ಸ್ಥಳೀಯಾಡಳಿತ ಸಂಸ್ಥೆಗಳು ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆಸಲು ಮನವಿ
ಮಂಗಳೂರು, ಫೆ.27: ರಾಜ್ಯದ 58 ಸ್ಥಳೀಯಾಡಳಿತ ಸಂಸ್ಥೆಗಳಿಗೆ 2021ರ ಡಿ.27ರಂದು ಚುನಾವಣೆ ನಡೆಸಿ ಡಿ.30ಕ್ಕೆ ಫಲಿತಾಂಶ ಪ್ರಕಟಿಸಿದೆ. ಆದರೆ ಈವರೆಗೂ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ಸರಕಾರ ಮೀಸಲಾತಿ ಪ್ರಕಟಿಸದ ಕಾರಣ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಇನ್ನೂ ಅಧಿಕಾರ ನಡೆಸಲು ಸಾಧ್ಯವಾಗಿಲ್ಲ. ಹಾಗಾಗಿ ಆದಷ್ಟು ಬೇಗ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಿ ಚುನಾವಣೆ ನಡೆಸಬೇಕು ಎಂದು ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯ ಅಹ್ಮದ್ ಅಜ್ಜಿನಡ್ಕ ಮನವಿ ಮಾಡಿದ್ದಾರೆ.
ಈ ಹಿಂದಿನ ಆಡಳಿತದ ಅವಧಿ ಮುಗಿದ ಆರು ತಿಂಗಳ ನಂತರ ಚುನಾವಣೆ ನಡೆದಿತ್ತು. ಅದರ ಫಲಿತಾಂಶ ಪ್ರಕಟಗೊಂಡು ಎರಡು ತಿಂಗಳು ಕಳೆದರೂ ಕೂಡ ಆಡಳಿತ ನಡೆಸಲು ಅವಕಾಶ ಸಿಗಲಿಲ್ಲ. ಇದಕ್ಕೆ ಸರಕಾರದ ನಿರ್ಲಕ್ಷವೇ ಕಾರಣವಾಗಿದೆ. ಸರಕಾರ ಮೀಸಲಾತಿ ಪ್ರಕಟಿಸದ ಕಾರಣ ನೂತನವಾಗಿ ಆಯ್ಕೆಯಾದ ಸದಸ್ಯರ ಉತ್ಸಾಹಕ್ಕೆ ತಣ್ಣೀರು ಎರಚಿದಂತಾಗಿದೆ. ಹಾಗಾಗಿ ಸರಕಾರ ಈ ಬಗ್ಗೆ ಸೂಕ್ತ ನಿರ್ಧಾರ ತಾಳಬೇಕು ಎಂದು ಆಗ್ರಹಿಸಿದ್ದಾರೆ.
Next Story