ಶಿವಪ್ರಕಾಶ್ ಕನ್ನಡ ಕಾವ್ಯ ಪರಂಪರೆಯ ವಕ್ತಾರ: ವಿಮರ್ಶಕಿ ಆಶಾದೇವಿ

ಬೆಂಗಳೂರು, ಫೆ.26: ವಿಶ್ವದ ಹಲವು ಭಾಷೆ, ಕಾವ್ಯ, ಸಂಸ್ಕøತಿಯ ಪರಿಚಯವಿದ್ದು ಕನ್ನಡ ಕಾವ್ಯ ಪರಂಪರೆಯ ವಕ್ತಾರರಂತಿರುವ ಕವಿ ಎಚ್.ಎಸ್. ಶಿವಪ್ರಕಾಶ ಅವರು ವಿಶ್ವಕಾವ್ಯದ ವಾರಸುದಾರರಾಗಿದ್ದಾರೆ ಎಂದು ವಿಮರ್ಶಕಿ ಡಾ. ಎಂ.ಎಸ್. ಆಶಾದೇವಿ ಅಭಿಪ್ರಾಯಿಸಿದ್ದಾರೆ.
ಶನಿವಾರ ನಗರದಗಾಂಧಿ ಭವನದಲ್ಲಿ "ಸಮಾಜಮುಖಿ" ಪತ್ರಿಕೆ ಏರ್ಪಡಿಸಿದ್ದ ಕವಿ ಶಿವಪ್ರಕಾಶರ ಸಮಗ್ರ ಕಾವ್ಯ ಚರ್ಚೆ ಮತ್ತು ವಾರ್ಷಿಕ ಕಥಾ ಸಂಕಲನ ಬಿಡುಗಡೆ ಸಮಾರಂಭದಲ್ಲಿ ವಿಷಯ ಮಂಡನೆ ಮಾಡಿಅವರು ಮಾತಾಡಿದರು.
ಶಿವಪ್ರಕಾಶರ ಕಾವ್ಯಕ್ಕೆ ದೊಡ್ಡ ಭಿತ್ತಿ ಇದೆ. ಈಚೆಗೆ ಬಂದ ಅವರ ಸಮಗ್ರ ಸಂಕಲನ ಸಿದ್ದಿಯ ಶಿಖರವಾಗಿದ್ದು, ಆಧುನಿಕ ಕನ್ನಡದಲ್ಲಿನ ಪ್ರತಿಭಾ ಸ್ಫೋಟದ ಕಾವ್ಯವಾಗಿದೆ. ಕಾಲಾತೀತವಾದ ನೆಲೆಯಲ್ಲಿ ಇವರ ಕಾವ್ಯದ ವಸ್ತು ಅಡಗಿದೆ. ಈ ಕಾಲಘಟ್ಟದಲ್ಲಿ ಹಲವು ಚಳವಳಿಗಳು ಹಾದು ಹೋಗಿವೆ. ಎಲ್ಲಾ ಚಳವಳಿಗಳ ಸಾರ ಹೀರಿ, ತನ್ನತನ ಕಳೆದುಕೊಳ್ಳದೆ ತನ್ನ ಸ್ವಾತಂತ್ರ್ಯ, ಸ್ವಾಯತ್ತತೆ ಉಳಿಸಿಕೊಂಡಿರುವುದರಿಂದಲೇ ಯುಗದ ಕವಿ ಎಂದು ಕರೆಯಬಹುದು ಎಂದು ಅವರು ಹೇಳಿದರು.
ಮಂಟೇಸ್ವಾಮಿ ಕಾವ್ಯ ಪರಂಪರೆಯ ಧಾತು, ಆ ಪರಂಪರೆಯ ಮಣ್ಣಿನ ವಾಸನೆ ಶಿವಪ್ರಕಾಶರ ಕಾವ್ಯದಲ್ಲಿದೆ. ಅದು ತಾಯಿಪ್ರಜ್ಞೆಯ ಕಾವ್ಯವೂ ಆಗಿದೆ ಎಂದು ಅವರು ಅಭಿಪ್ರಾಯಿಸಿದರು.
ಕವಿ, ಇಂಗ್ಲಿಷ್ ಪ್ರಾಧ್ಯಾಪಕ ಕಮಲಾಕರ ಕಡವೆ ಮಾತನಾಡಿ, ನಿರಂತರ ವಸಂತ ಆಹ್ವಾನಿಸುವ ಕವಿ ಶಿವಪ್ರಕಾಶ, ವಿಶ್ವಾತ್ಮಕ ಕಾವ್ಯ ರಚಿಸಿದ್ದಾರೆ. ಬಹುಭಾಷಿಕ, ಬಹು ಪೀಳಿಗೆಯ ಮನಸ್ಸಿನ ಕವಿಯಾದ ಇವರು ದೇಸೀ ಪರಂಪರೆಯ ವಕ್ತಾರರು. ಭಾರತೀಯ ಭಾμÉಗಳ ಜೊತೆ ಅನುಸಂಧಾನ ಮಾಡುವ ಕವಿ ಎಂದು ಅಭಿಪ್ರಾಯಪಟ್ಟರು.
ಶಿವಪ್ರಕಾಶ ಅವರು ಆಧ್ಯಾತ್ಮಿಕ ಕವಿ ಎಂದು ಸುಲಭವಾಗಿ ಕೈ ತೊಳೆದುಕೊಳ್ಳುವವರು ಪುತಿನ, ಮಧುರಚೆನ್ನ, ಬೇಂದ್ರೆ, ಕುವೆಂಪು ಅವರ ಆಧ್ಯಾತ್ಮಿಕ ಪರಂಪರೆಯನ್ನು ಮರೆಯುತ್ತಾರೆ. ಕನ್ನಡಪ್ರಜ್ಞೆ ವಿಸ್ತರಿಸಿದ ಕವಿ ಇವರು ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಕವಿ ಎಚ್.ಎಸ್. ಶಿವಪ್ರಕಾಶ, ಸಾಹಿತಿ ಆರ್. ಸತ್ಯನಾರಾಯಣ ಉಪಸ್ಥಿತರಿದ್ದರು.







