ಹಿಜಾಬ್ ಪ್ರಕರಣ: ಮಂಗಳೂರಿನಲ್ಲಿ ಎಸ್‌ವೈಎಸ್‌ನಿಂದ ಪ್ರತಿಭಟನೆ

ಮಂಗಳೂರು, ಫೆ.25: 'ಅವಳನ್ನು ಅಟ್ಟಾಡಿಸಬೇಡಿ' ಎಂಬ ಘೋಷವಾಕ್ಯದಡಿ ಎಸ್‌ವೈಎಸ್ ಹಮ್ಮಿಕೊಂಡ ಹಿಜಾಬ್ ಅಭಿಯಾನದ ಅಂಗವಾಗಿ ಹಿಜಾಬ್‌ನ ಹೆಸರಿನಲ್ಲಿ ಮುಸ್ಲಿಂ ಹೆಣ್ಮಕ್ಕಳ ಶಿಕ್ಷಣದ ಹಕ್ಕನ್ನು ದಮನಿಸುವ ಹುನ್ನಾರದ ವಿರುದ್ಧ ಎಸ್‌ವೈಎಸ್ (ವೆಸ್ಟ್) ದ.ಕ. ಜಿಲ್ಲಾ ಸಮಿತಿಯ ವತಿಯಿಂದ ಶುಕ್ರವಾರ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಯಿತು.
ನ್ಯಾಯಾಲಯಕ್ಕೆ ಸಡ್ಡು ಹೊಡೆಯುವ ವಿದ್ಯಾಸಂಸ್ಥೆಗಳ ಮುಖ್ಯಸ್ಥರೇ.. ನ್ಯಾಯಯುತವಾಗಿ ವರ್ತಿಸಿರಿ, ಗುರುಗಳೇ... ವಿದ್ಯಾರ್ಥಿನಿಯರು ನಿಮ್ಮ ಮಕ್ಕಳು-ಅವರನ್ನು ವಿದ್ಯಾಮಂದಿರದಿಂದ ನೀವು ಹೊರ ತಳ್ಳುವಿರಾ?. ಆಕೆಯನ್ನು ಬದುಕಲು ಬಿಡಿ-ಆಕೆಯ ಹಕ್ಕುಗಳೊಂದಿಗೆ, ಶಿರವಸ್ತ್ರಧಾರಿಣಿಯರ ಶೈಕ್ಷಣಿಕ ಉನ್ನತಿಯನ್ನು ಸ್ವಲ್ಪವಾದರೂ ಅರಗಿಸಿಕೊಳ್ಳಿ... ಇತ್ಯಾದಿ ಘೋಷಣೆಗಳನ್ನು ಪ್ರತಿಭಟನಾಕಾರರು ಕೂಗಿದರು.
ಮುಖ್ಯಭಾಷಣಗೈದ ಎಸ್‌ವೈಎಸ್ ರಾಜ್ಯಾಧ್ಯಕ್ಷ ಡಾ. ಎಮ್ಮೆಸ್ಸೆಂ ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ ಇಂದು ಮುಸ್ಲಿಂ ವಿದ್ಯಾರ್ಥಿನಿಯರು ಶೈಕ್ಷಣಿಕವಾಗಿ ಮುಂದುವರಿದಿದ್ದಾರೆ. ಅವರಿಗೆ ಇನ್ನಷ್ಟು ಪ್ರೋತ್ಸಾಹ ನೀಡುವ ಬದಲು ಹಿಜಾಬ್ ವಿವಾದವನ್ನು ಸೃಷ್ಟಿಸುವ ಮೂಲಕ ಶಿಕ್ಷಣದ ಹಕ್ಕನ್ನು ಮೊಟಕುಗೊಳಿಸಲಾಗುತ್ತದೆ. ಪ್ರತಿಭಟಿಸಿದ ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗುತ್ತದೆ. ಇದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಅನ್ಯಾಯ ಆದಾಗ, ನ್ಯಾಯಕೋರಿ ಪ್ರತಿಭಟಿಸುವುದು ಕೂಡ ದೇಶದ ಸಂವಿಧಾನದ ನೀಡಿದ ಹಕ್ಕಾಗಿದೆ. ಆ ಹಕ್ಕನ್ನು ಆಡಳಿತ ವರ್ಗವು ಕಸಿಯುವುದು ಖಂಡನೀಯ ಎಂದರು.
ನ್ಯಾಯವಾದಿ ಹಂಝತ್ ಹೆಜಮಾಡಿ ಮಾತನಾಡಿ ಮುಸ್ಲಿಮರು ದೇಶವನ್ನು ಕಟ್ಟಿದವರು. ಮುಂದೆಯೂ ಕಟ್ಟುವವರೇ ಆಗಿದ್ದಾರೆ. ಮುಸ್ಲಿಮರು ಎಂದೂ ದೇಶವನ್ನು ಕೆಡಹುವವರು ಅಲ್ಲ. ಭಾರತವನ್ನು ಪ್ರತಿಯೊಬ್ಬರೂ ಕೂಡ ಮಾತೆಯ ಹೆಸರಿನಲ್ಲಿ ಗೌರವಿಸುತ್ತಿದ್ದಾರೆ. ಆದರೆ ಇಂದು ಹಿಜಾಬ್ ಹೆಸರಿನಲ್ಲಿ ಅದೇ ಹೆಣ್ಣನ್ನು ಅವಮಾನಿಸಲಾಗುತ್ತಿರುವುದು ವಿಪರ್ಯಾಸ ಎಂದರು.
ಎಸ್‌ವೈಎಸ್ ಜಿಲ್ಲಾ ಕಾರ್ಯದರ್ಶಿ ಬಶೀರ್ ಮದನಿ ಕೂಳೂರು ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿದರು. ಎಸ್‌ವೈಎಸ್ ಜಿಲ್ಲಾಧ್ಯಕ್ಷ ಮುಹಮ್ಮದ್ ಅಲಿ ಸಖಾಫಿ ಅಶ್‌ಅರಿಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಖಲೀಲ್ ಮುಸ್ಲಿಯಾರ್ ಬೋಳಂತೂರು ಸ್ವಾಗತಿಸಿದರು. ಜಿಲ್ಲಾ ಕೋಶಾಧಿಕಾರಿ ಬಾವಾ ಫಕ್ರುದ್ದೀನ್ ವಂದಿಸಿದರು.
ಪ್ರತಿಭಟನೆಗೆ ಅಶ್ರಫ್ ಸಅದಿ ಮಲ್ಲೂರು, ಇಸ್ಮಾಯೀಲ್ ಮಾಸ್ಟರ್ ಉರುಮಣೆ, ಹನೀಫ್ ಹಾಜಿ ಉಳ್ಳಾಲ, ಕೆಕೆಎಂ ಕಾಮಿಲ್ ಸಖಾಫಿ ಮತ್ತಿತರರು ನೇತೃತ್ವ ನೀಡಿದ್ದರು.













