ಹತ್ಯೆಗೀಡಾದ ದಲಿತ ವ್ಯಕ್ತಿ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರಕ್ಕೆ ವಸಂತ ಬಂಗೇರ ಆಗ್ರಹ
ಎಫ್‌ಐಆರ್ ದಾಖಲಿಸದಂತೆ ಬೆದರಿಕೆ: ಮೃತ ದಿನೇಶ್ ತಾಯಿ ಆರೋಪ

ಮಂಗಳೂರು, ಫೆ.26: ಬೆಳ್ತಂಗಡಿಯ ಕನ್ಯಾಡಿಯಲ್ಲಿ ಹತ್ಯೆಗೀಡಾದ ದಲಿತ ವ್ಯಕ್ತಿ ದಿನೇಶ್ ಕುಟುಂಬಕ್ಕೆ ರಾಜ್ಯ ಸರ್ಕಾರ ತಕ್ಷಣ ಕನಿಷ್ಠ 25 ಲಕ್ಷ ರೂ. ಪರಿಹಾರ ಘೋಷಣೆ ಮಾಡಬೇಕು ಎಂದು ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ ಆಗ್ರಹಿಸಿದ್ದಾರೆ.
ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ ಕೃಷ್ಣ ಎಂಬಾತ ಹಲ್ಲೆ ನಡೆಸಿ ಈ ಕೊಲೆ ಮಾಡಿದ್ದು, ಅದರ ದೃಶ್ಯಾವಳಿಗಳು ಸಿಸಿಟಿವಿಯಲ್ಲೂ ದಾಖಲಾಗಿವೆ. ಪೊಲೀಸರು ಇದೀಗ ಆರೋಪಿಯನ್ನು ಬಂಧಿಸಿರುವುದು ಸಮಾಧಾನ ತರಿಸಿದೆ. ಆದರೆ ಮೃತ ದಿನೇಶ್ ಕಡು ಬಡವರಾಗಿದ್ದು, ಅವರ ಮೂವರು ಮಕ್ಕಳು, ಪತ್ನಿ, ತಾಯಿ ಕಂಗೆಟ್ಟಿದ್ದಾರೆ. ಕೂಡಲೆ ಸರ್ಕಾರ ಪರಿಹಾರ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಹಿಂದೂಗಳ ಹತ್ಯೆ ಸಂದರ್ಭ ರಾಜಕೀಯ ಮಾಡುವ ಬಿಜೆಪಿಯವರು ಈ ಕೊಲೆಯ ಬಗ್ಗೆ ಏಕೆ ಮೌನ ವಹಿಸಿದ್ದಾರೆ? ಬಿಜೆಪಿಯ ಹಿಂದೂಪರ ಎನ್ನುವ ನಿಲುವು ಈಗ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ ವಸಂತ ಬಂಗೇರ, ಈ ವಿಚಾರವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ತರಲಾಗಿದೆ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಗಮನಕ್ಕೂ ತರಲಾಗುವುದು. ಮೃತ ದಿನೇಶ್ ಅವರ ಕುಟುಂಬಕ್ಕೆ ಕಾಂಗ್ರೆಸ್‌ನಿಂದ ನಿಧಿ ಸಂಗ್ರಹ ಮಾಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ದಿನೇಶ್ ಅವರ ತಾಯಿ ಪದ್ಮಾವತಿ ಮಾತನಾಡಿ, ಆರೋಪಿ ಕೃಷ್ಣ ಜಾಗದ ವಿಚಾರ ಎತ್ತಿ ನನ್ನ ಮಗನಿಗೆ ದೊಣ್ಣೆಯಿಂದ ಹೊಡೆದು ಒದ್ದು ತೀವ್ರ ಹಲ್ಲೆ ನಡೆಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಕೃಷ್ಣನ ಸಹೋದರ ಎಫ್‌ಐಆರ್ ದಾಖಲಿಸದಂತೆ ಬೆದರಿಕೆ ಹಾಕಿದ್ದ. ಆದರೂ ದೂರು ದಾಖಲಿಸಿದ್ದೇನೆ. ಈ ಹತ್ಯೆಗೆ ನ್ಯಾಯ ಸಿಗಬೇಕು ಎಂದು ಕಣ್ಣೀರು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ರಂಜನ್ ಗೌಡ, ಶಾಹುಲ್ ಹಮೀದ್, ಶೇಖರ್ ಕುಕ್ಕೇಡಿ, ಕೇಶವ್ ಪಿ., ಮನೋಹರ್ ಕುಮಾರ್ ಮತ್ತಿತರರಿದ್ದರು.
