ಉಳ್ಳಾಲ ಭಾರತ್ ಕಾಲೇಜಿನಲ್ಲಿ ಹಿಜಾಬ್ ವಿವಾದ: ವಿಪಕ್ಷ ಉಪನಾಯಕ ಖಾದರ್ ನೇತೃತ್ವದಲ್ಲಿ ಮಹತ್ವದ ಸಭೆ

ಮಂಗಳೂರು, ಫೆ.25: ಉಳ್ಳಾಲದ ಭಾರತ್ ಸ್ಕೂಲ್‌ನ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ ಎರಡು ದಿನದಿಂದ ಸೃಷ್ಟಿಯಾಗಿರುವ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಹಾಗೂ ಸ್ಥಳೀಯ ಶಾಸಕ, ಮಾಜಿ ಸಚಿವ ಯು.ಟಿ.ಖಾದರ್ ಶುಕ್ರವಾರ ಭಾರತ್ ಸ್ಕೂಲ್ ಮತ್ತು ದ.ಕ.ಜಿಲ್ಲಾಧಿಕಾರಿಯ ಕಚೇರಿಯಲ್ಲಿ ಪ್ರತ್ಯೇಕ ಸಭೆ ನಡೆಸಿ ಸಮಸ್ಯೆಗೆ ಸೌಹಾರ್ದಯುತವಾಗಿ ಪರಿಹಾರ ಕಂಡುಕೊಳ್ಳಲು ನಿರ್ಧರಿಸಲಾಯಿತು.
ಸುಮಾರು 100 ವಿದ್ಯಾರ್ಥಿಗಳಿರುವ ಪಿಯು ಕಾಲೇಜಿನಲ್ಲಿ 50 ಹುಡುಗರು ಮತ್ತು 20 ಹುಡುಗಿಯರ ಸಹಿತ 70 ಮಂದಿ ಮುಸ್ಲಿಂ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಗುರುವಾರ ಎಂದಿನಂತೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶಿಸಲು ನಿರ್ಬಂಧ ಹೇರಲಾಯಿತು. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದರು.
ಹಿಜಾಬ್ ವಿವಾದವು ಬೇರೆ ಬೇರೆ ಸ್ವರೂಪ ಪಡೆಯುತ್ತಿರುವುದನ್ನು ಮನಗಂಡ ಸ್ಥಳೀಯ ಶಾಸಕರೂ ಆಗಿರುವ ಯು.ಟಿ.ಖಾದರ್ ಶುಕ್ರವಾರ ಕಾಲೇಜಿನಲ್ಲಿ ಆಡಳಿತ ಮಂಡಳಿಯ ಜೊತೆ ಮೊದಲು ಚರ್ಚೆ ನಡೆಸಿದರು. ಬಳಿಕ ಡಿಸಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರ ಸಮ್ಮುಖದಲ್ಲಿ ಸಭೆ ನಡೆಸಿದರು.
ಹಿಜಾಬನ್ನು ಯಾವತ್ತೂ ವಿವಾದದ ಅಸ್ತ್ರವಾಗಿಸಬಾರದು. ಇದು ಸಮಸ್ಯೆಯಾಗಿ ಬಿಗಡಾಯಿಸಿದರೆ ಯಾರಿಗೂ ಒಳಿತಲ್ಲ. ಸೌಹಾರ್ದಯುತವಾಗಿ ಪರಿಹಾರ ಕಂಡುಕೊಂಡರೆ ಎಲ್ಲರಿಗೀ ನೆಮ್ಮದಿಯಾಗಲಿದೆ. ಕಾಲೇಜ್ ಕ್ಯಾಂಪಸ್‌ನಲ್ಲಿ ಎಲ್ಲಾ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವಂತಹ ಮತ್ತು ಪರಸ್ಪರ ವಿಶ್ವಾಸದ ವಾತಾವರಣ ರೂಪಿಸಬೇಕು. ಅದಕ್ಕೆ ಶಾಲಾ-ಕಾಲೇಜಿನ ಆಡಳಿತ ಮಂಡಳಿ ಮತ್ತು ಪೋಷಕರು ಕೂಡ ಸಹಕಾರ ನೀಡಬೇಕು ಎಂದು ವಿಪಕ್ಷ ನಾಯಕ ಯು.ಟಿ.ಖಾದರ್ ಮನವಿ ಮಾಡಿದರು.
ಸುದೀರ್ಘ ಚರ್ಚೆಯ ಬಳಿಕ ಹಿಜಾಬ್ ಕುರಿತಂತೆ ಶಿಕ್ಷಣ ಇಲಾಖೆಯ ಮುಖಾಂತರ ಸರಕಾರಕ್ಕೆ ಪತ್ರ ಬರೆದು ಸ್ಪಷ್ಟನೆ ಕೇಳುವುದು ಮತ್ತು ಸರಕಾರದಿಂದ ಉತ್ತರ ಬರುವವರೆಗೆ ಕಾಲೇಜು ಅಭಿವೃದ್ಧಿ ಸಮಿತಿ (ಸಿಡಿಸಿ)ಯು ಈ ಬಗ್ಗೆ ನಿರ್ಧಾರ ಕೈಗೊಳ್ಳುವ ವಿವೇಚನಾಧಿಕಾರವನ್ನು ಬಳಸಿಕೊಳ್ಳಬಹುದು ಎಂದು ಯು.ಟಿ.ಖಾದರ್ ಸಲಹೆ ನೀಡಿದರು.
ಪ್ರತ್ಯೇಕವಾಗಿ ನಡೆದ ಸಭೆಯಲ್ಲಿ ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಉಳ್ಳಾಲ್ ಮತ್ತು ಮೊಗವೀರ ಸಮಾಜದ ಅಧ್ಯಕ್ಷ ಮನೋಜ್ ಸಾಲ್ಯಾನ್ ಹಾಗೂ ತ್ವಾಹಾ ಹಾಜಿ, ಮಯ್ಯದ್ದಿಯಾಕ, ಅಯ್ಯೂಬ್, ಸಲೀಂ ಮಾಸ್ತಿಕಟ್ಟೆ, ಸುಹೈಲ್, ಸದಾನಂದ ಬಂಗೇರ, ದಿವಾಕರ್, ಯಶವಂತ ಕರ್ಕೇರಾ, ರಾಜೇಶ್, ಯಶವಂತ್ ಮತ್ತಿತರರು ಪಾಲ್ಗೊಂಡಿದ್ದರು.







