ಮಿಲಿಟರಿ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಅಂತರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿದ ಉಕ್ರೇನ್

ಅಂತರಾಷ್ಟ್ರೀಯ ನ್ಯಾಯಾಲಯ
ಕೀವ್, ಫೆ.27: ಉಕ್ರೇನ್ ವಿರುದ್ಧ ರಶ್ಯಾ ನಡೆಸುತ್ತಿರುವ ಕ್ರಮಗಳಿಗೆ ರಶ್ಯಾವನ್ನು ಹೊಣೆಯಾಗಿಸುವಂತೆ ಆಗ್ರಹಿಸಿ ರವಿವಾರ ಉಕ್ರೇನ್ ಹೇಗ್ನಲ್ಲಿರುವ ಅಂತರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿದೆ. ಉಕ್ರೇನ್ನಲ್ಲಿ ನರಮೇಧ ನಡೆಯುತ್ತಿದೆ ಎಂಬ ಕಲ್ಪಿತ ಹೇಳಿಕೆಯ ಮೂಲಕ ತನ್ನ ಆಕ್ರಮಣಶೀಲತೆಯನ್ನು ಸಮರ್ಥಿಸಿಕೊಳ್ಳುತ್ತಿರುವ ರಶ್ಯಾವನ್ನು ಹೊಣೆಯನ್ನಾಗಿಸಬೇಕು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆಂಸ್ಕಿ ಟ್ವೀಟ್ ಮಾಡಿದ್ದಾರೆ.
ರಶ್ಯಾದ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಂತರಾಷ್ಟ್ರೀಯ ಸಮುದಾಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಮಿಲಿಟರಿ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ತಕ್ಷಣ ಆದೇಶವನ್ನು ನೀಡಬೇಕು ಎಂದು ಕೋರಿದ್ದು ಮುಂದಿನ ವಾರ ಅರ್ಜಿಯ ವಿಚಾರಣೆ ನಡೆಯುವ ನಿರೀಕ್ಷೆಯಿದೆ ಎಂದು ಝೆಲೆಂಸ್ಕಿ ಟ್ವೀಟ್ ಮಾಡಿದ್ದಾರೆ.
ಉಕ್ರೇನ್ನಲ್ಲಿ ಸೈನಿಕ ಕಾರ್ಯಾಚರಣೆಯ 4ನೇ ದಿನ ಉಕ್ರೇನ್ನ 2ನೇ ಅತೀ ದೊಡ್ಡ ನಗರ ಖಾರ್ಕಿವ್ಗೆ ರಶ್ಯಾ ಪಡೆಗಳು ಮುತ್ತಿಗೆ ಹಾಕಿದ್ದು ಉಭಯ ಪಡೆಗಳ ಮಧ್ಯೆ ತೀವ್ರ ಸಂಘರ್ಷ ಏರ್ಪಟ್ಟಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಉಕ್ರೇನ್ ಸಂಘರ್ಷಕ್ಕೆ ಸಂಬಂಧಿಸಿ ರವಿವಾರದ ಕೆಲವು ಮಹತ್ವದ ಬೆಳವಣಿಗೆಗಳು ಇಲ್ಲಿವೆ.
> ಸಂಧಾನ ಮಾತುಕತೆಗಾಗಿ ಬೆಲಾರೂಸ್ಗೆ ನಿಯೋಗ ರವಾನಿಸಿರುವುದಾಗಿ ರಶ್ಯಾದ ಘೋಷಣೆ. ಆದರೆ ಇದನ್ನು ತಿರಸ್ಕರಿಸಿರುವ ಉಕ್ರೇನ್, ಬೆಲಾರೂಸ್ ಬದಲು ಇತರ ಸ್ಥಳಗಳ ಪಟ್ಟಿಯನ್ನು ಆನ್ಲೈನ್ನಲ್ಲಿ ಪೋಸ್ಟ್ ಮಾಡಿರುವುದಾಗಿ ರಶ್ಯಾಕ್ಕೆ ತಿಳಿಸಿದೆ.
