ನಿಟ್ಟೆ ವಿವಿಯ ತುಳುಜ್ಞಾತಿ ಪದ ಸಂಚಯಕ್ಕೆ ಪ್ರಶಸ್ತಿ ಪ್ರದಾನ

ಮಂಗಳೂರು, ಫೆ.26:ನಿಟ್ಟೆ ವಿಶ್ವವಿದ್ಯಾನಿಲಯದ ತುಳುಜ್ಞಾತಿ ಪದಸಂಚಯಕ್ಕೆ ಪ್ರತಿಷ್ಠಿತ ಡಾ. ಹರ್ಮನ್ ಗುಂಡರ್ಟ್ ರಾಷ್ಟ್ರೀಯ ಪ್ರಶಸ್ತಿಯನ್ನು ಕೊಯಂಬತ್ತೂರಿನ ಭಾರತೀಯಾರ್ ಯುನಿವರ್ಸಿಟಿಯಲ್ಲಿ ಶುಕ್ರವಾರ ನಡೆದ ದ್ರಾವಿಡ ಭಾಷಾಶಾಸ್ತ್ರಜ್ಞರ 48ನೇ ಅಖಿಲ ಭಾರತೀಯ ಸಮ್ಮೇಳನದಲ್ಲಿ ಪ್ರದಾನ ಮಾಡಲಾಯಿತು.
ತುಳುಜ್ಞಾತಿ ಪದಸಂಚಯ ಪುಸ್ತಕ ಸಂಯೋಜಕ ಹಾಗೂ ಸಂಪಾದಕ ಡಾ. ಸಾಯಿಗೀತಾ ನಿಟ್ಟೆ ವಿಶ್ವವಿದ್ಯಾನಿಲಯದ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು. ತುಳುಜ್ಞಾತಿ ಪದಸಂಚಯವು ತುಳು, ಕನ್ನಡ, ಕೊಡವ, ಮಲಯಾಳಂ, ತಮಿಳ್ ಮತ್ತು ತೆಲುಗು ಭಾಷಾ ಪದಕೋಶವಾಗಿದ್ದು, ಸಂಪಾದಕರಾಗಿ ಡಾ. ಪದ್ಮನಾಭ ಕೇಕುಣ್ಣಾಯಾ, ಡಾ. ವಾಮನ ನಂದಾವರ ಬೆನೆಟ್ ಅಮ್ಮನ್ನ, ತಾಂತ್ರಿಕ ಸಹಾಯಕರಾಗಿ ಪ್ರದ್ಯೋತ್ ಹೆಗ್ಡೆ ಸಹಕರಿಸಿದ್ದರು.
ತಿರುವನಂತಪುರದ ದ್ರವೀಡಿಯನ್ ಲಿಂಗ್ವಿಸ್ಟಿಕ್ ಅಸೋಸಿಯೇಶನ್ ಆಫ್ ಇಂಡಿಯಾ(ಡಿ.ಎಲ್.ಎ) ವತಿಯಿಂದ ಪ್ರಸಿದ್ದ ಪದಕೋಶ ಪುಸ್ತಕಗಳಿಗೆ ಡಾ. ಹರ್ಮನ್ ಗುಂಡರ್ಟ್ ರಾಷ್ಟ್ರೀಯ ಪ್ರಶಸ್ತಿ ನೀಡಲಾಗುತ್ತಿದೆ. ಡಾ. ಹರ್ಮನ್ ಗುಂಡರ್ಟ್ 19ನೇ ಶತಮಾನದ ಪ್ರಸಿದ್ದ ಭಾಷಾ ಪಂಡಿತನಾಗಿದ್ದು, ಮಲಯಾಳಂ-ಇಂಗಿಷ್ ಪದಕೋಶ ರಚಿಸಿ ಪ್ರಖ್ಯಾತರಾಗಿದ್ದರು. ಇವರ ಸಾಧನಾ ನೆನಪಿಗಾಗಿ ಡಿಎಲ್‌ಎ ಸಂಸ್ಥೆಯು ಡಾ. ಹರ್ಮನ್ ಗುಂಡರ್ಟ್ ಹೆಸರಿನಲ್ಲಿ ರಾಷ್ಟ್ರೀಯ ಪ್ರಶಸ್ತಿ ನೀಡುತ್ತಿದೆ.
ನಿಟ್ಟೆ ವಿಶ್ವವಿದ್ಯಾನಿಲಯ ಹೊರತಂದಿರುವ ತುಳುಜ್ಞಾತಿ ಪದಸಂಚಯ ಪದಕೋಶವು ತುಳು, ಕನ್ನಡ, ಕೊಡವ, ಮಲಯಾಳಂ, ತಮಿಳ್ ಮತ್ತು ತೆಲುಗು ಭಾಷಾ ಪದಕೋಶವಾಗಿದೆ.







