ರಶ್ಯಾ ಯೋಧರನ್ನು ತಡೆಯಲು ಸೇತುವೆಯೊಂದಿಗೆ ತನ್ನನ್ನು ಸ್ಫೋಟಿಸಿಕೊಂಡ ಉಕ್ರೇನ್ ಯೋಧ

photo courtesy:twitter
ಕೀವ್, ಫೆ.26: ರಶ್ಯಾ ಪಡೆ ಮುನ್ನುಗ್ಗುವುದನ್ನು ತಡೆಯಲು ಉಕ್ರೇನ್ನ ಯೋಧನೊಬ್ಬ ತನ್ನನ್ನು ಸ್ಫೋಟಿಸಿಕೊಳ್ಳುವ ಮೂಲಕ ಸೇತುವೆಯನ್ನು ಧ್ವಂಸಗೊಳಿಸಿದ ಘಟನೆ ನಡೆದಿದ್ದು ಈ ಯೋಧನ ಬಲಿದಾನವನ್ನು ಉಕ್ರೇನ್ನ ಸೇನೆ ಶ್ಲಾಘಿಸಿದೆ.
ಕ್ರಿಮಿಯಾ ಮತ್ತು ಉಕ್ರೇನ್ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ದಕ್ಷಿಣದ ಖೆರ್ಸಾನ್ ಪ್ರಾಂತದಲ್ಲಿರುವ ಹೆನಿಚೆಸ್ಕ್ ಸೇತುವೆಯ ರಕ್ಷಣೆಗೆ ಸ್ಕಕುನ್ ವೊಲೊಡಿಮಿರೊವಿಚ್ನನ್ನು ಉಕ್ರೇನ್ ಸೇನೆ ನಿಯೋಜಿಸಿತ್ತು. ಸೇತುವೆಯಲ್ಲಿ ನೆಲಬಾಂಬ್ ಇರಿಸಿ ವೊಲೊಡಿಮಿರೊವಿಚ್ ಕಾದು ಕುಳಿತಿದ್ದರು. ಆದರೆ ರಶ್ಯಾದ ಪಡೆ ಹಠಾತ್ತಾಗಿ ಮುನ್ನುಗ್ಗಿ ಬಂದಾಗ, ಸೇತುವೆಯಿಂದ ದೂರ ಸರಿದು ನೆಲಬಾಂಬ್ ಸ್ಫೋಟಿಸುವಷ್ಟು ಸಮಯವಿಲ್ಲ ಎಂಬುದನ್ನು ಗಮನಿಸಿದ ವೊಲೊಡಿಮಿರೊವಿಚ್, ಸೇತುವೆಯೊಂದಿಗೆ ತನ್ನನ್ನು ಸ್ಫೋಟಿಸಿಕೊಂಡು ರಶ್ಯಾದ ಸೇನೆಯ ಆಕ್ರಮಣಕ್ಕೆ ತಡೆಯೊಡ್ಡಿದ್ದಾನೆ.
ಈ ಮೂಲಕ ರಶ್ಯಾದ ಸೇನೆಯ ಧಾವಂತವನ್ನು ಗಮನಾರ್ಹ ಮಟ್ಟದಲ್ಲಿ ವಿಳಂಬಿಸಿ ತನ್ನ ಬಲಿದಾನದ ಮೂಲಕ ರಾಷ್ಟ್ರೀಯ ಹೀರೊ ಆಗಿದ್ದಾನೆ ಎಂದು ಉಕ್ರೇನ್ನ ಸೇನೆ ಶ್ಲಾಘಿಸಿದೆ.
ನಮ್ಮ ದೇಶಕ್ಕೆ ಎದುರಾದ ಈ ಸಂಕಷ್ಟದ ದಿನದಲ್ಲಿ, ಎಲ್ಲಾ ದಿಕ್ಕುಗಳಿಂದಲೂ ರಶ್ಯಾದ ಆಕ್ರಮಣಕಾರರು ಮುನ್ನುಗ್ಗಿ ಬರುತ್ತಿದ್ದಾಗ, ಕ್ರಿಮಿಯಾದ ಪ್ರಮುಖ ಸಂಪರ್ಕ ಕೊಂಡಿಯಾದ ಹೆನಿಚೆಸ್ಕ್ ಸೇತುವೆಯಲ್ಲಿ ನಿಯೋಜಿಸಲ್ಪಟ್ಟಿದ ನಮ್ಮ ಯೋಧ ವೊಲೊಡಿಮಿರಚ್ ತನ್ನ ಧೀರ ಕಾರ್ಯದಿಂದ ರಶ್ಯಾದ ಮುನ್ನುಗ್ಗುವಿಕೆಯನ್ನು ಗಮನಾರ್ಹ ಮಟ್ಟದಲ್ಲಿ ವಿಳಂಬಿಸಿದ್ದಾರೆ ಎಂದು ಸೇನಾಪಡೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.
