ಉಡುಪಿ: ಜಿಲ್ಲೆಯಲ್ಲಿ ಶನಿವಾರ 4 ಮಂದಿಗೆ ಕೊರೋನ ಪಾಸಿಟಿವ್
ಉಡುಪಿ: ಜಿಲ್ಲೆಯಲ್ಲಿ ಶನಿವಾರ 4 ಮಂದಿಗೆ ಕೋವಿಡ್ ದೃಢಪಟ್ಟಿದೆ. ಎರಡು ತಿಂಗಳ ಬಳಿಕ ಜಿಲ್ಲೆಯಲ್ಲಿ ಇದು ಮತ್ತೆ ಏಕಂಕಿಗೆ ಇಳಿದಂತಾಗಿದೆ. ಇಂದು 26 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಸದ್ಯ ಜಿಲ್ಲೆಯಲ್ಲಿ ಚಿಕಿತ್ಸೆಯಲ್ಲಿರುವವರ ಸಂಖ್ಯೆ 104 ಆಗಿದೆ.
ಶನಿವಾರ ಉಡುಪಿಯ 67 ವರ್ಷ ಪ್ರಾಯದ ಹಿರಿಯರೊಬ್ಬರು ಕೋವಿಡ್‌ಗೆ ಬಲಿಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್‌ನಿಂದ ಸತ್ತವರ ಸಂಖ್ಯೆ 544ಕ್ಕೇರಿದೆ. ಫೆ.19ರಂದು ಕೋವಿಡ್‌ನ ಗಂಭೀರ ಗುಣಲಕ್ಷಣದೊಂದಿಗೆ ಖಾಸಗಿ ಆಸ್ಪತ್ರೆಗೆ ದಾಖಲಾದ ಇವರು 24 ಗಂಟೆಯೊಳಗೆ ಮೃತಪಟ್ಟರು. ಇವರಿಗೆ ಹೃದಯ ಸಮಸ್ಯೆ, ಮಧುಮೇಹದಂಥ ಇತರ ಸಮಸ್ಯೆಗಳೂ ಇದ್ದವು.
ಶನಿವಾರ ಒಬ್ಬ ಪುರುಷ ಹಾಗೂ ಮೂವರು ಮಹಿಳೆಯರು ಪಾಸಿಟಿವ್ ಬಂದಿದ್ದು, ಇವರಲ್ಲಿ ಮೂವರು ಉಡುಪಿ ಹಾಗೂ ಒಬ್ಬರು ಕುಂದಾಪುರ ತಾಲೂಕಿನವರು. ಈವರೆಗೆ ಪಾಸಿಟಿವ್ ಬಂದವರಲ್ಲಿ 15 ಮಂದಿ ವಿವಿಧ ಆಸ್ಪತ್ರೆ ಗಳಲ್ಲಿ ಚಿಕಿತ್ಸೆ ಪಡೆಯುತಿದ್ದು, ಇವರಲ್ಲಿ ಐವರು ವೆಂಟಿಲೇಟರ್ ಹಾಗೂ ಮೂವರು ಐಸಿಯುನಲ್ಲಿದ್ದಾರೆ.
ಶನಿವಾರ 26 ಮಂದಿ ರೋಗಮುಕ್ತರಾಗಿದ್ದು, ಕೊರೋನದಿಂದ ಜ.1ರ ನಂತರ ಚೇತರಿಸಿಕೊಂಡವರ ಸಂಖ್ಯೆ 18372ಕ್ಕೇರಿದೆ. ನಿನ್ನೆ ಜಿಲ್ಲೆಯ ಒಟ್ಟು 1473 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಜ.1ರ ಬಳಿಕ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 18,384ಕ್ಕೇರಿದೆ.
227 ಮಂದಿಗೆ ಲಸಿಕೆ : ಜಿಲ್ಲೆಯಲ್ಲಿ ಇಂದು ಒಟ್ಟು 227 ಮಂದಿ ಕೋವಿಡ್ ಗಿರುವ ಲಸಿಕೆಯನ್ನು ಪಡೆದಿದ್ದಾರೆ. ಇವರಲ್ಲಿ 29 ಮಂದಿ ಹಿರಿಯ ನಾಗರಿಕರು ಸೇರಿದಂತೆ ಒಟ್ಟು 43 ಮಂದಿ ಮುನ್ನೆಚ್ಚರಿಕೆಯ ಒಂದು ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಉಳಿದಂತೆ 15 ಮಂದಿ ಮೊದಲ ಡೋಸ್ ಹಾಗೂ 169 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.