ ಬರ್ಬರ ಹತ್ಯೆಯಲ್ಲಿ ಸಿಎಫ್‍ಐ ಶಾಮೀಲಾಗಿದೆ ಎಂದು ನನಗೆ ಮಾಹಿತಿ ನೀಡಲಾಗಿದೆ" ಎಂದು ಅವರು ಹೇಳಿದರು.
ಆಗ ಉತ್ತರಿಸಿದ ಮುಖ್ಯ ನ್ಯಾಯಮೂರ್ತಿ "ತನಿಖೆ ಬಾಕಿಯಿದೆ, ನಾವು ಊಹೆ ಮಾಡಲು ಸಾಧ್ಯವಿಲ್ಲ. ಅದರ ಆಧಾರದಲ್ಲಿ ಮುಂದಡಿಯಿಡಲು ಸಾಧ್ಯವಿಲ್ಲ. ನಿಮ್ಮ ಬಳಿ ಯಾವುದೇ ಸಾಕ್ಷ್ಯವಿದೆಯೇ?" ಎಂದು ಕೇಳಿದರು.
"ಹೊರನೋಟಕ್ಕೆ ಕಾಣುವುದಕ್ಕಿಂತ ಹೆಚ್ಚೇ ಇದೆ ಎಂದು ಸಾಂದರ್ಭಿಕ ಸನ್ನಿವೇಶಗಳು ಬೆಟ್ಟು ಮಾಡುತ್ತಿವೆ. ಸದ್ಯ ವಿಶ್ವಾಸಾರ್ಹ ಮಾಹಿತಿ ಅಗತ್ಯ, ಸರಕಾರದಿಂದ ನ್ಯಾಯಾಲಯ ವರದಿ ಕೇಳಬಹುದು" ಎಂದು ಝಾ ಹೇಳಿದರು. ಇದನ್ನು ಪರಿಗಣಿಸುವುದಾಗಿ ತಿಳಿಸಿದ ಮುಖ್ಯ ನ್ಯಾಯಮೂರ್ತಿ ಸರಕಾರದಿಂದ ಈಗಾಗಲೇ ವರದಿ ಕೇಳಿರುವುದಾಗಿ ತಿಳಿಸಿದರು.







