ಸಮಾಜಕ್ಕೆ ದಿಕ್ಕು ತೋರಿಸುತ್ತಿದ್ದವರೇ ದಿಕ್ಕು ತಪ್ಪುತ್ತಿದ್ದಾರೆ: ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ

ದೆಹಲಿ, ಫೆ.26: ಕಾವಿ, ಖಾಕಿ ಹಾಗೂ ಖಾದಿಧಾರಿಗಳಲ್ಲಿ ಅಂತರ ಹೆಚ್ಚುತ್ತಿದ್ದು, ಸಮಾಜಕ್ಕೆ ದಿಕ್ಕನ್ನು ತೋರಿಸುವವರೇ ದಿಕ್ಕುತಪ್ಪುತ್ತಿದ್ದಾರೆ ಎಂದು ತರಳಬಾಳು ಜಗದ್ಗುರು ಶಾಖಾಮಠದ ಪಟ್ಟಾಧ್ಯಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಬೇಸರ ವ್ಯಕ್ತಡಿಸಿದರು.
ಕರ್ನಾಟಕ ಸಂಘ ಅಮೃತಮಹೋತ್ಸವದ ಅಂಗವಾಗಿ ಸಂಘದ ಕಚೇರಿಯಲ್ಲಿ ಏರ್ಪಡಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ ಅವರು, ಬಸವಾದಿ ಶರಣರು ನುಡಿ ಜಾಣರಾದಂತೆ ನಡೆ ಧೀರರೂ ಅಗಿದ್ದರು. ಅವರ ನಡೆ-ನುಡಿಯ ನಡುವೆ ಕೂದಲಿನಷ್ಟೂ ಅಂತರ ಇರಲಿಲ್ಲ. ಆದರೆ ಇಂದು ಕಾವಿ, ಖಾಕಿ, ಖಾದಿಧಾರಿಗಳಲ್ಲಿ ಈ ಅಂತರ ಹೆಚ್ಚುತ್ತಿದೆ. ಇಂಥ ಸಂದರ್ಭದಲ್ಲಿ ಜಾನಪದ ಮತ್ತು ಶರಣ ಸಾಹಿತ್ಯ ನಮಗೆ ಮಾರ್ಗದರ್ಶಿಯಾಗಬಲ್ಲವು ಎಂದರು.
ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಮಠಾಧಿಪತಿಗಳಲ್ಲೇ ವಿಶಿಷ್ಟ ವ್ಯಕ್ತಿತ್ವ ಹೊಂದಿದ್ದು, ಆ ಕಾಲಕ್ಕೆ ಅವರು ರಂಗಭೂಮಿಯನ್ನು ಸಮರ್ಥವಾಗಿ ಬಳಸಿಕೊಂಡವರು. ಅವರ ಮೂಲ ಆಶಯ ಬಸವಾದಿ ಶರಣರ ತತ್ವ ಸಿದ್ದಾಂತಗಳನ್ನು ವಿಶ್ವಕ್ಕೆ ಪರಿಚಯಿಸುವುದಾಗಿತ್ತು. ರಂಗಭೂಮಿ ವೈಚಾರಿಕ ಶಕ್ತಿಯನ್ನು ಮೂಡಿಸುವ ಮಾನವೀಯ ಅಂತಃಕರಣವುಳ್ಳದ್ದು. ಇವನಾರವ ಇವನಾರವ ಎನ್ನದೆ ಎಲ್ಲರನ್ನೂ ಅಪ್ಪಿಕೊಳ್ಳುವ, ಒಪ್ಪಿಕೊಳ್ಳುವ ಗುಣವುಳ್ಳದ್ದು. ಆದರೆ ದೃಶ್ಯಮಾದ್ಯಮಗಳು ಮನೋವಿಕಾಸದ ಬದಲಾಗಿ ಮನೋವಿಲಾಸದ ಕಡೆ ಗಮನ ಹರಿಸುತ್ತಿರುವುದು ದುರದೃಷ್ಟಕರ ಸಂಗತಿ ಎಂದು ಅವರು ಟೀಕಿಸಿದರು.
ಲೇಖಕ ಡಾ. ಪುರುಷೋತ್ತಮ ಬಿಳಿಮಲೆ ಮಾತನಾಡಿ, ಸರೋಜಿನಿ ಮಹಿಷಿ ದೆಹಲಿಯಲ್ಲಿ ಕರ್ನಾಟಕ ಸಂಘವನ್ನು ಕಟ್ಟುವಲ್ಲಿ ಬಹಳ ಪರಿಶ್ರಮಪಟ್ಟವರು, ಇದರ ಅಧ್ಯಕ್ಷರೂ ಆಗಿದ್ದರು. ಭ್ರಷ್ಟಾಚಾರವನ್ನು ಬದುಕಿನುದ್ದಕ್ಕೂ ದೂರ ಇಟ್ಟವರು. ಇಂಥವರ ಹೆಸರಿನ ಪ್ರಶಸ್ತಿ ಪಡೆದಿರುವುದು ನನಗೆ ಸಂತೋಷ ತಂದಿದೆ ಎಂದರು.
ಕಾಯಕ್ರಮದಲ್ಲಿ ಈ ಬಾರಿಯ `ಕನ್ನಡ ಭಾರತಿ ರಂಗ ಪ್ರಶಸ್ತಿ’ ಯನ್ನು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ ಅವರಿಗೆ, ಹಾಗೂ ಡಾ.ಪುರುಷೋತ್ತಮ ಬಿಳಿಮಲೆ ಅವರಿಗೆ 'ಡಾ. ಸರೋಜಿನಿ ಮಹಿಷಿ ಪ್ರಶಸ್ತಿ' ಪರುಸ್ಕಾರವನ್ನು ನೀಡಲಾಯಿತು. ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ದೆಹಲಿ ಜೆ ಎಸ್ ಎಸ್ ಮಹಾಸಂಸ್ಥಾನದ ಶಾಖಾ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ನವದೆಹಲಿಯ ಜೆ ಎನ್ ಯು ಕನ್ನಡ ಅಧ್ಯಯನ ಪೀಠದ ಅಧ್ಯಕ್ಷ ಡಾ. ವಿಶ್ವನಾಥ್, ಯುವ ನಟ ಅನುಪ್ ರೇವಣ್ಣ ಉಪಸ್ಥಿತರಿದ್ದರು.








