ಅಂಬೇಡ್ಕರ್ ಭಾವಚಿತ್ರ ಅಳವಡಿಸಲು ಬ್ಯಾಂಕ್ಗಳ ಹಿಂದೇಟು: ಹಣಕಾಸು ಸಚಿವಾಲಯದ ಆದೇಶದ ಉಲ್ಲಂಘನೆ
ಸಾಂದರ್ಭಿಕ ಚಿತ್ರ- (credit: PTI Photo)
ಉಡುಪಿ, ಫೆ.26: ಕೇಂದ್ರ ಹಣಕಾಸು ಸಚಿವಾಲಯ 2006ರಲ್ಲೇ ಎಲ್ಲ ಬ್ಯಾಂಕ್ಶಾಖೆಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಅಳವಡಿಸಲು ಕಡ್ಡಾಯ ಮಾಡಿದ್ದರೂ ಹೆಚ್ಚಿನ ಬ್ಯಾಂಕ್ಗಳು ಆ ಸೂಚನೆಯನ್ನು ಪಾಲಿಸುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.
ಇದೇ ಸಂದರ್ಭದಲ್ಲಿ ಕೇಂದ್ರ ಸರಕಾರದ ಹಣಕಾಸು ಸಚಿವಾಲಯದ ಪತ್ರದ ಹಿನ್ನೆಲೆಯಲ್ಲಿ ಎಲ್ಲಾ ಬ್ಯಾಂಕುಗಳ ಎಲ್ಲಾ ಶಾಖೆಗಳಲ್ಲೂ ಫೆ.28ರಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಕಡ್ಡಾಯವಾಗಿ ಅಳವಡಿಸುವಂತೆ ಎಲ್ಲಾ ಬ್ಯಾಂಕ್ ಶಾಖೆಗಳಿಗೂ ಆಯಾ ಪ್ರಧಾನ ಕಚೇರಿಯಿಂದ ಸುತ್ತೋಲೆಯೊಂದು ಬಂದಿದೆ.
ಈ ಸುತ್ತೋಲೆಯಂತೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಶಾಖೆಗಳಲ್ಲಿ ಫೆ.28ರೊಳಗೆ ಅಳವಡಿಸಿ ಅದರ ಮಾಹಿತಿಗಳನ್ನು ಪ್ರಾದೇಶಿಕ ಕಚೇರಿಗಳ ಮೂಲಕ ಪ್ರಧಾನ ಕಚೇರಿಗೆ ತಲುಪಿಸಬೇಕಾಗಿದೆ. ಕೇಂದ್ರ ಹಣಕಾಸು ಸಚಿವಾಲಯ 2006ರ ಸೆ.8ರಂದೇ ದೇಶದ ಎಲ್ಲಾ ಬ್ಯಾಂಕುಗಳ ಎಲ್ಲಾ ಶಾಖೆಗಳು ಹಾಗೂ ಕಚೇರಿಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಅಳವಡಿಸುವಂತೆ ಸೂಚಿಸಿ ಪತ್ರ ಬರೆದಿದ್ದು, ಅದನ್ನು ತಕ್ಷಣವೇ ಕಾರ್ಯಗತಗೊಳಿಸಬೇಕೆಂದು ಬ್ಯಾಂಕುಗಳ ಪ್ರಧಾನ ಕಚೇರಿಯಿಂದ ಶಾಖೆಗಳಿಗೆ ಬಂದಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಈ ಕುರಿತು ಕಾರ್ಪೊರೇಷನ್ ಬ್ಯಾಂಕ್ ಹಾಗೂ ಆಂಧ್ರ ಬ್ಯಾಂಕ್ಗಳು ಸೇರ್ಪಡೆಗೊಂಡಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಶಾಖೆಗಳಿಗೆ ಫೆ.9ರಂದು ಕಳುಹಿಸಿರುವ ಸುತ್ತೋಲೆಯ ಪ್ರತಿ ‘ವಾರ್ತಾಭಾರತಿ’ಗೆ ಸಿಕ್ಕಿದ್ದು, ಇದರಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ಮಾರ್ಗಸೂಚಿಗಳನ್ನು ತಕ್ಷಣದಿಂದಲೇ ಅನುಷ್ಠಾನಗೊಳಿಸುವಂತೆ ತಿಳಿಸಲಾಗಿದೆ.
ಅಂಬೇಡ್ಕರ್ ಭಾವಚಿತ್ರವನ್ನು ಶಾಖೆಗಳಲ್ಲಿ ಅಳವಡಿಸಿದ ಬಳಿಕ ಅದರ ಮಾಹಿತಿಯನ್ನು ಪ್ರಾದೇಶಿಕ ಕಚೇರಿಗಳಿಗೆ ಅಂದೇ ಕಳುಹಿಸಬೇಕಿದ್ದು, ಅವರು ಈ ಮಾಹಿತಿಯನ್ನು ಕೇಂದ್ರ ಕಚೇರಿಗೆ ಕಳುಹಿಸುವಂತೆ ಸೂಚಿಸಲಾಗಿದೆ.