ಮೈಸೂರು: ದಲಿತ ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸಿ ವಂಚನೆ; ಕಾನ್ಸ್ಟೇಬಲ್ ಬಂಧನ

ಮೈಸೂರು,ಫೆ.25: ದಲಿತ ಮಹಿಳೆಯೋರ್ವಳಿಗೆ ಪೊಲೀಸ್ ಪೇದೆಯೊಬ್ಬ ಮದುವೆಯಾಗುವುದಾಗಿ ವಂಚಿಸಿ ಆಕೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಮುಖ್ಯ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೃಷ್ಣ ಎಂಬಾತನೇ ದಲಿತ ಮಹಿಳೆಗೆ ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ಬಳಿಕ ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.
ತಲಕಾಡು ಮೂಲದ ಗೌರಮ್ಮ ಎಂಬುವವರು ಬನ್ನೂರಿನ ನಂಜಯ್ಯ ಎಂಬುವವರನ್ನು ವಿವಾಹವಾಗಿದ್ದರು. ಇವರ ನಡುವೆ ಕೌಟುಂಬಿಕ ಸಮಸ್ಯೆ ಏರ್ಪಟ್ಟು ಬನ್ನೂರು ಪೊಲೀಸ್ ಠಾಣೆಗೆ ಈ ಹಿಂದೆ ಗೌರಮ್ಮ ದೂರು ನೀಡಿದ್ದರು. ಈ ವೇಳೆ ಕೃಷ್ಣ ಬನ್ನೂರು ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಗೌರಮ್ಮ ಅವರ ಪರಿಚಯವಾಗಿದೆ ಎನ್ನಲಾಗಿದೆ.
ನಂತರ ಗೌರಮ್ಮ ಅವರನ್ನು ಮದುವೆಯಾಗುವುದಾಗಿ ನಂಬಿಸಿದ ಪೇದೆ ಕೃಷ್ಣ, ಗೌರಮ್ಮನ ಪತಿ ನಂಜಯ್ಯ ಅವರಿಗೆ ಡೈವರ್ಸ್ ಕೊಡಿಸಿದ್ದಾನೆ. ಬಳಿಕ ಮೈಸೂರಿನಲ್ಲಿ ಗೌರಮ್ಮ ಅವರನ್ನು ಮನೆ ಮಾಡಿ ಇರಿಸಿ ಆಕೆಯೊಂದಿಗೆ ದೈಹಿಕ ಸಂಪರ್ಕ ಕೂಡ ಬೆಳೆಸಿದ್ದಾನೆ. ಈ ವೇಳೆ ದಲಿತ ಮಹಿಳೆ ಗರ್ಭಿಣಿಯಾಗಿದ್ದು, ವಿಷಯ ಎಲ್ಲರಿಗೂ ತಿಳಿಯುತ್ತದೆ ಎಂದು ಗರ್ಭಪಾತ ಕೂಡ ಮಾಡಿಸಿ ಬಳಿಕ ಬೇರೊಂದು ಮದುವೆಯಾಗಿರುವ ಕುರಿತು ದೂರಲಾಗಿದೆ.
ಹುಲ್ಲಹಳ್ಳಿ ಪೊಲಿಸ್ ಠಾಣಾ ವ್ಯಾಪ್ತಿಯ ಬಳ್ಳೂರು ಹುಂಡಿ ಗ್ರಾಮದ ಜಮೀನೊಂದರಲ್ಲಿ ಕೃಷ್ಣ ಇರುವುದನ್ನು ಖಚಿತಪಡಿಸಿಕೊಂಡ ಗೌರಮ್ಮ ಅಲ್ಲಿಗೆ ಹೋಗಿ ನ್ಯಾಯ ಕೇಳಿದ್ದಾರೆ. ಆ ವೇಳೆ ಕೃಷ್ಣ ಮತ್ತು ಆಕೆಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ ಎನ್ನಲಾಗಿದೆ. ಮಹಿಳೆಯ ಚೀರಾಟ ಕೇಳಿ ಗ್ರಾಮದ ಕೆಲವರು ಸ್ಥಳಕ್ಕೆ ಆಗಮಿಸಿದ್ದಾರೆ. ಈ ವೇಳೆ ಕೃಷ್ಣ ಮತ್ತು ಆತನ ಮಗ ಪರಾರಿಯಾಗಿದ್ದಾರೆ. ಅಸ್ವಸ್ಥಗೊಂಡಿದ್ದ ಮಹಿಳೆಯನ್ನು ಆಂಬುಲೆನ್ಸ್ ಮೂಲಕ ಸ್ಥಳೀಯರು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿದೆ.
ಈ ಸಂಬಂಧ ಹುಲ್ಲಹಳ್ಳಿ ಪೊಲಿಸ್ ಠಾಣೆಯಲ್ಲಿ ಮುಖ್ಯ ಪೇದೆ ಕೃಷ್ಣ ವಿರುದ್ಧ ಮಹಿಳೆ ಮೇಲೆ ಅತ್ಯಾಚಾರ, ಜಾತಿ ನಿಂದನೆ, ಮಾರಣಾಂತಿಕ ಹಲ್ಲೆ, ವಂಚನೆ ಪ್ರಕರಣ ದಾಖಲಾಗಿದ್ದು, ಸರ್ಕಲ್ ಇನ್ಸ್‍ಪೆಕ್ಟರ್ ಲಕ್ಷ್ಮೀಕಾಂತ್ ತಳವಾರ್ ಮುಖ್ಯ ಪೇದೆ ಕೃಷ್ಣ ಅವರನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.







