ಬ್ಯಾರೀಸ್ ವಿದ್ಯಾ ಸಂಸ್ಥೆ ವತಿಯಿಂದ 'ಸ್ವಚ್ಛ ಕಡಲ ತೀರ, ಹಸಿರು ಕೋಡಿ' ಅಭಿಯಾನ
ಕುಂದಾಪುರ, ಫೆ.27: ಕೋಡಿ ಬ್ಯಾರೀಸ್ ವಿದ್ಯಾ ಸಂಸ್ಥೆಗಳ ವತಿಯಿಂದ ಸ್ವಚ್ಛ ಕಡಲ ತೀರ -ಹಸಿರು ಕೋಡಿ ಅಭಿಯಾನದ ಎರಡನೇ ಹಂತದ ಕಾರ್ಯಕ್ರಮ ಕೋಡಿ ಕಡಲ ತೀರದಲ್ಲಿ ರವಿವಾರ ನಡೆಯಿತು.
ಸಂಸ್ಥೆಯ ವಿಶ್ವಸ್ಥ ಅಬೂಬಕ್ಕರ್ ಸಿದ್ದಿಕ್ ಬ್ಯಾರಿ ಮಾತನಾಡಿ, ಎಲ್ಲರಿಗೂ ಆ ಪರಮಾತ್ಮನು ಬುದ್ಧಿಶಕ್ತಿಯನ್ನು ದಯಪಾಲಿಸಿದ್ದರೂ, ಒಳ್ಳೆಯ ಕೆಲಸಗಳನ್ನು ಮಾಡಲು ಕೆಲವರನ್ನು ಮಾತ್ರ ಆರಿಸಿ ನೇಮಿಸುತ್ತಾನೆ. ಇಂತಹ ಪವಿತ್ರ ಕಾರ್ಯ ಮಾಡಲು ದೇವರ ಆಯ್ಕೆಗೆ ನಾವೆಲ್ಲರೂ ಪಾತ್ರರಾಗಿರುವುದು ಮತ್ತು ನಮ್ಮ ಈ ಕೆಲಸವನ್ನು ನಮ್ಮ ನಂತರ ಬೇರೆ ಸಂಸ್ಥೆಗಳು ಕೈಗೆತ್ತಿಕೊಂಡಿರುವುದು, ಇತರ ಪ್ರದೇಶಗಳಲ್ಲಿ ಮಾದರಿಯಾಗಿ ಅಳವಡಿಸಿಕೊಂಡಿರುವುದು ಸಂತೃಪ್ತಿ ನೀಡುವ ವಿಷಯವಾಗಿದೆ ಎಂದರು.
ಈ ಅಭಿಯಾನದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಆಡಳಿತ ಮಂಡಳಿಯ ಸದಸ್ಯರು, ರಕ್ಷಕ-ಶಿಕ್ಷಕ ಸಂಘದ ಸದಸ್ಯರು, ಪೋಷಕರು, ಪ್ರಾಕ್ತನ ವಿದ್ಯಾರ್ಥಿ ಗಳು, ಊರಿನ ಪ್ರಮುಖರು ಹಾಗೂ ಮಹಾಜನರು ಮತ್ತು ನಿಸರ್ಗ ಪ್ರಿಯರು ಉತ್ಸಾಹದಿಂದ ಪಾಲ್ಗೊಂಡು ಕೋಡಿಯ ಕಡಲ ತೀರವನ್ನು ಸ್ವಚ್ಛಗೊಳಿಸಿದರು ಎಂದು ಬ್ಯಾರೀಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಅಧ್ಯಕ್ಷ ಹಾಜಿ ಕೆ.ಎಂ.ಅಬ್ದುಲ್ ರಹ್ಮಾನ್ ತಿಳಿಸಿದರು.