ಕುಡಿಯುವ ನೀರಿನ ದರ ಪರಿಷ್ಕರಣೆಗೆ ಒಪ್ಪಿಗೆ; ಸರಕಾರದಿಂದ ಶೀಘ್ರವೇ ಅಧಿಕೃತ ಆದೇಶ ನಿರೀಕ್ಷೆ: ಮಂಗಳೂರು ಮೇಯರ್

ಮಂಗಳೂರು, ಫೆ. 25: ನಗರದಲ್ಲಿ ಗೃಹಬಳಕೆಯ ಕುಡಿಯುವ ನೀರಿನ ದರ ಇಳಿಕೆ ಮಾಡುವ ನೆಲೆಯಲ್ಲಿ ದರ ಪರಿಷ್ಕೃರಣೆಗೆ ಮೌಖಿಕ ಒಪ್ಪಿಗೆ ದೊರೆತಿದ್ದು, ಒಂದೆರಡು ದಿನದಲ್ಲಿ ಈ ಬಗ್ಗೆ ಸರಕಾರದಿಂದ ಆಧಿಕೃತ ಆದೇಶ ಬರಲಿದೆ ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ಹೇಳಿದರು.
ಮಂಗಳೂರು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಇಂದು ತಮ್ಮ ಅಧಿಕಾರಾವಧಿಯ ಕೊನೆಯ ಪಾಲಿಕೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನೀರಿನ ದರ ಪರಿಷ್ಕರಣೆ ಮಾಡುವಂತೆ ಈಗಾಗಲೇ ಸರಕಾರದ ನೆಲೆಯಲ್ಲಿ ಮಾತುಕತೆ ನಡೆಸಲಾಗಿದೆ. ರಾಜ್ಯ ಮಟ್ಟದ ಅಧಿಕಾರಿಗಳ ಜತೆಗೆ ಚರ್ಚೆ ಆಗಿದೆ. ಇದರಂತೆ ಗೃಹಬಳಕೆ ನೀರಿನ ದರ ಕಡಿಮೆ ಮಾಡುವ ಬಗ್ಗೆ ಒಪ್ಪಿಗೆ ದೊರಕಿದೆ ಎಂದು ಮೇಯರ್ ಹೇಳಿದರು.
ಎ.ಸಿ. ವಿನಯ್‌ರಾಜ್ ಮಾತನಾಡಿ ‘ಮೌಖಿಕ ಒಪ್ಪಿಗೆಯನ್ನು ಪಾಲಿಕೆಯ ನಿಯಮಾವಳಿ ಪ್ರಕಾರ ಒಪ್ಪಲು ಸಾಧ್ಯವಿಲ್ಲ. ಸರಕಾರದ ಆದೇಶ ಬಂದಿದ್ದರೆ ಮಾತ್ರ ತಿಳಿಸಿ’ ಎಂದರು.
‘ಕೆಲವೇ ದಿನದಲ್ಲಿ ಸರಕಾರದಿಂದ ಅಧಿಕೃತ ಆದೇಶ ಬರಲಿದೆ’ ಎಂದು ಮೇಯರ್ ಹೇಳಿದರು.
ಮೇಯರ್ ಅವಧಿಯ ಕೊನೆಯ ಪಾಲಿಕೆ ಸಭೆಯಲ್ಲಿ ಮಾತನಾಡಿದ ಪ್ರೇಮಾನಂದ ಶೆಟ್ಟಿ ಅವರು ಕಳೆದ ಒಂದು ವರ್ಷದ ಅವಧಿಯಲ್ಲಿ ಪಾಲಿಕೆ ವ್ಯಾಪ್ತಿಯ ಸಮಗ್ರ ಅಭಿವೃದ್ಧಿಗೆ ಹಾಗೂ ಆಡಳಿತ ಸುಧಾರಣೆಗೆ ಆದ್ಯತೆ ನೀಡಲಾಗಿದೆ. ಎಲ್ಲಾ ಕಾರ್ಯಕ್ರಮವನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಪ್ರಯತ್ನ ಮಾಡಲಾಗಿದೆ. ಜಲಸಂಸ್ಕರಣ ಘಟಕದ ಬಹುಕಾಲದ ಸಮಸ್ಯೆಗೆ ಪರಿಹಾರ ನೀಡಲಾಗಿದೆ. ಉದ್ದಿಮೆ ಪರವಾನಿಗೆ ಸೇರಿದಂತೆ ಆನ್‌ಲೈನ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆ ಎಂದರು.
