ಕಡತ ವಿಲೇವಾರಿ ಅಭಿಯಾನ ದ.ಕ. ಜಿಲ್ಲೆಯಲ್ಲಿ 68,925 ಕಡತಗಳ ವಿಲೇವಾರಿ: ಸಚಿವ ಸುನೀಲ್ ಕುಮಾರ್
"ಮಂಗಳೂರಿನಲ್ಲಿ 400 ಕೆ.ವಿ. ಸಬ್‌ಸ್ಟೇಷನ್ ಸ್ಥಾಪನೆ"

ಮಂಗಳೂರು, ಫೆ.26: ದಕ್ಷಿಣ ಕನ್ನಡದಲ್ಲಿ ಫೆ.19ರಿಂದ ಫೆ.28ರವರೆಗೆ ಹಮ್ಮಿಕೊಂಡಿರುವ ಕಡತ ವಿಲೇವಾರಿಯಲ್ಲಿ ಫೆ.25ರವರೆಗೆ ಒಟ್ಟು 68,925 ಕಡತಗಳನ್ನು ವಿಲೇವಾರಿಗೊಳಿಸಲಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಜಿಲ್ಲೆಯಲ್ಲಿ 45 ಇಲಾಖೆಗಳಲ್ಲಿ ಕೊರೋನ ಹಾಗೂ ಇತರ ಕಾರಣಗಳಿಂದಾಗಿ ಒಟ್ಟು 85,384 ಕಡತಗಳು ವಿಲೇವಾರಿಗೆ ಬಾಕಿಯಾಗಿತ್ತು. ಫೆ.25ರವರೆಗೆ ಶೇ.81ರಷ್ಟು ಕಡತಗಳ ವಿಲೇವಾರಿ ಆಗಿವೆ. ಇದರ ಜತೆಗೆ ಪಿಂಚಣಿ , 94ಸಿ ಹಾಗೂ 94ಸಿಸಿ ಸೇರಿದಂತೆ ವಿವಿಧ ಸೌಲಭ್ಯಗಳ 1700 ಹೊಸ ಅರ್ಜಿಗಳನ್ನು ಕೂಡಾ ಪರಿಗಣಿಸಲಾಗಿದೆ. ಫೆ.28ವರೆಗೆ ವಿಲೇವಾರಿ ಕಾರ್ಯ ಮುಂದುವರಿಯಲಿದ್ದು ಬಳಿಕ ತಾಲೂಕು ಮಟ್ಟದಲ್ಲಿ ಕಂದಾಯ ಮೇಳಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ಕಡತ ವಿಲೇವಾರಿ ಕಾರ್ಯದಲ್ಲಿ 85 ಜಿಲ್ಲಾಮಟ್ಟದ ಹಾಗೂ 128 ತಾಲೂಕುಮಟ್ಟದ ಅಧಿಕಾರಿಗಳು ಹಾಗೂ 1,500 ಸರಕಾರಿ ಸಿಬ್ಬಂದಿ ಭಾಗವಹಿಸುತ್ತಿದ್ದಾರೆ. ಜಿಲ್ಲಾಧಿಕಾರಿ, ಜಿ.ಪಂ. ಸಿಇಒ ಅವರು ಈಗಾಗಲೇ ಜಿಲ್ಲಾದ್ಯಂತ ಪ್ರವಾಸ ಮಾಡಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ವಿಶೇಷ ಆಸಕ್ತಿ ವಹಿಸುತ್ತಿದ್ದಾರೆ. ಎಲ್ಲರೂ ದಿನದಲ್ಲಿ ಕೆಲಸದ ಸಮಯದ ಬಳಿಕವೂ ಹೆಚ್ಚುವರಿಯಾಗಿ ಕಾರ್ಯನಿರ್ವಹಿಸಿ ಸಹಕರಿಸುತ್ತಿದ್ದಾರೆ ಎಂದರು.
ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಉಪಸ್ಥಿತರಿದ್ದರು.
ಮಂಗಳೂರಿನಲ್ಲಿ 400 ಕೆ.ವಿ. ಸಬ್‌ಸ್ಟೇಷನ್
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ಯುತ್‌ಗೆ ಬೇಡಿಕೆಗಳು ಹೆಚ್ಚುತ್ತಿದ್ದು ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ 400 ಕೆ.ವಿ. ವಿದ್ಯುತ್ ಸಬ್ ಸ್ಟೇಷನ್ ಸ್ಥಾಪಿಸಲಾಗುವುದು. ಈ ಬಗ್ಗೆ ಈಗಾಗಲೇ ಮೂರು ಕಡೆ ಜಾಗಗಳನ್ನು ಪರಿಶೀಲಿಸಿದ್ದು, ಜಾಗ ಅಂತಿಮಗೊಳಿಸಿ ಶೀಘ್ರ ನಿರ್ಮಾಣ ಕಾರ್ಯ ಆರಂಭಿಸಲಾಗುವುದು. ಜಿಲ್ಲೆಯಲ್ಲಿ ಸದ್ಯ 400 ಕೆ.ವಿ.ಸಾಮರ್ಥ್ಯದ ಸಬ್‌ಸ್ಟೇಷನ್ ಇಲ್ಲ ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದರು.