ಮಂಗಳೂರು: ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ

ಮಂಗಳೂರು, ಫೆ.25: ರಾಜ್ಯ ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನಕ್ಕೆ ಧರಣಿಯ ಮೂಲಕ ಅಡ್ಡಿಪಡಿಸುತ್ತಿರುವ ಕಾಂಗ್ರೆಸ್ ಪಕ್ಷದ ಜನ ವಿರೋಧಿ ನೀತಿ ಮತ್ತು ಹಿಜಾಬ್ ಪ್ರಕರಣಕ್ಕೆ ಬೆಂಬಲ ನೀಡುತ್ತಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ದ.ಕ.ಜಿಲ್ಲಾ ಬಿಜೆಪಿ ಸಮಿತಿಯ ವತಿಯಿಂದ ಶುಕ್ರವಾರ ನಗರದ ಜಿಲ್ಲಾಧಿಕಾರಿಯ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ ಕಾಂಗ್ರೆಸ್ ರಾಜಕೀಯಕ್ಕಾಗಿ ವಿಧಾನಸಭೆ, ರಾಷ್ಟ್ರಧ್ವಜವನ್ನು ಬಳಸಿಕೊಂಡಿದೆ. ಕಾಂಗ್ರೆಸ್‌ನ ಈ ರಾಜಕೀಯ ನಾಟಕವನ್ನು ಜನತೆ ಗಮನಿಸುತ್ತಿದ್ದಾರೆ. ವಿಧಾನಮಂಡಲದ ಅಧಿವೇಶನಕ್ಕೆ ದಿನವೊಂದಕ್ಕೆ 1 ಕೋಟಿ ರೂ. ಖರ್ಚಾಗುತ್ತಿದೆ. ಈ ಬಾರಿಯ ಅಧಿವೇಶನದಲ್ಲಿ ಯಾವುದೇ ಚರ್ಚೆ, ಕಲಾಪ ನಡೆಯಲು ಬಿಡದ ಕಾಂಗ್ರೆಸ್ ಜನರ ಹಣ ವ್ಯರ್ಥವಾಗಲು ಕಾರಣವಾಗಿದೆ ಎಂದು ಆಪಾದಿಸಿದರು.
ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿ, ರಾಜ್ಯದಲ್ಲಿ ಹಿಜಾಬ್ ವಿವಾದದಿಂದ ಆದ ಹಿನ್ನಡೆ ಮರೆಮಾಚಲು ಕಾಂಗ್ರೆಸ್ ವಿಧಾನಮಂಡಲದ ಅಧಿವೇಶಕ್ಕೆ ಅಡ್ಡಿಪಡಿಸುತ್ತಿದೆ. ಶಿವಮೊಗ್ಗದಲ್ಲಿ ಹರ್ಷ ಕೊಲೆ ಪ್ರಕರಣ ವ್ಯವಸ್ಥಿತ ಷಡ್ಯಂತ್ರವಾಗಿದೆ ಎಂದು ಆರೋಪಿಸಿದರು.
ಬಿಜೆಪಿ ಜಿಲ್ಲಾ ವಕ್ತಾರ ಜಗದೀಶ ಶೇಣವ, ಮೇಯರ್ ಪ್ರೇಮಾನಂದ ಶೆಟ್ಟಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕಸ್ತೂರಿ ಪಂಜ, ಸುಧೀರ್ ಶೆಟ್ಟಿ ಕಣ್ಣೂರು, ಮುಡಾ ಅಧ್ಯಕ್ಷ ರವಿಶಂಕರ ಮಿಜಾರ್, ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಮೈಸೂರು ಇಲೆಕ್ಟ್ರಿಕಲ್ಸ್ ಅಧ್ಯಕ್ಷ ಸಂತೋಷ್ ಕುಮಾರ್ ರೈ, ಪಕ್ಷದ ಮುಖಂಡರಾದ ಪೂಜಾ ಪೈ, ವಿಜಯಕುಮಾರ್ ಶೆಟ್ಟಿ, ಕಾರ್ಯಾಲಯದ ಕಾರ್ಯದರ್ಶಿ ಸುಕೇಶ್ ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.








