ಸಾಂತ್ವನ ಸಾಕು...ಟಿಕೆಟ್ ಬೇಕು...: ಸಾಮಾಜಿಕ ಜಾಲತಾಣದಲ್ಲಿ 'ಜಸ್ಟೀಸ್ ಫಾರ್ ಹರ್ಷ' ಅಭಿಯಾನ

ಹರ್ಷ |ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಪೋಸ್ಟರ್
ಶಿವಮೊಗ್ಗ, ಫೆ.25: ಕಳೆದ ರವಿವಾರ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಜರಂಗದಳದ ಕಾರ್ಯಕರ್ತ ಹರ್ಷನ ಕುಟಂಬಕ್ಕೆ ಮುಂದಿನ ವಿಧಾನ ಸಭೆಗೆ ಬಿಜೆಪಿಯಿಂದ ಟಿಕೆಟ್ ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಗ್ರಹ ಕೇಳಿ ಬಂದಿದೆ.
'ಶಿವಮೊಗ್ಗ ವಿಧಾನ ಸಭೆ ಚುನಾವಣೆಯಲ್ಲಿ ಹರ್ಷನ ಕುಟುಂಬಕ್ಕೆ ಟಿಕೆಟ್ ಕೊಡುತ್ತೀರಾ?' ಎಂದು ಬಿಜೆಪಿ ಹರ್ಷ ಹತ್ಯೆ ಪ್ರಕರಣ ಮುಖಂಡರಿಗೆ ಸವಾಲು ಹಾಕಿದ್ದಾರೆ. ಹರ್ಷ ದೇಶಕ್ಕಾಗಿ ಪ್ರಾಣವನ್ನೇ ಕೊಟ್ಟಿದ್ದಾನೆ. ಹೀಗಾಗಿ ಹರ್ಷನ ಕುಟುಂಬದ ಸದ ಸ್ಯರನ್ನು ವಿಧಾನಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಸಿ ಗೆಲ್ಲಿಸಿಕೊಂಡು ಬರಲು ನಿಮ್ಮಿಂದ ಸಾಧ್ಯವಿಲ್ಲವೇ? ಮುಖಂಡರ ಕುಟುಂಬದವರೆ ವಿಧಾನಸಭೆಯಲ್ಲಿ, ಲೋಕಸಭೆಯಲ್ಲಿ ಇರಬೇಕಾ? ದೇಶಭಕ್ತರಿಗೆ ನೀವು ಮಾಡುವುದೇನು ಎಂದು ಜಾಲತಾಣದಾದ್ಯಂತ ಹಲವರು ಪ್ರಶ್ನೆ ಮಾಡಿದ್ದಾರೆ.
ಇನ್ನು 'ಜಸ್ಟೀಸ್ ಫಾರ್ ಹರ್ಷ' ಹೆಸರಿನಲ್ಲಿ ನಡೆಯುತ್ತಿರುವ ಅಭಿಯಾನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶವ್ಯಕ್ತವಾಗುತ್ತಿದೆ. ಹಿಂದುತ್ವದ ಹೆಸರಲ್ಲೇ ಅಧಿಕಾರಕ್ಕೆ ಬಂದಿರುವ ಬಿಜೆಪಿ ಕಾಲದಲ್ಲೇ ಸಾಮಾಜಿಕ ಹಿಂದೂ ಯುವಕನ ಹತ್ಯೆಯಾಗಿದೆ. ಸರ್ಕಾರ ಇದ್ದರೂ ಹಿಂದು ಭಕ್ತರಿಗೆ ರಕ್ಷಣೆ ನೀಡಲಾಗಲಿಲ್ಲ ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ. ದೇಶಭಕ್ತ ಹರ್ಷನ ಕುಟುಂಬಕ್ಕೆ ನ್ಯಾಯ ಸಿಗಲೇಬೇಕು.
ಲೋಕಸಭಾ ಸದಸ್ಯರು, ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರ ಕುಟುಂಬಗಳ ಸದಸ್ಯರಾರೂ ಹತ್ಯೆಯಾಗಲ್ಲ. ಪ್ರಾಣ ಕೊಡುವ ವರೆಲ್ಲರೂ ಬಡ ಕುಟುಂಬಗಳ ಮಕ್ಕಳು. ಅಂತಹ ದೇಶಭಕ್ತ ಕುಟುಂಬಕ್ಕೆ ನ್ಯಾಯ ಸಿಗಬೇಕಾದರೆ ಹರ್ಷನ ತಾಯಿಗೆ ಶಿವಮೊಗ್ಗ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಬಿಜೆಪಿ ಮನಸ್ಸು ಮಾಡುತ್ತಾ ಎಂದು ಪ್ರಶ್ನಿಸಿದ್ದಾರೆ. ಸಂಸದರ ಮಕ್ಕಳೇಸಂಸದರು, ಶಾಸಕರ ಮಕ್ಕಳೇ ಶಾಸಕರು ಆಗಬೇಕಾ? ಇಂತಹ ಪದ್ಧತಿಗೆ ಇತಿಶ್ರೀ ಹಾಡಿ ದೇಶಭಕ್ತನ ಮನೆಯಲ್ಲಿ ಒಬ್ಬ ಶಾಸಕ, ಒಬ್ಬ ಸಂಸದ ಇರುವಂತಾಗಲಿ. ಬಿಜೆಪಿ ನಾಯಕರು ಮನಸ್ಸು ಮಾಡಿದರೆ ಕಷ್ಟವೇನಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ದೀರ್ಘಕಾಲದ ಪರಿಣಾಮ:
ಹರ್ಷ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ಇಂತಹ ಸಂದರ್ಭಗಳಲ್ಲಿ ಸಾಮಾನ್ಯ,ನಾಲ್ಕು ದಿನ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿ ನಂತರ ತಣ್ಣಗಾಗುತ್ತದೆ ಎಂದು ಭಾವಿಸಬೇಡಿ. ಈ ಘಟನೆ ದೀರ್ಘಕಾಲೀನ ಪರಿಣಾಮ ಬೀರುವುದು ಖಂಡಿತ ಎಂದು ಹರ್ಷನ ಪರ ಅಭಿಯಾನ ಆರಂಭಿಸಿರುವ ಯುವಕರು ಎಚ್ಚರಿಕೆ ನೀಡಿದ್ದಾರೆ. ಈಗಲಾದರೂ ಹಿಂದೂ ದೇಶಭ ಕ್ತರನ್ನು ಗುರುತಿಸಿ, ಅವರನ್ನು ಬಳಕೆ ಮಾಡಿಕೊಂಡು ನಿರ್ಲಕ್ಷ್ಯ ಮಾಡುವ ಬದಲಿಗೆ ಅವರಿಗೂ ಅಧಿಕಾರದ ಅವಕಾಶ ಕೊಡಲು ನಿಮ್ಮಿಂದ ಸಾಧ್ಯವೇ ಎಂದು ಪ್ರಶ್ನೆ ಮಾಡಿದ್ದಾರೆ. ಹಿಂದುಪರ ಸಂಘಟನೆಗಳು, ಹಲವು ವಾಟ್ಸ್ಆಪ್ ಗ್ರೂಪ್ಗಳಲ್ಲಿ ಹರ್ಷನ ಹತ್ಯೆ ವಿಚಾರವೇ ಚರ್ಚೆಯಾಗುತ್ತಿದೆ.







