ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ: ಸಂಪರ್ಕಾಧಿಕಾರಿ ಬಂಧಿಸಲು ಆಗ್ರಹ
ಕುಂದಾಪುರ: ಕುಂದಾಪುರ ಬಿ.ಬಿ.ಹೆಗ್ಡೆ ಕಾಲೇಜು ವಿದ್ಯಾರ್ಥಿನಿ ಯರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ನೈಕಂಬ್ಳಿ ನಾಗರಾಜ ಶೆಟ್ಟಿಯನ್ನು ಬಂಧಿಸಬೇಕೆಂದು ಅಲ್ಲಿನ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟಿಸಿದರೂ ಕ್ರಮವಹಿಸದಿರುವುದು ಖಂಡನೀಯ ಎಂದು ಡಿವೈಎಫ್ಐ ಹೇಳಿದೆ.
ಆರೋಪಿತ ವ್ಯಕ್ತಿ ಪ್ರಭಾವಿ ರಾಜಕೀಯ ವ್ಯಕ್ತಿಗಳ ಬೆಂಬಲ ಇರುವುದರಿಂದ ಸಾಕ್ಷ್ಯಗಳಿದ್ದರೂ ರಾಜಕೀಯಕಾರಣದಿಂದ ರಕ್ಷಿಸಿ ವಿದ್ಯಾರ್ಥಿನಿಯರಿಗೆ ಅನ್ಯಾಯ ಮಾಡಲಾಗುತ್ತಿದೆ. ಈ ಬಗ್ಗೆ ಪೋಲಿಸ್ ಇಲಾಖೆಯು ಸ್ವಯಂ ದೂರು ದಾಖಲಿಸಿಕೊಂಡು ಆರೋಪಿತನನ್ನು ಬಂಧಿಸಬೇಕು. ಇಂತಹ ದುಷ್ಕೃತ್ಯ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸದೇ ಇದ್ದರೆ ಇಂತಹ ಕತ್ಯಗಳನ್ನು ಎಸಗುವ ಕಾಮುಕರಿಗೆ ಇನ್ನಷ್ಟು ಕತ್ಯ ಎಸಗಲು ಬಲ ಬರುವ ಸಾಧ್ಯತೆ ಇರುತ್ತದೆ ಎಂದು ಡಿವೈಎಫ್‌ಐ ಅಭಿಪ್ರಾಯ ಪಟ್ಟಿದೆ.
ವಿದ್ಯಾರ್ಥಿಗಳ ನ್ಯಾಯಯುತ ಬೇಡಿಕೆಗಾಗಿ ನಡೆಸುವ ಹೋರಾಟವನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಬೆಂಬಲಿಸುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.