ಮಂಗಳೂರು: ಸೆಂಟ್ರಲ್ ಕಮಿಟಿ ವತಿಯಿಂದ ಯು.ಟಿ. ಖಾದರ್‌ಗೆ ಸನ್ಮಾನ

ಮಂಗಳೂರು, ಫೆ.26: ದಿ ಮುಸ್ಲಿಂ ಸೆಂಟ್ರಲ್ ಕಮಿಟಿ ದ.ಕ.-ಉಡುಪಿ ಜಿಲ್ಲೆಯ ವತಿಯಿಂದ ರಾಜ್ಯ ವಿಧಾನಸಭೆಯ ವಿಪಕ್ಷ ಉಪ ನಾಯಕರಾಗಿ ಆಯ್ಕೆಯಾದ ಮಾಜಿ ಸಚಿವ ಯು.ಟಿ. ಖಾದರ್ ಅವರಿಗೆ ಸನ್ಮಾನ ಕಾರ್ಯಕ್ರಮವು ಸೆಂಟ್ರಲ್ ಕಮಿಟಿಯ ಅಧ್ಯಕ್ಷ, ಮಾಜಿ ವಿಧಾನ ಪರಿಷತ್ ಸದಸ್ಯ ಹಾಜಿ ಕೆ.ಎಸ್. ಮಹಮ್ಮದ್ ಮಸೂದ್ ಅವರ ಕುದ್ರೋಳಿಯಲ್ಲಿರುವ ಸ್ವಗೃಹದಲ್ಲಿ ಶನಿವಾರ ನಡೆಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಯು.ಟಿ. ಖಾದರ್ ಮುಸ್ಲಿಂ ಸೆಂಟ್ರಲ್ ಕಮಿಟಿ ನೀಡಿದ ಗೌರವ ಮತ್ತು ಸನ್ಮಾನವು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಯಾವುದೇ ಕಪ್ಪುಚುಕ್ಕೆ ಬಾರದಂತೆ ಕಾರ್ಯನಿರ್ವಹಿಸುವೆ. ಸೆಂಟ್ರಲ್ ಕಮಿಟಿ ಅಧ್ಯಕ್ಷ ಹಾಜಿ ಮುಹಮ್ಮದ್ ಮಸೂದ್‌ರನ್ನು ನಾನು ಕಾಲೇಜು ದಿನಗಳಲ್ಲೇ ನೋಡಿದ ಒಬ್ಬ ನಾಯಕರಾಗಿದ್ದಾರೆ ಅವರ ಮಾರ್ಗದರ್ಶನದಲ್ಲಿ ಈವತ್ತು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ಯುವ ಪೀಳಿಗೆಗೆ ಹೆಚ್ಚಿನ ತಾಳ್ಮೆ ಅಗತ್ಯವಿದೆ. ನಾವು ಎಷ್ಟು ತಾಳ್ಮೆ ತೋರುತ್ತೇವೋ ಅಷ್ಟು ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯ ಎಂದರು.
ಶಾಸಕ ಖಾದರ್ ಕೇವಲ ಒಂದು ಕ್ಷೇತ್ರ ಅಥವಾ ಒಂದು ಧರ್ಮದ ನಾಯಕನಾಗಿರದೆ ನಾಡಿನ ಎಲ್ಲ ಜನರೂ ಎಲ್ಲರೂ ಒಪ್ಪುವ ನಾಯಕ. ರಾಜಕೀಯದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯುವ ಎಲ್ಲ ಗುಣ ಅವರಲ್ಲಿದೆ ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಹಾಜಿ ಕೆ.ಎಸ್. ಮುಹಮ್ಮದ್ ಮಸೂದ್ ಅಭಿಪ್ರಾಯಪಟ್ಟರು.
ಈ ಸಂದರ್ಭ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ ಬಂದರ್, ಕಾರ್ಪೊರೇಟರ್‌ಗಳಾದ ಶಂಸುದ್ದೀನ್ ಕುದ್ರೋಳಿ, ಲತೀಫ್ ಕಂದಕ್, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಕೆ.ಕೆ.ಶಾಹುಲ್ ಹಮೀದ್, ಕಾರ್ಮಿಕ ಘಟಕದ ಅಧ್ಯಕ್ಷ ವಹಾಬ್ ಕುದ್ರೋಳಿ, ಶಂಸುದ್ದೀನ್ ಮತ್ತಿತರರು ಉಪಸ್ಥಿತರಿದ್ದರು.