ಮುಖ್ಯಸಚೇತಕ ಸುಧೀರ್ ಶೆಟ್ಟಿ ಮಾತನಾಡಿ ‘ಕಳೆದ ಒಂದು ವರ್ಷದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಗೆ ವೇಗ ನೀಡಲಾಗಿದೆ. ಪಡೀಲ್-ಪಂಪ್‌ವೆಲ್ ರಸ್ತೆಗೆ ಅಗಲೀಕರಣದ ಭಾಗ್ಯ ದೊರಕಿದೆ. ಆನ್‌ಲೈನ್ ವ್ಯವಸ್ಥೆಗೆ ಆದ್ಯತೆ ನೀಡಲಾಗಿದೆ. ಜನಸಾಮಾನ್ಯರ ಜತೆಗೆ ಬೆರೆಯುವ ಹಾಗೂ ಅವರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಪ್ರೇಮಾನಂದ ಶೆಟ್ಟಿ ಅಜಾತಶತ್ರುವಾಗಿ ಆಡಳಿತ ನಡೆಸಿದ್ದಾರೆ’ ಎಂದರು.
ಎ.ಸಿ.ವಿನಯ್‌ರಾಜ್ ಮಾತನಾಡಿ, ಪಾಲಿಕೆ ಸಾಮಾನ್ಯ ಸಭೆಯಲ್ಲಿ ಅಭಿನಂದನಾ ಭಾಷಣ ಮಾಡುವುದು ಬೇಡ. ಅಭಿವೃದ್ಧಿ ಎಂಬುದು ನಿರಂತರ ಪ್ರಕ್ರಿಯೆ. ಹಿಂದಿನ ಆಡಳಿತ ಅವಧಿಯಲ್ಲಿ ಮಾಡಿರುವುದುನ್ನು ಈಗ ಮುಂದುವರಿಸಲಾಗುತ್ತಿದೆ ಎಂದರು. ಈ ವೇಳೆ ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರ ಮಧ್ಯೆ ಮಾತಿನ ಚಕಮಕಿ ಉಂಟಾಯಿತು.
ಮಂಗಳಾದೇವಿ ವಾರ್ಡ್‌ನಲ್ಲಿ ಜಪ್ಪು ಹೆರಿಗೆ ಕೇಂದ್ರ, ಡಿಸ್ಪೆನ್ಶರಿ, ಪಶುವೈದ್ಯಕೀಯ ಚಿಕಿತ್ಸಾಲಯ, ನಗರ ನೈರ್ಮಲ್ಯ ನಿರೀಕ್ಷಕರ ಕಚೇರಿ ಹಾಗೂ ವಸತಿಗೃಹಗಳು ಬಹಳ ಹಳೆಯದಾಗಿದ್ದು ಇದನ್ನು ತೆರವುಗೊಳಿಸಿ ಇಲ್ಲಿ ಬಹು ಉಪಯೋಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಪ್ರವೀಣ್‌ಚಂದ್ರ ಆಳ್ವ ಮಾತನಾಡಿ ಸ್ವಯಂಘೋಷಿತ ಆಸ್ತಿ ತೆರಿಗೆ ಬಹುತೇಕ ಮಂದಿ ಪಾವತಿಸಿದ್ದಾರೆ. ಬಾಕಿ ಇಟ್ಟವರಿಗೆ ದಂಡ ವಿಧಿಸುತ್ತಿದ್ದಾರೆ. ಇದರಿಂದ ಬಹುತೇಕ ಬಾಕಿಯವರು ಪಾವತಿಸುತ್ತಿಲ್ಲ ಎಂದರು. ಮೇಯರ್ ಮಾತನಾಡಿ ಈ ವಿಚಾರವನ್ನು ಅಧಿಕಾರಿಗಳ ಜತೆಗೆ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದರು.
ಪಾಲಿಕೆಯ ನಾಮನಿರ್ದೇಶಿತ ಸದಸ್ಯರಾಗಿ ನೂತನವಾಗಿ ನೇಮಕವಾದ ಪ್ರಶಾಂತ್ ಕುಮಾರ್ ಪ್ರಮಾಣವಚನ ಸ್ವೀಕರಿಸಿದರು. ಉಪಮೇಯರ್ ಸುಮಂಗಳ, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾದ ಲೋಕೇಶ್ ಬೊಳ್ಳಾಜೆ, ಸಂದೀಪ್, ಶೋಭಾ ರಾಜೇಶ್, ಲೀಲಾವತಿ, ಪಾಲಿಕೆ ಆಯುಕ್ತರ ಬದಲು ಉಪ ಆಯುಕ್ತರು (ಆಡಳಿತ)ಭಾಸ್ಕರ್ ಉಪಸ್ಥಿತರಿದ್ದರು.
