ಉಕ್ರೇನ್:ತಳ ಅಂತಸ್ತಿನಲ್ಲಿರುವ ಭಾರತೀಯ ರೆಸ್ಟಾರಂಟ್ ಈಗ ‘ಬಾಂಬ್ ಶೆಲ್ಟರ್’

photo courtesy:twitter
ನೊಯ್ಡ,ಫೆ.27: ರಷ್ಯ ಗುರುವಾರ ದಾಳಿ ಆರಂಭಿಸಿದಾಗಿನಿಂದ ಕೀವ್ ನಗರದ ಕಟ್ಟಡವೊಂದರ ತಳಅಂತಸ್ತಿನಲ್ಲಿರುವ ಭಾರತೀಯ ರೆಸ್ಟಾರಂಟ್ ಒಂದು ಭಾರತೀಯ ವಿದ್ಯಾರ್ಥಿಗಳು ಮತ್ತು ಉಕ್ರೇನ್ ಪ್ರಜೆಗಳು ಸೇರಿದಂತೆ ಸುಮಾರು 70 ಜನರಿಗೆ ಬಾಂಬ್ ದಾಳಿಗಳ ವಿರುದ್ಧ ಸುರಕ್ಷಿತ ತಾಣವಾಗಿದೆ.
ತಮ್ಮ ಸುತ್ತಲೂ ಬಾಂಬ್ಗಳ ಸ್ಫೋಟ ಆರಂಭಗೊಂಡ ಬೆನ್ನಿಗೇ ಕೆಲವರು ತಮ್ಮ ಲಗ್ಗೇಜ್ಗಳೊಂದಿಗೆ ಚೊಕೊಲಿವ್ಸ್ ಕಿ ಬೊಲೆವರ್ಡ್ನ ತಳಅಂತಸ್ತಿನಲ್ಲಿರುವ ಸಾಥಿಯಾ ರೆಸ್ಟಾರಂಟ್ಗೆ ಆಗಮಿಸಿದ್ದರು.
‘ಭಾರತೀಯರು ಮಾತ್ರವಲ್ಲ, ಉಕ್ರೇನ್ ಪ್ರಜೆಗಳೂ ತಾವಿಲ್ಲಿ ಸುರಕ್ಷಿತರಾಗಿರಬಹುದು ಎಂಬ ಆಸೆಯಿಂದ ಬಂದಿದ್ದಾರೆ. ರೆಸ್ಟಾರಂಟ್ ತಳ ಅಂತಸ್ತಿನಲ್ಲಿರುವುದರಿಂದ ಅದೀಗ ‘ಬಾಂಬ್ ಶೆಲ್ಟರ್’ನಂತಾಗಿದೆ. ನಾವು ಪ್ರತಿಯೊಬ್ಬರಿಗೂ ಆಹಾರವನ್ನು ಒದಗಿಸುತ್ತಿದ್ದೇವೆ ’ ಎಂದು ರೆಸ್ಟಾರಂಟ್ನ ಮಾಲಿಕ ಮನೀಷ್ ದವೆ ತಿಳಿಸಿದರು.
ದಾಳಿಗೂ ಮುನ್ನವೇ ತನ್ನ ಮನೆ ಊಟದ ರುಚಿಗಾಗಿ ಸಾಥಿಯಾ ರೆಸ್ಟಾರಂಟ್ ಭಾರತೀಯ ವಿದ್ಯಾರ್ಥಿಗಳಲ್ಲಿ ಜನಪ್ರಿಯವಾಗಿತ್ತು. ‘ನಾನು ಹಾಸ್ಟೆಲ್ನಲ್ಲಿ ವಾಸವಿದ್ದೆ,ಆದರೆ ನಾಗರಿಕ ಪ್ರದೇಶಗಳು ಬಾಂಬ್ ದಾಳಿಗಳಿಂದ ಎಷ್ಟು ಸಮಯ ಸುರಕ್ಷಿತವಾಗಿರುತ್ತವೆ ಎನ್ನುವುದು ಖಚಿತವಿಲ್ಲ. ಭಾರತೀಯ ಆಹಾರಕ್ಕಾಗಿ ನಾನು ಆಗಾಗ್ಗೆ ಇಲ್ಲಿಗೆ ಬರುತ್ತಿದ್ದೆ. ಆದರೆ ಗುರುವಾರ ದವೆಯವರು ನನಗೆ ಕರೆ ಮಾಡಿದಾಗ ಸುರಕ್ಷತೆಗಾಗಿ ನಾನು ತಕ್ಷಣ ಅವರ ರೆಸ್ಟಾರಂಟ್ ಸೇರಿಕೊಂಡಿದ್ದೆ. ಸದ್ಯಕ್ಕೆ ಇದು ನಮ್ಮ ಪಾಲಿಗೆ ಮನೆಯಿಂದ ದೂರವಿರುವ ಮನೆಯಾಗಿದೆ ’ ಎಂದು ಕೀವ್ನಲ್ಲಿ ಮೂರನೇ ವರ್ಷದ ಎಂಬಿಬಿಎಸ್ ಓದುತ್ತಿರುವ ಶಿವಂ ಕಟೋಚ್ ಹೇಳಿದರು. ಭಾರತದಲ್ಲಿಯ ನಮ್ಮ ಕುಟುಂಬಗಳು ಉಕ್ರೇನ್ನಿಂದ ನಮ್ಮ ಸುರಕ್ಷಿತ ನಿರ್ಗಮನಕ್ಕಾಗಿ ಕಳವಳದಲ್ಲಿವೆ ಎಂದರು.
