ಸರಕಾರವು ಆರೋಗ್ಯ ರಕ್ಷಣೆ ಪರಿಸರ ವ್ಯವಸ್ಥೆಯಲ್ಲಿ ಸಮಗ್ರತಾ ದೃಷ್ಟಿಯ ವಿಧಾನವನ್ನು ಅಳವಡಿಸಿಕೊಂಡಿದೆ:ಪ್ರಧಾನಿ ಮೋದಿ

ಹೊಸದಿಲ್ಲಿ,ಫೆ.26: ಕೇಂದ್ರ ಸರಕಾರವು ಆರೋಗ್ಯ ರಕ್ಷಣೆ ಪರಿಸರ ವ್ಯವಸ್ಥೆಯಲ್ಲಿ ಸಮಗ್ರತಾ ದೃಷ್ಟಿಯ ವಿಧಾನವನ್ನು ಅಳವಡಿಸಿಕೊಂಡಿದ್ದು, ಆರೋಗ್ಯದ ಮೇಲೆ ಮಾತ್ರವಲ್ಲ,ಯೋಗಕ್ಷೇಮದ ಮೇಲೂ ಅಷ್ಟೇ ಗಮನವನ್ನು ಕೇಂದ್ರೀಕರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಇಲ್ಲಿ ಹೇಳಿದರು.
ಕೇಂದ್ರ ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಆಯೋಜಿಸಿದ್ದ ಬಜೆಟೋತ್ತರ ವೆಬಿನಾರ್ನಲ್ಲಿ ಮಾತನಾಡುತ್ತಿದ್ದ ಅವರು,ಆಧುನಿಕ ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲ ವಿಸ್ತರಣೆ,ಸಂಶೋಧನೆಗೆ ಉತ್ತೇಜನ ಹಾಗೂ ಆಧುನಿಕ ಮತ್ತು ಭವಿಷ್ಯದ ತಂತ್ರಜ್ಞಾನದ ಅಳವಡಿಕೆ ಈ ಮೂರು ಅಂಶಗಳನ್ನು ಬಜೆಟ್ನಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ ಎಂದರು.
‘‘ದೊಡ್ಡ ನಗರಗಳಾಚೆಗೂ ಆರೋಗ್ಯ ಮೂಲಸೌಕರ್ಯ ನಿರ್ಮಾಣವನ್ನು ನಾವು ಬಯಸಿದ್ದೇವೆ. ‘ಒಂದು ಭಾರತ,ಒಂದು ಆರೋಗ್ಯ’ಎಂಬ ಧ್ಯೇಯದೊಂದಿಗೆ ಬ್ಲಾಕ್ ಮತ್ತು ಜಿಲ್ಲಾ ಮಟ್ಟಗಳಲ್ಲಿ ಅಗತ್ಯ ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಮತ್ತು ಇವುಗಳ ನಿರ್ವಹಣೆ ಹಾಗೂ ಉನ್ನತೀಕರಣದಲ್ಲಿ ಖಾಸಗಿ ಕ್ಷೇತ್ರವು ಪ್ರಮುಖ ಪಾತ್ರವನ್ನು ವಹಿಸಲಿದೆ ’’ ಎಂದು ಪ್ರಧಾನಿ ನುಡಿದರು. ‘ಅದು ಸ್ವಚ್ಛ ಭಾರತ,ಫಿಟ್ ಇಂಡಿಯಾ,ಪೋಷಣ,ಇಂದ್ರಧನುಷ್, ಆಯುಷ್ಮಾನ ಭಾರತ ಅಥವಾ ಜಲಜೀವನ ಅಭಿಯಾನವಾಗಿರಲಿ,ನಾವು ಇಂತಹ ಅಭಿಯಾನಗಳನ್ನು ಗರಿಷ್ಠ ಜನರಿಗೆ ತಲುಪಿಸಬೇಕಿದೆ ’ ಎಂದ ಅವರು,‘ಆರೋಗ್ಯ ರಕ್ಷಣೆ ಸೇವೆಗಳಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಅದಕ್ಕನುಗುಣವಾಗಿ ನುರಿತ ಆರೋಗ್ಯ ವೃತ್ತಿಪರರ ಸೃಷ್ಟಿಗಾಗಿ ನಾವು ಪ್ರಯತ್ನಿಸುತ್ತಿದ್ದೇವೆ. ಹೀಗಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ 2022-23ನೇ ಸಾಲಿನ ಮುಂಗಡಪತ್ರದಲ್ಲಿ ಆರೋಗ್ಯ,ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಮಾನವ ಸಂಪನ್ಮೂಲ ವಿಸ್ತರಣೆಗೆ ಹೆಚ್ಚಿನ ಹಣವನ್ನು ಮೀಸಲಿರಿಸಲಾಗಿದೆ. ಇದು ಭಾರತದ ಗುಣಮಟ್ಟದ ಮತ್ತು ಅಗ್ಗದ ವೈದ್ಯಕೀಯ ವ್ಯವಸ್ಥೆಯತ್ತ ವಿಶ್ವದ ಗಮನವನ್ನು ಸೆಳೆಯಲು ನೆರವಾಗಲಿದೆ,ತನ್ಮೂಲಕ ವೈದ್ಯಕೀಯ ಪ್ರವಾಸೋದ್ಯಮವು ಅಭಿವೃದ್ಧಿಗೊಂಡು ದೇಶದ ಜನರಿಗೆ ಆದಾಯ ಗಳಿಕೆ ಅವಕಾಶಗಳು ಹೆಚ್ಚಲಿವೆ ಎಂದರು.







