ಗ್ರಾಮೀಣ ಮಹಿಳೆಯರಿಗೆ ಕೌಶಲ್ಯ ಅಭಿವೃದ್ಧಿ ಅಗತ್ಯ: ಜಯಪ್ರಕಾಶ್ ಹೆಗ್ಡೆ
ಬ್ರಹ್ಮಾವರ, ಫೆ.27: ಸರಕಾರದ ಮಹತ್ವಾಕಾಂಕ್ಷೆಯ ಸಂಜೀವಿನಿ ಸಂತೆ ನಿರಂತರವಾಗಿ ನಡೆಯಬೇಕು. ಮಹಿಳೆಯರಿಗಾಗಿ ಇರುವ ಇಂತಹ ಯೋಜನೆ ಗಳನ್ನು ಗ್ರಾಮೀಣ ಮಹಿಳೆಯರು ಬಳಸಿಕೊಳ್ಳುವ ಮೂಲಕ ಕೌಶಲ್ಯ ಅಭಿವೃದ್ಧಿ ಯೊಂದಿಗೆ ಜೀವನೋಪಾಯವನ್ನು ಕಂಡುಕೊಳ್ಳಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಕೊಕ್ಕರ್ಣೆಯಲ್ಲಿ ಇಂದು ಸಂಜೀವಿನಿ ಸಂತೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಎನ್‌ಆರ್‌ಎಲ್ಎಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಪ್ರಭಾಕರ ಆಚಾರ್ ಮಾತನಾಡಿ, ಸಂಜೀವಿನಿ ಮಹಿಳೆಯರು ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಸಂತೆಗಳಿಗೆ ಭಾಗವಹಿಸಿ ಸಂಘದ ಮಹಿಳೆಯರು ಉತ್ಪಾದಿಸಿರುವ ಉತ್ಪನ್ನಗಳನ್ನು ಸಂತೆಯಲ್ಲಿ ವ್ಯಾಪಾರ ಮಾಡುವ ಮೂಲಕ ಆದಾಯ ಗಳಿಸಬೇಕು ಎಂದರು.
ಅಧ್ಯಕ್ಷತೆಯನ್ನು ಚಿಗುರು ಸಂಜೀವಿನಿ ಕೊಕ್ಕರ್ಣೆ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಅಧ್ಯಕ್ಷ ಲಕ್ಷ್ಮೀ ಅಡಿಗ ವಹಿಸಿದ್ದರು. ಕೊಕ್ಕರ್ಣೆ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಬಾಯಿ, ಉಪಾಧ್ಯಕ್ಷೆ ಬೇಬಿ ಶೆಟ್ಟಿ ಮುಖ್ಯ ಅಥಿತಿಗಳಾಗಿದ್ದರು.
ಕೊಕ್ಕರ್ಣೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಿರಿಯಣ್ಣ ಶೆಟ್ಟಿ, ಜಿಲ್ಲಾ ವ್ಯಸ್ಥಾಪಕಿ ನವ್ಯಾ, ಎನ್‌ಆರ್‌ಎಲ್ಎಂ ಸಮಾಲೋಚಕ ಕೆ.ಪಾಂಡುರಂಗ ಉಪಸ್ಥಿತರಿದ್ದರು. ಉಡುಪಿ ಜಿಪಂ ಸಹಾಯಕ ಯೋಜನಾಧಿಕಾರಿ ಜೇಮ್ಸ್ ಡಿಸಿಲ್ವಾ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ಮಲಾ ಆಚಾರ್ ಸ್ವಾಗತಿಸಿದರು. ರಮೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.