ಬೈಕ್ ಟ್ಯಾಕ್ಸಿ ವಿರುದ್ಧ ಸದ್ಯಕ್ಕೆ ಕ್ರಮಕ್ಕೆ ಮುಂದಾಗದಂತೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು, ಫೆ. 27: ಆ್ಯಪ್ ಆಧಾರಿತ ಓಲಾ ಬೈಕ್ ಟ್ಯಾಕ್ಸಿಗಳ ವಿರುದ್ಧ ನ್ಯಾಯಾಲಯದ ಮುಂದಿನ ಆದೇಶದವರೆಗೆ ಯಾವುದೇ ಬಲವಂತದ ಕಠಿಣ ಕ್ರಮ ಜರುಗಿಸದಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ.
ಓಲಾ ಕ್ಯಾಬ್ ನಡೆಸುತ್ತಿರುವ ಎಎನ್‍ಐ ಟೆಕ್ನಾಲಜೀಸ್ ಸಂಸ್ಥೆ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ನ್ಯಾಯಾಲಯದ ಮುಂದಿನ ಆದೇಶದವರೆಗೆ ಓಲಾ ಬೈಕ್ ಟ್ಯಾಕ್ಸಿಗಳ ವಿರುದ್ಧ ರಾಜ್ಯ ಸರಕಾರ, ಸಾರಿಗೆ ಇಲಾಖೆ ಅಧಿಕಾರಿಗಳು ಯಾವುದೇ ಬಲವಂತದ ಕ್ರಮ ಜರುಗಿಸಬಾರದು ಎಂದು ಮಧ್ಯಂತರ ಆದೇಶ ನೀಡಿದೆ.
ರಾಜ್ಯದಲ್ಲಿ ಓಲಾ ಕ್ಯಾಬ್ ಹಾಗೂ ಓಲಾ ಬೈಕ್ ಟ್ಯಾಕ್ಸಿ ಸೇವೆ ನೀಡುತ್ತಿರುವ ಎಎನ್‍ಐ ಟೆಕ್ನಾಲಾಜೀಸ್ ಸಂಸ್ಥೆ ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ಕೋರಿ ಸಾರಿಗೆ ಇಲಾಖೆಗೆ ಅರ್ಜಿ ಸಲ್ಲಿಸಿತ್ತು. 2004ರ ನವೆಂಬರ್ 5ರಂದು ಕೇಂದ್ರ ಸರಕಾರ ಬೈಕ್‍ಗಳನ್ನು ಕಾಂಟ್ರಾಕ್ಟ್ ಕ್ಯಾರೇಜ್ ಸರ್ವೀಸ್‍ಗೆ ಬಳಸಲು ಅನುಮತಿ ನೀಡಿ ಹೊರಡಿಸಿರುವ ಅಧಿಸೂಚನೆ ಆಧರಿಸಿ, ಬೈಕ್ ಟ್ಯಾಕ್ಸಿ ಸರ್ವೀಸ್‍ಗೆ ಅನುಮತಿ ಕೋರಿತ್ತು. ಆದರೆ, ಸಾರಿಗೆ ಇಲಾಖೆ ಮನವಿಯನ್ನು ಪರಿಗಣಿಸಿರಿಲ್ಲ.
ಸಾರಿಗೆ ಇಲಾಖೆ ಮನವಿ ಪರಿಗಣಿಸದ ಹಿನ್ನೆಲೆಯಲ್ಲಿ ಎಎನ್‍ಐ ಟೆಕ್ನಾಲಜೀಸ್ 2019ರ ಮಾರ್ಚ್ 2ರಂದು ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿತ್ತು. ಈ ವೇಳೆ, ನ್ಯಾಯಾಲಯ ಯಾವುದೇ ಆದೇಶ ನೀಡಿರಲಿಲ್ಲ. 2021ರಲ್ಲಿ ಈ ಸಂಬಂಧ ಮೇಲ್ಮನವಿ ಸಲ್ಲಿಸಿದಾಗ (ರಿಟ್ ಅಪೀಲ್ 4010/2019) ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಕೇಂದ್ರದ ಅಧಿಸೂಚನೆಯಂತೆ ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡುವ ಸಂಬಂಧ 2 ತಿಂಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಆದೇಶಿಸಿತ್ತು. ಆದರೆ, ಸರಕಾರ ಹಾಗೂ ಸಾರಿಗೆ ಇಲಾಖೆ ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಎಎನ್‍ಐ ಟೆಕ್ನಾಲಜೀಸ್ ಮತ್ತೆ ಹೈಕೋರ್ಟ್ ಮೆಟ್ಟಿಲೇರಿದೆ.







