ಮೊಬೈಲ್ ಫೋನ್ ಬಳಕೆದಾರರು ಸೇವೆಯಲ್ಲಿ ತೊಂದರೆ ಕಂಡುಬಂದರೆ ಗ್ರಾಹಕ ವೇದಿಕೆಗಳಿಗೆ ಹೋಗಬಹುದು: ಸುಪ್ರೀಂ

ಮೊಬೈಲ್ ಫೋನ್
ಹೊಸದಿಲ್ಲಿ,ಫೆ.27: ದೂರಸಂಪರ್ಕ ಸೇವೆಗಳಲ್ಲಿ ಯಾವುದೇ ಕೊರತೆಯನ್ನು ಎದುರಿಸುತ್ತಿರುವ ವ್ಯಕ್ತಿಯು ಕಂಪನಿಯ ವಿರುದ್ಧ ಗ್ರಾಹಕ ವೇದಿಕೆಗೆ ನೇರವಾಗಿ ದೂರನ್ನು ಸಲ್ಲಿಸಬಹುದು ಎಂದು ಸರ್ವೋಚ್ಚ ನ್ಯಾಯಾಲಯವು ಎತ್ತಿ ಹಿಡಿದಿದೆ.
1885ರ ಭಾರತೀಯ ಟೆಲಿಗ್ರಾಫ್ ಕಾಯ್ದೆಯಡಿ ಪರಿಹಾರ ಮಧ್ಯಸ್ಥಿಕೆಯು ಶಾಸನಬದ್ಧ ಸ್ವರೂಪದ್ದಾಗಿದೆ ಎಂಬ ಅಂಶವು ಇಂತಹ ವಿಷಯಗಳಲ್ಲಿ ಗ್ರಾಹಕ ವೇದಿಕೆಯ ಅಧಿಕಾರ ವ್ಯಾಪ್ತಿಯನ್ನು ಪ್ರತಿಬಂಧಿಸುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ಸೂರ್ಯಕಾಂತ್ ಮತ್ತು ವಿಕ್ರಮನಾಥ್ ಅವರ ಪೀಠವು ತನ್ನ ಇತ್ತೀಚಿನ ಆದೇಶದಲ್ಲಿ ತಿಳಿಸಿದೆ.
ಮಧ್ಯಸ್ಥಿಕೆ ಪರಿಹಾರವನ್ನು ಆಯ್ಕ ಮಾಡಿಕೊಳ್ಳಲು ಗ್ರಾಹಕರು ಮುಕ್ತ ಅವಕಾಶವನ್ನು ಹೊಂದಿದ್ದಾರೆ. ಆದರೆ ಹಾಗೆ ಮಾಡುವುದನ್ನು ಕಾನೂನು ಕಡ್ಡಾಯಗೊಳಿಸಿಲ್ಲ. 1986ರ ಗ್ರಾಹಕ ರಕ್ಷಣೆ ಕಾಯ್ದೆ (ಈಗ 2019ರ ಕಾಯ್ದೆ ಎಂದು ಬದಲಾಗಿದೆ)ಯಡಿ ಒದಗಿಸಲಾಗಿರುವ ಪರಿಹಾರ ಮಾರ್ಗಗಳ ಮೊರೆ ಹೋಗಲು ಗ್ರಾಹಕರು ಮುಕ್ತರಾಗಿದ್ದಾರೆ ಎಂದು ಪೀಠವು ಹೇಳಿದೆ.
ವೊಡಾಫೋನ್ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ನಡೆಸಿದ ಸರ್ವೋಚ್ಚ ನ್ಯಾಯಾಲಯವು ಈ ತೀರ್ಪನ್ನು ನೀಡಿದೆ. ಖಾಸಗಿ ದೂರಸಂಪರ್ಕ ಕಂಪನಿಯು ಟೆಲಿಗ್ರಾಫ್ ಪ್ರಾಧಿಕಾರವಲ್ಲ,ಹೀಗಾಗಿ 1885ರ ಕಾಯ್ದೆಯ ಕಲಂ 7ಬಿ ಅದಕ್ಕೆ ಅನ್ವಯಿಸುವುದಿಲ್ಲ ಎಂಬ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಭಿಪ್ರಾಯವನ್ನು ಎತ್ತಿ ಹಿಡಿದಿದ್ದ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಆದೇಶವನ್ನು ವೊಡಾಫೋನ್ ಪ್ರಶ್ನಿಸಿತ್ತು.