ಯುದ್ಧ ವಿರೋಧಿ ಒಕ್ಕೂಟ ಕಾರ್ಯನಿರ್ವಹಿಸುತ್ತಿದೆ: ಉಕ್ರೇನ್ ಅಧ್ಯಕ್ಷರ ಟ್ವೀಟ್
ರಶ್ಯಾದ ಪಡೆಗಳು ಉಕ್ರೇನ್ನ ರಾಜಧಾನಿ ಕೀವ್ಗೆ ನಿಕಟವಾಗುತ್ತಿರುವಂತೆಯೇ, ಮಿತ್ರರಾಷ್ಟ್ರಗಳು ತಮ್ಮ ದೇಶಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದು ಶೀಘ್ರ ಸೇನೆಯ ಕೈಸೇರಲಿದೆ. ಯುದ್ಧ ವಿರೋಧಿ ಒಕ್ಕೂಟ ಈಗ ಕಾರ್ಯನಿರ್ವಹಿಸುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆಂಸ್ಕಿ ಹೇಳಿದ್ದಾರೆ.
ಶನಿವಾರ ಬೆಳಿಗ್ಗೆ ಫ್ರಾನ್ಸ್ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿದ್ದು, ರಾಜತಾಂತ್ರಿಕ ಉಪಕ್ರಮದಲ್ಲಿ ಹೊಸ ದಿನವೊಂದು ಆರಂಭವಾಗಿದೆ. ನಮ್ಮ ಪಾಲುದಾರರಿಂದ ಪೂರೈಕೆಯಾಗಿರುವ ಆಯುಧ , ಶಸ್ತ್ರಾಸ್ತ್ರ ಮತ್ತು ಇತರ ಉಪಕರಣಗಳು ಶೀಘ್ರ ಕೈಸೇರಲಿವೆ ಎಂದವರು ಟ್ವೀಟ್ ಮಾಡಿದ್ದಾರೆ.
ಈ ಮಧ್ಯೆ, ರಶ್ಯಾದ ಆಕ್ರಮಣವನ್ನು ಖಂಡಿಸಿ ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಮಂಡಿಸಿದ್ದ ನಿರ್ಣಯದ ಪರ 15 ಸದಸ್ಯ ದೇಶಗಳು ಮತ ಚಲಾಯಿಸಿದರೆ, ಚೀನಾ, ಭಾರತ ಮತ್ತು ಯುಎಇ ಮತ ಚಲಾಯಿಸದೆ ದೂರ ಉಳಿದಿವೆ. ರಶ್ಯಾ ತನ್ನ ವೀಟೊ ಹಕ್ಕು ಚಲಾಯಿಸಿ ಈ ನಿರ್ಣಯವನ್ನು ತಡೆಹಿಡಿದಿದೆ.
ಕೀವ್ನತ್ತ ಮುನ್ನುಗ್ಗಿ ಬರುತ್ತಿರುವ ರಶ್ಯಾದ ಪಡೆಯನ್ನು ಎದುರಿಸಲು ಸೇನೆಯ ಜತೆ ನಾಗರೀಕರೂ ಕೈಜೋಡಿಸಿದ್ದಾರೆ. ರಶ್ಯಾದ ದಾಳಿಯಲ್ಲಿ ಕನಿಷ್ಟ 198 ಉಕ್ರೇನ್ ಪ್ರಜೆಗಳು ಮೃತರಾಗಿರುವುದಾಗಿ ಉಕ್ರೇನ್ನ ಆರೋಗ್ಯ ಸಚಿವ ವಿಕ್ಟರ್ ಲಿಯಶ್ಕೊ ಮಾಹಿತಿ ನೀಡಿದ್ದಾರೆ.
