ರಶ್ಯಾ ಮಾಧ್ಯಮಗಳ ಜಾಹೀರಾತಿಗೆ ಫೇಸ್ಬುಕ್ ನಿರ್ಬಂಧ !

ಫೇಸ್ಬುಕ್
ರಶ್ಯಾ ಮಾಧ್ಯಮಗಳ ಜಾಹೀರಾತಿಗೆ ಫೇಸ್ಬುಕ್ ನಿರ್ಬಂಧ !
ವಾಷಿಂಗ್ಟನ್, ಫೆ.26: ಉಕ್ರೇನ್ ಮೇಲಿನ ಆಕ್ರಮಣದ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ರಶ್ಯನ್ ಮಾಧ್ಯಮಗಳ ಜಾಹೀರಾತಿಗೆ ನಿರ್ಬಂಧ ವಿಧಿಸಿರುವುದಾಗಿ ಫೇಸ್ಬುಕ್ ಹೇಳಿದೆ
ಜಾಹೀರಾತು ಪ್ರಕಟಿಸದಂತೆ ಮತ್ತು ನಮ್ಮ ಮಾಧ್ಯಮದ ಮೂಲಕ ವಿಶ್ವದ ಯಾವುದೇ ಭಾಗದಲ್ಲಿ ಹಣ ಸಂಪಾದಿಸುವುದಕ್ಕೆ ರಶ್ಯಾದ ಮಾಧ್ಯಮಗಳನ್ನು ನಿರ್ಬಂಧಿಸುತ್ತೇವೆ ಎಂದು ಫೇಸ್ಬುಕ್ನ ಭದ್ರತಾ ಕಾರ್ಯನೀತಿ ವಿಭಾಗದ ಮುಖ್ಯಸ್ಥ ನಥಾನಿಯಲ್ ಗ್ಲೀಚರ್ ಹೇಳಿದ್ದಾರೆ. ಈ ಮಧ್ಯೆ, ಶುಕ್ರವಾರ ರಶ್ಯಾದ ಸರಕಾರಿ ಸ್ವಾಮ್ಯದ 4 ಮಾಧ್ಯಮಗಳು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದ ವಿಷಯಕ್ಕೆ ಸಂಬಂಧಿಸಿ ಸತ್ಯಾಂಶ ಪರೀಕ್ಷೆ ಮತ್ತು ಕಂಟೆಂಟ್ ವಾರ್ನಿಂಗ್(ವಿಷಯದ ಕುರಿತ ಎಚ್ಚರಿಕೆ) ಲೇಬಲ್ ಅಳವಡಿಸದಂತೆ ರಶ್ಯಾದ ಅಧಿಕಾರಿಗಳು ನೀಡಿದ್ದ ಸೂಚನೆಯನ್ನು ತಿರಸ್ಕರಿಸಿರುವುದಾಗಿ ಫೇಸ್ಬುಕ್ನ ಮಾತೃಸಂಸ್ಥೆ ವೆುಟಾ ಹೇಳಿದೆ.
ಸಾಮಾಜಿಕ ಮಾಧ್ಯಮದಲ್ಲಿನ ತಮ್ಮ ಪ್ರೊಫೈಲ್ ಅನ್ನು ಲಾಕ್ ಮಾಡುವ ಗುಪ್ತ ವ್ಯವಸ್ಥೆಯನ್ನು ಉಕ್ರೇನ್ನ ಜನತೆಗೆ ಒದಗಿಸಿರುವುದಾಗಿ ಬುಧವಾರ ಫೇಸ್ಬುಕ್ ಹೇಳಿದೆ. ಅಮೆರಿಕ ಮೂಲದ ಫೇಸ್ಬುಕ್ ಸಂಸ್ಥೆಯು ರಶ್ಯಾಗೆ ಸಂಬಂಧಿಸಿದ ಸುದ್ದಿಯನ್ನು ಸೆನ್ಸಾರ್ ಮಾಡುವ ಮೂಲಕ ರಶ್ಯನ್ ಪ್ರಜೆಗಳ ಮಾಹಿತಿ ಹಕ್ಕನ್ನು ಮೊಟಕುಗೊಳಿಸಿದೆ ಎಂದು ರಶ್ಯಾದ ಅಧಿಕಾರಿಗಳು ಆರೋಪಿಸಿದ್ದಾರೆ.