> ಉಕ್ರೇನ್ಗೆ ನೆರವಾಗಬಯಸುವ ವಿದೇಶದ ಸ್ವಯಂಸೇವಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಅಂತರಾಷ್ಟ್ರೀಯ ಸೇನಾ ತುಕಡಿ ಸ್ಥಾಪಿಸಿರುವುದಾಗಿ ಉಕ್ರೇನ್ ಅಧ್ಯಕ್ಷ ಝೆಲೆಂಸ್ಕಿ ಘೋಷಣೆ.
> ಉಕ್ರೇನ್ ರಾಜಧಾನಿ ಕೀವ್ ಬಿಟ್ಟು ಎಲ್ಲೂ ಹೋಗುವುದಿಲ್ಲ . ರಾಜಧಾನಿ ಈಗಲೂ ನಮ್ಮ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಝೆಲೆಂಸ್ಕಿ ಘೋಷಣೆ.
> ಉಕ್ರೇನ್ ಪಡೆಗಳಿಂದ ಎದುರಾಗಿರುವ ಅನಿರೀಕ್ಷಿತ ಪ್ರತಿರೋಧದಿಂದ ರಶ್ಯಾ ಪಡೆಗಳಿಗೆ ಹತಾಶೆ, ಕೀವ್ನತ್ತ ಮುನ್ನುಗ್ಗುವ ಪ್ರಕ್ರಿಯೆ ನಿಧಾನಗತಿಯಲ್ಲಿದೆ ಎಂದು ಅಮೆರಿಕದ ಸೇನಾಧಿಕಾರಿಯ ಹೇಳಿಕೆ. ತನ್ನ ಆಕ್ರಮಣ ಪಡೆಯ 50%ದಷ್ಟನ್ನು ರಶ್ಯಾ ಈಗ ಉಕ್ರೇನ್ನೊಳಗೆ ನುಗ್ಗಿಸಿದೆ ಎಂದು ಪೆಂಟಗಾನ್ ಮಾಹಿತಿ.
> ‘ಸ್ವಿಫ್ಟ್’ ಜಾಗತಿಕ ಪಾವತಿ ವ್ಯವಸ್ಥೆಯಿಂದ ರಶ್ಯಾವನ್ನು ಹೊರಗಿಡಲು ಜರ್ಮನ್ ಹಾಗೂ ಮಿತ್ರದೇಶಗಳು ಒಪ್ಪಿವೆ ಎಂದು ಜರ್ಮನ್ ಸರಕಾರದ ವಕ್ತಾರರ ಹೇಳಿಕೆ.
> ಇದುವರೆಗೆ ಸುಮಾರು 3,500 ರಶ್ಯಾದ ಸೈನಿಕರು ಹತರಾಗಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಪ್ರಧಾನಿಯ ಸಲಹೆಗಾರ ಒಲೆಕ್ಸಿ ಅರೆಸ್ಟೊವಿಚ್ ಹೇಳಿಕೆ. ಕೀವ್ ಸುತ್ತಮುತ್ತ ಶತ್ರುಗಳ ಮೇಲೆ ಪ್ರಹಾರ ನಡೆಸುತ್ತಿದ್ದೇವೆ. ಅವರಿಗೆ ಮುಂದುವರಿಯಲು ಸಾಧ್ಯವಾಗುತ್ತಿಲ್ಲ ಎಂದು ಮಾಹಿತಿ.
> ಶಸ್ತ್ರಾಸ್ತ್ರ ದಾಸ್ತಾನಿನಿಂದ ಉಕ್ರೇನ್ಗೆ ತಕ್ಷಣ 350 ಮಿಲಿಯನ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಪೂರೈಸಲು ವಿದೇಶ ವ್ಯವಹಾರ ಇಲಾಖೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೂಚನೆ. ಉಕ್ರೇನ್ಗೆ ಮಿಲಿಟರಿ ಉಪಕರಣ ಪೂರೈಕೆಗೆ ಜರ್ಮನ್ ಮತ್ತು ಫ್ರಾನ್ಸ್ ಕೂಡಾ ನಿರ್ಧಾರ.