ಉಕ್ರೇನ್ ಪಡೆಗಳಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿದ್ದು ಆಕ್ರಮಣಕಾರಿ ರಶ್ಯಾದ ಸೇನೆಗೆ ವ್ಯಾಪಕ ಹಾನಿಯಾಗಿದೆ ಎಂದು ನೇಟೊ ಮುಖ್ಯಸ್ಥ ಜೆನ್ಸ್ ಸ್ಟಾಲ್ಟನ್ಬರ್ಗ್ ಹೇಳಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ತಮ್ಮ ಪರವಾಗಿ ಅಭೂತಪೂರ್ವ ಪ್ರಮಾಣದಲ್ಲಿ ಸದಸ್ಯ ದೇಶಗಳು ಬೆಂಬಲ ಸೂಚಿಸಿರುವುದು ವಿಶ್ವವೇ ನಮ್ಮೊಂದಿಗಿದೆ ಎಂಬುದರ ಸಂಕೇತವಾಗಿದೆ. ಗೆಲುವು ನಮ್ಮದೇ ಎಂದು ಉಕ್ರೇನ್ ಅಧ್ಯಕ್ಷ ಝೆಲೆಂಸ್ಕಿ ಟ್ವೀಟ್ ಮಾಡಿದ್ದಾರೆ.
ಈ ಮಧ್ಯೆ, ಸಂಧಾನ ಮಾತುಕತೆಗೆ ಸೂಕ್ತ ಸ್ಥಳ ಮತ್ತು ದಿನಾಂಕ ನಿಗದಿಗೊಳಿಸಲು ರಶ್ಯಾ- ಉಕ್ರೇನ್ ಚರ್ಚೆ ಮುಂದುವರಿಸಿದೆ ಎಂದು ಉಕ್ರೇನ್ ಅಧ್ಯಕ್ಷರ ವಕ್ತಾರ ಸೆರ್ಗೆಯ್ ನಿಕಿಫೊರೊವ್ ಹೇಳಿದ್ದಾರೆ. ಬೆಲಾರೂಸ್ ರಾಜಧಾನಿ ಮಿನ್ಸ್ಕ್ನಲ್ಲಿ ಮಾತುಕತೆಗೆ ರಶ್ಯಾ ಬಯಸುತ್ತಿದೆ. ಆದರೆ ಪೋಲಂಡ್ ರಾಜಧಾನಿ ವಾರ್ಸಾದಲ್ಲಿ ನಡೆಯಬೇಕೆಂದು ಉಕ್ರೇನ್ ಪ್ರಸ್ತಾವಿಸಿದೆ ಎಂದವರು ಹೇಳಿದ್ದಾರೆ.
ಆದರೆ ರಶ್ಯಾವು ಬಂದೂಕಿನ ಮೊನೆಯಿಂದ ರಾಜತಾಂತ್ರಿಕ ಕ್ರಮ ಮುಂದುವರಿಸಲು ಬಯಸುತ್ತಿದೆ ಎಂದು ಅಮೆರಿಕದ ವಿದೇಶ ವ್ಯವಹಾರ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಟೀಕಿಸಿದ್ದಾರೆ. ಮಾತುಕತೆಗೂ ಮುನ್ನ ಉಕ್ರೇನ್ ಮೇಲಿನ ಬಾಂಬ್ ದಾಳಿಯನ್ನು ರಶ್ಯಾ ಅಂತ್ಯಗೊಳಿಸಲಿ ಎಂದವರು ಆಗ್ರಹಿಸಿದ್ದಾರೆ.
ರಶ್ಯಾದ 1 ಸಾವಿರಕ್ಕೂ ಅಧಿಕ ಯೋಧರನ್ನು ಹತ್ಯೆ ಮಾಡಿರುವುದಾಗಿ ಉಕ್ರೇನ್ ಹೇಳಿದೆ. ಸೇನೆಗೆ ಆಗಿರುವ ನಷ್ಟದ ಬಗ್ಗೆ ರಶ್ಯಾ ಯಾವುದೇ ಮಾಹಿತಿ ನೀಡಿಲ್ಲ. ಯುದ್ಧದಿಂದ 25 ನಾಗರಿಕರು ಮೃತಪಟ್ಟಿದ್ದು 102 ಮಂದಿ ಗಾಯಗೊಂಡಿರುವುದಾಗಿ ವಿಶ್ವಸಂಸ್ಥೆ ಹೇಳಿದೆ.