ಆದರೆ ಆಹಾರ ಸಾಮಗ್ರಿಗಳ ಕೊರತೆ ಹೆಚ್ಚುತ್ತಿರುವುದು ದವೆಯವರನ್ನು ಚಿಂತೆಗೀಡು ಮಾಡಿದೆ. ‘ನಮ್ಮ ಬಳಿಯಿರುವ ಸಾಮಗ್ರಿಗಳನ್ನು ಜತನದಿಂದ ಬಳಸುತ್ತಿದ್ದೇವೆ. ನಾಲ್ಕೈದು ದಿನಗಳಿಗೆ ಸಾಲುವಷ್ಟು ಅಕ್ಕಿ ಮತ್ತು ಗೋದಿಹುಡಿ ಇದೆ. ಆದರೆ ನಾವು ತರಕಾರಿಗಳು ಮತ್ತು ಇತರ ಸಾಮಗ್ರಿಗಳನ್ನು ಖರೀದಿಸಬೇಕಿದೆ. ಈ ನಡುವೆ ರಾತ್ರಿ ಹತ್ತು ಗಂಟೆಯಿಂದ ಬೆಳಿಗ್ಗೆ ಏಳರವರೆಗೆ ಜನರ ಚಲನವಲನಗಳನ್ನು ನಿರ್ಬಂಧಿಸಲಾಗಿದೆ ’ಎಂದು ಅವರು ತಿಳಿಸಿದರು.
ಶುಕ್ರವಾರ ಮಾರುಕಟ್ಟೆಗಳು ಸ್ವಲ್ಪ ಸಮಯ ತೆರೆದಿದ್ದಾಗ ತರಕಾರಿಗಳು,ಹಾಲು ಮತ್ತು ಅಕ್ಕಿಯನ್ನು ಖರೀದಿಸಿದ್ದ ದವೆ, ‘ಭಾರತೀಯ ವಿದ್ಯಾರ್ಥಿಗಳೊಂದಿಗೆ ಹಲವಾರು ಗರ್ಭಿಣಿಯರು ಮತ್ತು ಮಕ್ಕಳೂ ಇಲ್ಲಿದ್ದಾರೆ ಮತ್ತು ಅವರಿಗೆ ಹಾಲು ಅಗತ್ಯವಾಗಿದೆ. ನಮ್ಮಲ್ಲಿಯ ದಾಸ್ತಾನು ಮುಗಿಯುವ ಮುನ್ನ ಮಾರುಕಟ್ಟೆಗಳು ಪುನರಾರಂಭಗೊಳ್ಳುತ್ತವೆ ಎಂದು ಆಶಿಸಿದ್ದೇನೆ ’ಎಂದರು.
ರೆಸ್ಟಾರಂಟ್ನಲ್ಲಿರುವ 10ಕ್ಕೂ ಅಧಿಕ ಭಾರತೀಯ ಸಿಬ್ಬಂದಿಗಳು ಅಲ್ಲಿ ಆಶ್ರಯ ಪಡೆದುಕೊಂಡಿರುವವರಿಗಾಗಿ ಆಹಾರಗಳನ್ನು ಸಿದ್ಧಪಡಿಸುತ್ತಿದ್ದಾರೆ ‘ಬಿಕ್ಕಟ್ಟು ಕೊನೆಗೊಳ್ಳುವವರೆಗೆ ಸಾಧ್ಯವಾದಷ್ಟು ಹೆಚ್ಚು ಜನರಿಗೆ ಆಹಾರವನ್ನೊದಗಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಗುರುವಾರ ಇಡೀ ರಾತ್ರಿಯನ್ನು ಸ್ಫೋಟಗಳ ಶಬ್ದಗಳ ನಡುವೆ ನಮ್ಮ ಸುತ್ತಲಿರುವ ಪ್ರತಿಯೊಬ್ಬರ ಸುರಕ್ಷತೆಗಾಗಿ ಪ್ರಾರ್ಥಿಸುತ್ತ ಕಳೆದಿದ್ದೆವು ’ಎಂದು ಬಾಣಸಿಗ ಹೇಮಂತ್ ಪರಮಾರ್ ತಿಳಿಸಿದರು.