> ಉಕ್ರೇನ್ ಮೇಲೆ ರಶ್ಯಾದ ಆಕ್ರಮಣ ಆರಂಭವಾದಂದಿನಿಂದ ಉಕ್ರೇನ್ನಿಂದ ಸುಮಾರು 1 ಲಕ್ಷ ನಿರಾಶ್ರಿತರು ಗಡಿದಾಟಿ ದೇಶದೊಳಗೆ ಬಂದಿರುವುದಾಗಿ ಪೋಲಂಡ್ ಹೇಳಿಕೆ. ಇಷ್ಟೇ ಸಂಖ್ಯೆಯ ಜನರು ಆಂತರಿಕವಾಗಿ ಸ್ಥಳಾಂತರಗೊಂಡಿರುವುದಾಗಿ ವಿಶ್ವಸಂಸ್ಥೆ ಅಂದಾಜಿಸಿದೆ. ಉಕ್ರೇನ್ ಗಡಿ ದಾಟಿ ಹಂಗರಿ ಮತ್ತು ರೊಮಾನಿಯಾಕ್ಕೆ ಸುಮಾರು 50,000 ಜನ ಹಾಗೂ ಮೊಲ್ದೊವಾಕ್ಕೆ ಸಾವಿರಾರು ಮಂದಿ ವಲಸೆ ಹೋಗಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಖಾರ್ಕಿವ್ನಲ್ಲಿ ಉಕ್ರೇನ್-ರಶ್ಯಾ ಯೋಧರ ಮಧ್ಯೆ ಬೀದಿ ಕಾಳಗ
ಉಕ್ರೇನ್ ಮೇಲಿನ ಆಕ್ರಮಣದ 4ನೇ ದಿನ ರಶ್ಯನ್ ಪಡೆಗಳು ಉಕ್ರೇನ್ನ 2ನೇ ದೊಡ್ಡನಗರ ಖಾರ್ಕಿವ್ಗೆ ಮುತ್ತಿಗೆ ಹಾಕಿದ್ದು ನಗರದ ಬೀದಿಗಳು ವಸ್ತುಶಃ ರಣರಂಗವಾಗಿಬಿಟ್ಟಿದ್ದು ಉಭಯ ಪಡೆಗಳ ಮಧ್ಯೆ ಬೀದಿಕಾಳಗ ಮುಂದುವರಿದಿದೆ ಎಂದು ನಗರದ ಆಡಳಿತ ಹೇಳಿದೆ.
ಲಘು ಸೇನಾವಾಹನಗಳ ಸಹಿತ ರಶ್ಯಾ ಶತ್ರುಪಡೆ ಖಾರ್ಕಿವ್ಗೆ ನುಗ್ಗಿದೆ. ನಗರದ ಜನತೆ ತಾವಿರುವ ಸ್ಥಳ ಬಿಟ್ಟು ಹೊರಬರಬಾರದು ಎಂದು ಖಾರ್ಕಿವ್ ಪ್ರಾದೇಶಿಕ ಮುಖ್ಯಸ್ಥ ಒಲೆಗ್ ಸಿನೆಗುಬೋವ್ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ. ರಶ್ಯಾದ ಸೇನಾವಾಹನ ಖಾರ್ಕಿವ್ನ ರಸ್ತೆಯಲ್ಲಿ ಸಂಚರಿಸುತ್ತಿರುವ ಮತ್ತು ರಸ್ತೆ ಬದಿಯಲ್ಲಿದ್ದ ವಾಹನವೊಂದು ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಶನಿವಾರ ರಾತ್ರಿ ಆರಂಭವಾದ ಭೀಕರ ಗುಂಡಿನ ಮತ್ತು ಶೆಲ್ ದಾಳಿ ರವಿವಾರವೂ ಮುಂದುವರಿದಿದೆ ಎಂದು ಖಾರ್ಕಿವ್ನಲ್ಲಿನ ಯುರೋಪಿಯನ್ ಎಕ್ಸ್ಪರ್ಟ್ ಅಸೋಸಿಯೇಷನ್ನ ಸಂಶೋದನಾ ನಿರ್ದೇಶಕಿ ಮರಿಯಾ ಅವ್ದೀವಾರನ್ನು ಉಲ್ಲೇಖಿಸಿ ಅಲ್ಜಝೀರಾ ವರದಿ ಮಾಡಿದೆ. ರಶ್ಯಾದ ಸೇನೆಯ ಸಣ್ಣ ಗುಂಪೊಂದು ಲಘುವಾಹನದಲ್ಲಿ ಖಾರ್ಕಿವ್ ನಗರವನ್ನು ಪ್ರವೇಶಿಸಿದ್ದು ಕೆಲವು ಸೈನಿಕರು ಹಾಗೂ ವಾಹನಗಳನ್ನು ಉಕ್ರೇನ್ನ ಸೇನೆ ನಾಶಗೊಳಿಸಿದೆ ಎಂದು ನಮಗೆ ಮಾಹಿತಿ ನೀಡಲಾಗಿದೆ. ಉಳಿದ ಸೈನಿಕರು ನಗರದತ್ತ ಮುನ್ನುಗ್ಗುತ್ತಿದ್ದಾರೆ . ಈಗ ಇಲ್ಲಿನ ಪರಿಸ್ಥಿತಿ ಅಸ್ಥಿರವಾಗಿದ್ದು ಉಕ್ರೇನ್ನ ಯೋಧರು ತೀವ್ರವಾಗಿ ಹೋರಾಡುತ್ತಿದ್ದಾರೆ. ಇವರ ಜತೆ ಪ್ರಾದೇಶಿಕ ರಕ್ಷಣಾ ದಳ ಕೈಜೋಡಿಸಿದ್ದು ಈಗ ಬೀದಿಯಲ್ಲಿ ಕಾಳಗ ಆರಂಭವಾಗಿದೆ. ನಗರದ ನಾಲ್ಕೂ ದಿಕ್ಕಿನಲ್ಲಿ ರಶ್ಯಾ ಪಡೆ ದಿಗ್ಬಂಧನ ಹಾಕಿದ್ದು ನಗರದಿಂದ ಯಾರೂ ಹೊರಹೋಗಲು ಸಾಧ್ಯವಾಗುತ್ತಿಲ್ಲ ಎಂದವರು ಹೇಳಿದ್ದಾರೆ.
ಖಾರ್ಕಿವ್ನ ಉತ್ತರದಲ್ಲಿರುವ ನಿಪ್ರೊ ನಗರದಲ್ಲಿ ರಶ್ಯಾದ ಪಡೆಗಳು ಗ್ಯಾಸ್ ಪೈಪ್ಲೈನ್ ಅನ್ನು ಸ್ಫೋಟಿಸಿವೆ ಎಂದು ಅಲ್ಜಝೀರಾ ವರದಿ ಮಾಡಿದೆ. ಉಕ್ರೇನ್ನ ಈಶಾನ್ಯದಲ್ಲಿರುವ ಖಾರ್ಕಿವ್, ರಶ್ಯಾ ಪರ ಪ್ರತ್ಯೇಕತಾವಾದಿಗಳ ವಶದಲ್ಲಿರುವ ಲುಹಾಂಸ್ಕ್ ಮತ್ತು ಡೊನೆತ್ಸ್ಕ್ ಪ್ರಾಂತದ ಸಮೀಪದಲ್ಲಿದೆ. ರಶ್ಯಾ ಗಡಿಯ ಸುಮಾರು 40 ಕಿ.ಮೀ ದೂರದ ಈ ನಗರದಲ್ಲಿನ ಬಹುತೇಕ ನಿವಾಸಿಗಳು ಜನಾಂಗೀಯವಾಗಿ ರಶ್ಯನ್ನರು ಮತ್ತು ಈ ಹಿಂದೆ ಹಲವು ಬಾರಿ ರಶ್ಯಾಕ್ಕೆ ಬೆಂಬಲ ಸೂಚಿಸಿದ್ದರು. ಖಾರ್ಕಿವ್ ಹಾಗೂ ರಶ್ಯಾದ ಮಧ್ಯೆ ವಾಣಿಜ್ಯ ಮತ್ತು ಕೌಟುಂಬಿಕ ಸಂಬಂಧವೂ ಬಹಳಷ್ಟಿದೆ. ಹಾಗಿದ್ದರೂ, ಈಗಿನ ಸಂಘರ್ಷದಲ್ಲಿ ಇಲ್ಲಿನ ಜನತೆ ಉಕ್ರೇನ್ ಪರ ನಿಂತಿರುವುದು ರಶ್ಯಾಕ್ಕೆ ಅಚ್ಚರಿ ತಂದಿದೆ.
