ಭಾರತೀಯರನ್ನು ಉಕ್ರೇನ್‍ನಿಂದ ಸುರಕ್ಷಿತವಾಗಿ ಕರೆತರಲು ಸರ್ವಪ್ರಯತ್ನ: ಡಾ.ಆರತಿ ಕೃಷ್ಣ

ಬೆಂಗಳೂರು, ಫೆ.26: ಯುದ್ಧಪೀಡಿತ ಉಕ್ರೇನ್ ದೇಶದಿಂದ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಸರ್ವ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಎನ್‍ಆರ್ ಐ ಫೋರಂ ಕರ್ನಾಟಕದ ಮಾಜಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ತಿಳಿಸಿದ್ದಾರೆ.
ಉಕ್ರೇನ್‍ನಲ್ಲಿರುವ ಭಾರತೀಯರು ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳ ಪರಿಸ್ಥಿತಿ ಶೋಚನೀಯವಾಗಿದೆ. ಯುದ್ಧದಿಂದಾಗಿ ಎಲ್ಲ ವಾಣಿಜ್ಯ ವಿಮಾನಯಾನ ಸೇವೆಯನ್ನು ಉಕ್ರೇನ್ ಸರಕಾರ ಸ್ಥಗಿತಗೊಳಿಸಿದೆ. ನಮ್ಮ ಅಂದಾಜಿನ ಪ್ರಕಾರ ಸುಮಾರು 20 ಸಾವಿರ ಮಂದಿ ಉಕ್ರೇನ್‍ನಲ್ಲಿ ಉದ್ಯೋಗ ಹಾಗೂ ವ್ಯಾಸಂಗ ಮಾಡುತ್ತಿದ್ದಾರೆ. ಈ ಪೈಕಿ 4 ಸಾವಿರ ಮಂದಿ ಕಳೆದ ವಾರ ಸ್ವದೇಶಕ್ಕೆ ಹಿಂದಿರುಗುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಭಾರತೀಯ ರಾಯಭಾರಿ ಕಚೇರಿಯು ಭಾರತೀಯರ ರಕ್ಷಣೆಗೆ ಅಗತ್ಯ ವ್ಯವಸ್ಥೆಯನ್ನು ಮಾಡಿದೆ. ವಿಮಾನಯಾನ ಸೇವೆ ಸ್ಥಗಿತಗೊಂಡಿರುವುದರಿಂದ ಕೇಂದ್ರ ಸರಕಾರವು ಪೋಲೆಂಡ್, ರೊಮಾನಿಯಾ, ಹಂಗೇರಿ ಹಾಗೂ ಸ್ಲೋವಾಕ್ ಗಣರಾಜ್ಯದ ರಾಯಭಾರಿ ಕಚೇರಿಗಳೊಂದಿಗೆ ಸಂರ್ಪಕಿಸಿ ರಸ್ತೆ ಮಾರ್ಗವಾಗಿ ಹೊರಗೆ ಕರೆತರುವ ಸಂಬಂಧ ಚರ್ಚೆ ನಡೆಸಲಾಗುತ್ತಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಆರತಿ ಕೃಷ್ಣ ತಿಳಿಸಿದ್ದಾರೆ.
ನಾನು ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಹರ್ಷವರ್ಧನ್ ಶ್ರೀಂಗ್ಲಾ ಅವರೊಂದಿಗೆ ಮಾತುಕತೆ ನಡೆಸಿದ್ದು, ಭಾರತೀಯ ವಾಯುಪಡೆಯು ತನ್ನ ನಾಗರಿಕರನ್ನು ಅಲ್ಲಿಂದ ಕರೆತರಲು ಸರ್ವಸನ್ನದ್ಧವಾಗಿದ್ದು, ಪರಿಸ್ಥಿತಿ ಅನುಕೂಲಕರವಾಗುತ್ತಿದ್ದಂತೆ ಈ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಆರತಿ ಕೃಷ್ಣ ಹೇಳಿದ್ದಾರೆ.
ಉಕ್ರೇನ್‍ನಲ್ಲಿ ಸಿಲುಕಿರುವ ಶಿವಮೊಗ್ಗ, ಚಿಕ್ಕಮಗಳೂರು, ಬೆಂಗಳೂರು ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳ ಪೋಷಕರು ನನಗೆ ಕರೆ ಮಾಡುತ್ತಿದ್ದಾರೆ. ಜೊತೆಗೆ ಕೇರಳ ಹಾಗೂ ಇತರ ರಾಜ್ಯಗಳ ವಿದ್ಯಾರ್ಥಿಗಳ ಪೋಷಕರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ನಾನು ನಿರಂತರವಾಗಿ ವಿದೇಶಾಂಗ ವ್ಯವಹಾರಗಳ ಇಲಾಖೆಯ ಸಂಪರ್ಕದಲ್ಲಿದ್ದೇನೆ. ಅಲ್ಲದೆ, ಪೂರ್ವ ಯೂರೋಪಿನ ಉಸ್ತುವಾರಿ ಜಂಟಿ ಕಾರ್ಯದರ್ಶಿ, ಉಕ್ರೇನ್‍ನಲ್ಲಿರುವ ನಮ್ಮ ರಾಯಭಾರಿ ಜೊತೆ ಸಂಪರ್ಕದಲ್ಲಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ನಮ್ಮ ಮಾಹಿತಿ ಪ್ರಕಾರ ರಾಜ್ಯದ ಸುಮಾರು 120 ವಿದ್ಯಾರ್ಥಿಗಳು ಹಾಗೂ ವೃತ್ತಿಪರರು ಉಕ್ರೇನ್‍ನಲ್ಲಿ ಸಿಲುಕಿದ್ದಾರೆ. ಸುಮಾರು 8 ಸಾವಿರ ವಿದ್ಯಾರ್ಥಿಗಳು ಪೂರ್ವ ಉಕ್ರೇನ್ ಪ್ರದೇಶದಿಂದ ಸ್ಥಳಾಂತರಗೊಳ್ಳಲು ಸನ್ನದ್ಧವಾಗಿದ್ದಾರೆ.
ಡಾ.ಆರತಿ ಕೃಷ್ಣ, ಮಾಜಿ ಉಪಾಧ್ಯಕ್ಷೆ, ಎನ್‍ಆರ್ ಐ ಫೋರಂ ಕರ್ನಾಟಕ







