ವಾರ್ತಾಭಾರತಿ ಪ್ರಧಾನ ಕಚೇರಿಗೆ ಸಿದ್ದರಾಮಯ್ಯ ಭೇಟಿ

ಮಂಗಳೂರು: ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಶನಿವಾರ ವಾರ್ತಾಭಾರತಿ ಪ್ರಧಾನ ಕಚೇರಿಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಪತ್ರಿಕಾ ಬಳಗದೊಂದಿಗೆ ಬೆರೆತ ಅವರು ವಸ್ತುನಿಷ್ಠ, ಜನಪರ ಮಾಧ್ಯಮವಾಗಿ ವಾರ್ತಾಭಾರತಿ ಪತ್ರಿಕೆಯ ಪಾತ್ರವನ್ನು ಸ್ಮರಿಸಿ, ಅಭಿನಂದಿಸಿದರು. "ವಾರ್ತಾಭಾರತಿ ಕಳೆದೆರಡು ದಶಕಗಳಿಂದ ವಸ್ತುನಿಷ್ಠ ಮಾಧ್ಯಮವಾಗಿ ಕಾರ್ಯ ನಿರ್ವಹಿಸುತ್ತಾ ಜನರ ಧ್ವನಿಯಾಗಿ ಬೆಳೆದು ಬಂದಿದೆ. ಮಾಧ್ಯಮಗಳು ನಿಜವಾಗಿ ಏನನ್ನು ಮಾಡಬೇಕೋ ಅದನ್ನೇ ವಾರ್ತಾಭಾರತಿ ಮಾಡುತ್ತಾ ಬಂದಿದೆ." ಎಂದು ಅವರು ಹೇಳಿದರು.
ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಪತ್ರಿಕಾ ಸಮೂಹದ ವಿವಿಧ ವಿಭಾಗಗಳನ್ನು ಹಾಗು ಮುದ್ರಣ ಹಾಗು ಆನ್ ಲೈನ್ ಮಾಧ್ಯಮದ ವಿವಿಧ ವೇದಿಕೆಗಳಲ್ಲಿ ವಾರ್ತಾಭಾರತಿಯ ಕಾರ್ಯವೈಖರಿ ಹಾಗು ವ್ಯಾಪ್ತಿಯನ್ನು ವಿವರಿಸಿದರು.
ದಿ ಕಮ್ಯುನಿಟಿ ಮೀಡಿಯಾ ಟ್ರಸ್ಟ್ ನ ಟ್ರಸ್ಟಿ ಯಾಸೀನ್ ಮಲ್ಪೆ ಅವರು ಸಿದ್ದರಾಮಯ್ಯ ಅವರಿಗೆ ಪತ್ರಿಕಾ ಬಳಗದ ಪರವಾಗಿ ಸ್ಮರಣಿಕೆ ನೀಡಿದರು. ಮಂಗಳೂರು ಬ್ಯುರೋ ಮುಖ್ಯಸ್ಥ ಬಿ. ಎನ್ . ಪುಷ್ಪರಾಜ್ ಸ್ವಾಗತಿಸಿದರು.
ವಿಪಕ್ಷ ಉಪನಾಯಕ ಯುಟಿ ಖಾದರ್, ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ಮಾಜಿ ಶಾಸಕರಾದ ವಸಂತ ಬಂಗೇರ, ಜೆ ಆರ್ ಲೋಬೋ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಕಾಂಗ್ರೆಸ್ ಅಲ್ಪಸಂಖ್ಯಾತ ಜಿಲ್ಲಾ ಘಟಕದ ಅಧ್ಯಕ್ಷ ಶಾಹುಲ್ ಹಮೀದ್, ಕಾರ್ಪೊರೇಟರ್ ಅಬ್ದುಲ್ ರವೂಫ್, ಅಬ್ದುಲ್ ಲತೀಫ್, ಕಾಂಗ್ರೆಸ್ ಮುಖಂಡರಾದ ಜಿ ಎ ಬಾವಾ, ಲುಕ್ಮಾನ್ ಬಂಟ್ವಾಳ್, ಪ್ರತಿಭಾ ಕುಳಾಯಿ, ಕವಿತಾ ಸನಿಲ್ ಮತ್ತಿತರರು ಉಪಸ್ಥಿತರಿದ್ದರು.