ಖಾರ್ಕಿವ್ ಅನ್ನು ಸುಲಭದಲ್ಲಿ ವಶಕ್ಕೆ ಪಡೆದು ಕೀವ್ನತ್ತ ಮುನ್ನುಗ್ಗಬಹುದು ಎಂಬ ರಶ್ಯಾದ ಲೆಕ್ಕಾಚಾರ ಆರಂಭದಲ್ಲೇ ಕೈಕೊಟ್ಟಿದೆ ಎಂದು ಮರಿಯಾ ಅವ್ದೀವಾ ಹೇಳಿದ್ದಾರೆ.
ಖಾರ್ಕಿವ್ ಅನ್ನು ಸುಲಭವಾಗಿ ಕೈವಶ ಮಾಡಿಕೊಂಡು ದಕ್ಷಿಣದಲ್ಲಿನ ನಿಪ್ರೊ ನಗರದತ್ತ ಮುನ್ನುಗ್ಗುವುದು ರಶ್ಯಾದ ಯೋಜನೆಯಾಗಿದೆ. 2014ರಲ್ಲಿ ಪೂರ್ವ ಉಕ್ರೇನ್ನಲ್ಲಿ ಯುದ್ಧ ನಡೆದಾಗ ನಿಪ್ರೊ ನಗರವನ್ನು ಪ್ರಧಾನ ಸೇನಾ ನೆಲೆಯನ್ನಾಗಿಸಿಕೊಂಡು ಉಕ್ರೇನ್ ಪಡೆ ಕಾರ್ಯಾಚರಣೆ ನಡೆಸಿ ಪ್ರತ್ಯೇಕತಾವಾದಿಗಳನ್ನು ಹಿಮ್ಮೆಟ್ಟಿಸಿದೆ ಎಂದವರು ವಿವರಿಸಿದ್ದಾರೆ.
ಈ ಮಧ್ಯೆ, ರಾಜಧಾನಿ ಕೀವ್ನಲ್ಲಿ ರವಿವಾರ ಬೆಳಿಗ್ಗೆ ಭಾರೀ ಸ್ಫೋಟ ಸಂಭವಿಸಿದ್ದು ಬೆಂಕಿಯ ಕೆನ್ನಾಲಗೆ ಆಗಸದೆತ್ತರಕ್ಕೆ ಚಿಮ್ಮಿದೆ. ಉಭಯ ಪಡೆಗಳ ಮಧ್ಯೆ ತೀವ್ರ ಸಂಷರ್ಘ ನಡೆಯುತ್ತಿರುವ ವ್ಯಾಸಿಲ್ಕಿವ್ ವಾಯುನೆಲೆಯ ಬಳಿಯ ತೈಲ ಸಂಗ್ರಹಾಗಾರದಲ್ಲಿ ಈ ಸ್ಫೋಟ ಸಂಭವಿಸಿದೆ . ಝುಲಿಯಾನಿ ವಿಮಾನ ನಿಲ್ದಾಣದಲ್ಲಿ ಮತ್ತೊಂದು ಸ್ಫೋಟ ಸಂಭವಿಸಿದೆ ಎಂದು ನಗರದ ಮೇಯರ್ ಹೇಳಿದ್ದಾರೆ. ಸ್ಫೋಟದ ಸದ್ದಿನಿಂದ ಭಯಭೀತರಾದ ಜನತೆ ಕಟ್ಟಡದ ನೆಲ ಅಂತಸ್ತಿನಲ್ಲಿ, ರೈಲಿನ ಸುರಂಗಮಾರ್ಗದಲ್ಲಿ ರಕ್ಷಣೆ ಪಡೆದರು ಎಂದು ವರದಿಯಾಗಿದೆ. ರಶ್ಯಾದ ಭೂಸೇನೆ ಉಕ್ರೇನ್ ಮೇಲೆ ಉತ್ತರ, ಪೂರ್ವ ಮತ್ತು ದಕ್ಷಿಣ ಭಾಗದಿಂದ ಆಕ್ರಮಣ ನಡೆಸುತ್ತಿದೆ. ಆದರೆ ಉಕ್ರೇನ್ ಪಡೆಯಿಂದ ತೀವ್ರ ಪ್ರತಿರೋಧ ಎದುರಿಸುತ್ತಿದೆ ಎಂದು ಪಾಶ್ಚಿಮಾತ್ಯ ದೇಶಗಳ ಮೂಲಗಳು ವರದಿ ಮಾಡಿವೆ.







