ಭಾರತೀಯ ರಾಯಭಾರ ಕಚೇರಿಯ ಮಾರ್ಗಸೂಚಿಗಳನ್ನು ಅನುಸರಿಸಿ: ಉಕ್ರೇನ್ ನಲ್ಲಿಯ ಭಾರತೀಯ ವಿದ್ಯಾರ್ಥಿಗಳಿಗೆ ಮನವಿ

ಹೊಸದಿಲ್ಲಿ,ಫೆ.26: ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಭಾರತೀಯ ರಾಯಭಾರ ಕಚೇರಿ ಹೊರಡಿಸಿರುವ ಎಲ್ಲ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಶಿಕ್ಷಣ ಸಚಿವಾಲಯವು ಉಕ್ರೇನ್‌ನಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳಿಗೆ ಶನಿವಾರ ಮನವಿಯನ್ನು ಮಾಡಿಕೊಂಡಿದೆ. ಈ ಬಗ್ಗೆ ಟ್ವೀಟಿಸಿರುವ ಅದು ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ವಾಪಸ್ ಕರೆತರಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಸರಕಾರವು ಮಾಡುತ್ತಿದೆ ಎಂದು ಭರವಸೆ ನೀಡಿದೆ.
ರಷ್ಯದ ಆಕ್ರಮಣವು ಶನಿವಾರ ಮೂರನೇ ದಿನವನ್ನು ಪ್ರವೇಶಿಸಿದ್ದು, ಉಕ್ರೇನ್‌ನಲ್ಲಿ ಸುಮಾರು 16,000 ಭಾರತೀಯರು ಅತಂತ್ರರಾಗಿದ್ದಾರೆ. ಈ ಪೈಕಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೆಚ್ಚಿನವರು ಖಾರ್ಕಿವ್ ಮತ್ತು ಕೀವ್ನಲ್ಲಿ ವೈದ್ಯಕೀಯ ವ್ಯಾಸಂಗವನ್ನು ಮಾಡುತ್ತಿದ್ದು,ಅವರಲ್ಲಿ ಗುಜರಾತಿನ ಸುಮಾರು 2,500 ಮತ್ತು ಕೇರಳದ 2,320 ವಿದ್ಯಾರ್ಥಿಗಳು ಸೇರಿದ್ದಾರೆ.
ಉಕ್ರೇನ್‌ನಲ್ಲಿ ಉದ್ವಿಗ್ನತೆಯು ಹೆಚ್ಚುತ್ತಿರುವುದರಿಂದ ಕಳವಳಕ್ಕೀಡಾಗಿರುವ ಕುಟುಂಬಗಳು ತಮ್ಮ ಮಕ್ಕಳ ಸುರಕ್ಷಿತ ವಾಪಸಾತಿಗಾಗಿ ಆತಂಕದಲ್ಲಿ ಕಾಯುತ್ತಿವೆ. ವಿದ್ಯಾರ್ಥಿಗಳ ಸುರಕ್ಷಿತ ತೆರವಿಗಾಗಿ ತಕ್ಷಣದ ವ್ಯವಸ್ಥೆಗಳನ್ನು ಮಾಡುವಂತೆ ಹಲವಾರು ರಾಜ್ಯ ಸರಕಾರಗಳು ಕೇಂದ್ರವನ್ನು ಕೋರಿಕೊಂಡಿವೆ.