ಸೆಂಟ್ರಲ್ ಮಾರುಕಟ್ಟೆ ತ್ಯಾಜ್ಯ ಸ್ಥಳವಾಗಿ ಪರಿವರ್ತನೆ: ಆಕ್ಷೇಪ
ಮಾಜಿ ಮೇಯರ್ ಎಂ.ಶಶಿಧರ ಹೆಗ್ಡೆ ಅವರು ಮಾತನಾಡಿ, ಸೆಂಟ್ರಲ್ ಮಾರುಕಟ್ಟೆಯನ್ನು ಕೆಡವಿ 2 ವರ್ಷವಾಗುತ್ತಿದೆ. ವಾರ್ಷಿಕ 9 ಲಕ್ಷ ರೂ. ಆದಾಯ, 51 ಲಕ್ಷ ರೂ. ಟೆಂಡರ್ ಆದಾಯ ಹಾಗೂ ಸಾವಿರಾರು ಮಂದಿಗೆ ಉದ್ಯೋಗ, ಬದುಕು ಕಲ್ಪಿಸುವ ಮಾರುಕಟ್ಟೆಯನ್ನು ಈಗ ಕೇಳುವವರೇ ಇಲ್ಲ. ಇಲ್ಲಿ ಈಗ ತ್ಯಾಜ್ಯ ಹಾಕುವ ಸ್ಥಳವಾಗಿ ಪರಿವರ್ತಿತವಾಗಿದೆ. ಅವಶೇಷಗಳ ರೀತಿಯಲ್ಲಿ ಇಲ್ಲಿನ ಪರಿಸರವಿದೆ ಎಂದರು.
ಮಂಗಳೂರು ಮಹಾನಗರ ಪಾಲಿಕೆಯ 210 ಕಡೆಗಳಲ್ಲಿ ಆಟೋ ರಿಕ್ಷಾ ಪಾರ್ಕ್‌ಗಳನ್ನು ಅಧಿಕೃತಗೊಳಿಸುವ ಪ್ರಸ್ತಾವ ಇಂದು ಸಭೆಯಲ್ಲಿ ಮಂಡನೆಯಾಗಿದ್ದು, ಪ್ರತೀ ವಾರ್ಡ್‌ನಲ್ಲಿರುವ ಸ್ಥಳಾವಕಾಶ ಸೇರಿದಂತೆ ಎಲ್ಲಾ ವಿಚಾರಗಳ ಅವಲೋಕಿಸಿ ಮುಂದಿನ ತೀರ್ಮಾನ ಕೈಗೊಳ್ಳಲು ಪಾಲಿಕೆ ನಿರ್ಧರಿಸಿದೆ.
ಮಂಗಳೂರು ಪಾಲಿಕೆ ವ್ಯಾಪ್ತಿಯ ಆಟೋ ರಿಕ್ಷಾಗಳನ್ನು ನಿಲ್ಲಿಸುವ ಸಂಬಂಧ ಆಟೋ ರಿಕ್ಷಾ ಮಾಲಕ/ಚಾಲಕರ ಸಂಘದ ಪದಾಧಿಕಾರಿಗಳೊಂದಿಗೆ ಸಂಚಾರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ಸ್ಥಳ ಪರಿಶೀಲನೆ ನಡೆಸಿ ಪರಿಷ್ಕೃತ ಆಟೋ ರಿಕ್ಷಾ ಪಾರ್ಕ್‌ಗಳನ್ನು ಅಧಿಕೃತಗೊಳಿಸಲು ತಾತ್ಕಾಲಿಕ ಆದೇಶ ನೀಡುವಂತೆ ಪಾಲಿಕೆಗೆ ಕೋರಿದ್ದಾರೆ ಎಂದು ಮೇಯರ್ ಸಭೆಯಲ್ಲಿ ತಿಳಿಸಿದರು.
ಎ.ಸಿ.ವಿನಯ್‌ರಾಜ್, ನವೀನ್ ಡಿಸೋಜ, ಎಂ.ಶಶಿಧರ ಹೆಗ್ಡೆ ಸೇರಿದಂತೆ ಇತರರು ಮಾತನಾಡಿ, ವಾರ್ಡ್ ವ್ಯಾಪ್ತಿಯ ಸ್ಥಳಾವಕಾಶದ ಬಗ್ಗೆ ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಬೇಕು ಎಂದರು. ಪರಿಶೀಲನೆ ನಡೆದ ಬಳಿಕ ಇದನ್ನು ಅನುಮೋದಿಸಲಾಗುವುದು ಎಂದು ಮೇಯರ್ ತಿಳಿಸಿದರು. ಎಸಿಪಿ ನಟರಾಜ್ ಅವರು ಸಭೆಯಲ್ಲಿ ಭಾಗವಹಿಸಿದ್ದರು.