ಕಾನೂನಾತ್ಮಕ ಸಮಸ್ಯೆ ಬಗೆಹರಿದರೆ ಕೇಂದ್ರದಿಂದ ಸೂಕ್ತ ನಿರ್ಧಾರ: ಸಂಸದ ನಳಿನ್
ಸುರತ್ಕಲ್ -ಹೆಜಮಾಡಿ ಟೋಲ್ ಪ್ಲಾಝಾ ವಿಲೀನ

ಮಂಗಳೂರು, ಫೆ. 26: ಸುರತ್ಕಲ್ ಟೋಲ್ ಪ್ಲಾಝಾವನ್ನು ಹೆಜಮಾಡಿ ಟೋಲ್ ಪ್ಲಾಝಾ ಜತೆಯಲ್ಲಿ ವಿಲೀನ ಮಾಡುವ ಬಗ್ಗೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಹೋಗಿದ್ದು, ಕಾನೂನಾತ್ಮಕ ಸಮಸ್ಯೆಗಳು ಇರುವ ಕಾರಣ ವಿಲೀನ ಆಗಿಲ್ಲ. ಈ ಬಗ್ಗೆ ಈಗಾಲೇ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದು, ಕಾನೂನಾತ್ಮಕ ಸಮಸ್ಯೆಗಳು ಬಗೆಹರಿದರೆ ಕೇಂದ್ರ ಸರಕಾರ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದ್ದಾರೆ.
ನಗರದ ಹೋಟೆಲ್ ಓಶಿಯನ್ ಪರ್ಲ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುರತ್ಕಲ್ ಟೋಲ್ ಗೇಟ್‌ನ್ನು ತಾತ್ಕಾಲಿಕ ನೆಲೆಯಲ್ಲಿ ಮಾಡಲಾಗಿದೆ ಎಂಬುದು ಸುಳ್ಳು. ತಾತ್ಕಾಲಿಕ ಎಂಬುದು ಎಲ್ಲೂ ದಾಖಲೆಯಲ್ಲಿ ಇಲ್ಲ. ಕೇಂದ್ರ ಸರಕಾರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಗೆಜೆಟ್ ನೋಟಿಫಿಕೇಶನ್‌ನಲ್ಲೇ ಈ ಟೋಲ್ ಬಗ್ಗೆ ದಾಖಲೆ ಇದೆ. ನಿಯಮಾವಳಿ ಮೂಲಕವೇ ಟೋಲ್ ಸ್ಥಾಪನೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
60 ಕಿಮೀ ಒಳಗಡೆ ಟೋಲ್ ಇರಬೇಕು ಎಂಬ ನಿಯಮವಿದ್ದರೂ ವಿಶೇಷ ಪ್ರಕರಣಗಳಲ್ಲಿ ಅದಕ್ಕಿಂತ ಕಡಿಮೆ ದೂರದಲ್ಲೂ ಟೋಲ್ ಅಳವಡಿಸಲು ಅವಕಾಶ ಇದೆ. ಬ್ರಹ್ಮರಕೂಟ್ಲು- ಸುರತ್ಕಲ್ ನಡುವೆ ರಾಷ್ಟ್ರೀಯ ಹೆದ್ದಾರಿ ಯೋಜನಾ ವೆಚ್ಚ 383 ಕೋಟಿ ರೂ. ಖರ್ಚು ಆಗಿದೆ. ಇದು ರಿಕವರಿ ಆಗುವವರೆಗೂ ಸುರತ್ಕಲ್ ಟೋಲ್ ಇರಬೇಕಾಗುತ್ತದೆ. ಸದ್ಯ 229 ಕೋಟಿ ರೂ. ಮಾತ್ರ ಸಂಗ್ರಹವಾಗಿದೆ. ಉಳಿದ ಮೊತ್ತ ಸಂಗ್ರಹ ಆಗುವವರೆಗೂ ಟೋಲ್ ಇರಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.
ವಸೂಲಾಗುವ ಟೋಲ್‌ನ್ನು ಯೋಜನಾ ವೆಚ್ಚಕ್ಕೆ ಹೇಗೆ ಹೊಂದಾಣಿಕೆ ಮಾಡಬೇಕು ಎಂಬ ಸಮಸ್ಯೆ ಬರುತ್ತದೆ. ಅದಕ್ಕಾಗಿ ಸ್ಟೇಕ್ ಹೋಲ್ಡರ್ಸ್ ನಡುವೆ ಈಗಾಗಲೇ ಸಭೆ ನಡೆಸಲಾಗಿದೆ. ಯಾವ ರೀತಿಯಲ್ಲಿ ಇದನ್ನು ಮಾಡಿಸಬಹುದು ಎಂಬ ಬಗ್ಗೆ ನಾವೂ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.