ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್ ರ ಸೋದರ ಪುತ್ರ ಬಿಜೆಪಿಗೆ ಸೇರ್ಪಡೆ
"ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಗಳಿಂದ ನಾನು ಪ್ರಭಾವಿತಗೊಂಡಿದ್ದೇನೆ"

ಸಾಂದರ್ಭಿಕ ಚಿತ್ರ
ಜಮ್ಮು,ಫೆ.27: ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್ ಅವರ ಕಿರಿಯ ಸೋದರ ಲಿಯಾಕತ್ ಅಲಿಯವರ ಪುತ್ರ ಮುಬಶಿರ್ ಆಝಾದ್ ರವಿವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ತಳಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಗಳಿಂದ ತಾನು ಪ್ರಭಾವಿತಗೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ನಾಯಕತ್ವವು ತನ್ನ ದೊಡ್ಡಪ್ಪನಿಗೆ ಗೌರವ ನೀಡುತ್ತಿಲ್ಲ,ಇದು ತನಗೆ ನೋವನ್ನುಂಟು ಮಾಡಿದೆ ಮತ್ತು ತಾನು ಕಾಂಗ್ರೆಸ್ ತೊರೆಯಲು ಕಾರಣವಾಗಿದೆ ಎಂದೂ ಮುಬಾಶಿರ್ ತಿಳಿಸಿದರು. ಆದರೆ ಬಿಜೆಪಿಗೆ ಸೇರುವ ಬಗ್ಗೆ ಆಝಾದ್ ಜೊತೆ ಚರ್ಚಿಸಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಜಮ್ಮು-ಕಾಶ್ಮೀರ ಬಿಜೆಪಿಯ ಅಧ್ಯಕ್ಷ ರವೀಂದರ್ ರೈನಾ ಮತ್ತು ಇತರ ಹಿರಿಯ ನಾಯಕರು ಮುಬಾಶಿರ್ ಮತ್ತು ಅವರ ಬೆಂಬಲಿಗರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಬಿಜೆಪಿಗೆ ಮುಬಾಶಿರ್ ಸೇರ್ಪಡೆಯನ್ನು ಮಹತ್ವದ ತಿರುವು ಎಂದು ಬಣ್ಣಿಸಿದ ರೈನಾ,ಇದು ಚೆನಾಬ್ ಕಣಿವೆ ಪ್ರದೇಶದ ದೋಡಾ,ಕಿಷ್ತವಾರ್ ಮತ್ತು ರಂಬಾನ್ ಜಿಲ್ಲೆಗಳ ಇನ್ನಷ್ಟು ಯುವ ಕಾರ್ಯಕರ್ತರು ಪಕ್ಷಕ್ಕೆ ಸೇರುವಂತೆ ಮಾಡಲಿದೆ ಎಂದರು.
2009,ಎಪ್ರಿಲ್ನಲ್ಲಿ ಆಝಾದ್ ಸೋದರ ಗುಲಾಂ ಅಲಿ ಅವರೂ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.





