ಸಾಕುನಾಯಿ ಬಿಟ್ಟು ಉಕ್ರೇನ್ ತೊರೆಯಲು ನಿರಾಕರಿಸುತ್ತಿರುವ ಭಾರತದ ವಿದ್ಯಾರ್ಥಿ!

photo courtesy:twitter
ರಾಯಪುರ, ಫೆ. 27: ಯುದ್ಧ ಜರ್ಝರಿತ ಉಕ್ರೇನ್ನಿಂದ ತನ್ನ ಸಾಕು ನಾಯಿ ಬಿಟ್ಟು
ಭಾರತಕ್ಕೆ ಬರಲು ಇಲ್ಲಿ ಸಿಲುಕಿರುವ ಮೂರನೇ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ನಿರಾಕರಿಸಿದ್ದಾರೆ. ಸಾಕು ನಾಯಿಯ ಎಲ್ಲ ದಾಖಲೆ ಪತ್ರಗಳು ಹಾಗೂ ಅನುಮತಿ ಪಡೆಯಲು ಪ್ರಯತ್ನಿಸುತ್ತಿದ್ದೇನೆ. ಇದರಿಂದ ನಾಯಿಯನ್ನು ತನ್ನೊಂದಿಗೆ ಭಾರತಕ್ಕೆ ಕರೆದೊಯ್ಯಬಹುದು. ಆದರೆ, ಅಧಿಕಾರಿಗಳು ಇನ್ನಷ್ಟು ದಾಖಲೆಗಳನ್ನು ಕೇಳುತ್ತಿದ್ದಾರೆ ಎಂದು ಪೂರ್ವ ಉಕ್ರೇನ್ನ ಖಾರ್ಕಿವ್ ರಾಷ್ಟ್ರೀಯ ವಿಶ್ವವಿದ್ಯಾನಿಲಯದ ರೇಡಿಯೊ ಎಲೆಕ್ಟ್ರಾನಿಕ್ಸ್ ವಿದ್ಯಾರ್ಥಿ ರಿಶಬ್ ಕೌಶಿಕ್ ಹೇಳಿದ್ದಾರೆ. ‘‘ಅವರು ನನ್ನ ವಿಮಾನದ ಟಿಕೇಟ್ ಕೇಳುತ್ತಿದ್ದಾರೆ. ಉಕ್ರೇನ್ ನ ವಾಯು ಯಾನ ಪ್ರದೇಶ ಮುಚ್ಚಿರುವುದರಿಂದ ನಾನು ಹೇಗೆ ವಿಮಾನದ ಟಿಕೆಟ್ ನೀಡಲಿ’’ ಎಂದು ಅವರು ಪ್ರಶ್ನಿಸಿದ್ದಾರೆ.
ನಾನು ದಿಲ್ಲಿಯಲ್ಲಿರುವ ಭಾರತ ಸರಕಾರದ ಅನಿಮಲ್ ಕ್ವಾರಂಟೈನ್ ಆ್ಯಂಡ್ ಸರ್ಟಿಫಿಕೇಟ್ ಸರ್ವೀಸ್ (ಎಕ್ಯುಸಿಎಸ್) ಹಾಗೂ ಉಕ್ರೇನ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿದ್ದೇನೆ. ಆದರೆ, ಯಾವುದೇ ಪ್ರಯೋಜನ ಆಗಲಿಲ್ಲ ಎಂದು ಅವರು ತಿಳಿಸಿದ್ದಾರೆ.
‘‘ಕಾನೂನಿನ ಪ್ರಕಾರ ಭಾರತ ಸರಕಾರ ನಿರಾಪೇಕ್ಷಣಾ ಪತ್ರವನ್ನು ನೀಡಿದ್ದರೆ, ಈಗ ನಾನು ಭಾರತದಲ್ಲಿ ಇರುತ್ತಿದ್ದೆ’’ ಎಂದು ಕೌಶಿಕ್ ಹೇಳಿದ್ದಾರೆ.





