ಸುಶಾಂತ್ ಸಿಂಗ್ ರಜಪೂತ್ ಮಾಜಿ ಮ್ಯಾನೇಜರ್ ಸಾವು ಪ್ರಕರಣ: ಕೇಂದ್ರ ಸಚಿವ ರಾಣೆ, ಶಾಸಕ ವಿರುದ್ಧ ಕ್ರಮಕ್ಕೆ ಮನವಿ

ಮುಂಬೈ, ಫೆ. 27: ನಟ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ಸಾವಿನ ಕುರಿತು ಸುಳ್ಳು ಮಾಹಿತಿ ಹರಡುತ್ತಿರುವ ಸಾಮಾಜಿಕ ಮಾಧ್ಯಮದ ಖಾತೆಯನ್ನು ಸ್ಥಗಿತಗೊಳಿಸುವಂತೆ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗ (ಎಂಎಸ್‌ಸಿಡಬ್ಲು) ಶನಿವಾರ ಪೊಲೀಸರಿಗೆ ಸೂಚಿಸಿದೆ.
ಅಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಸಚಿವ ನಾರಾಯಣ ರಾಣೆ ಹಾಗೂ ಅವರ ಪುತ್ರ, ಶಾಸಕ ನಿತೇಶ್ ರಾಣೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದೆ. 2020 ಜೂನ್‌ನಲ್ಲಿ ದಿಶಾ ಸಾಲಿಯಾನ್ ಅವರ ಸಾವನ್ನಪ್ಪಿದ ಪ್ರಕರಣದ ಕುರಿತು ಬಿಜೆಪಿ ನಾಯಕ ನಾರಾಯಣ ರಾಣೆ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.
ರವಿವಾರ ಸರಣಿ ಟ್ವೀಟ್ ಮಾಡಿರುವ ಎಂಎಸ್‌ಸಿಡಬ್ಲು ಅಧ್ಯಕ್ಷೆ ರೂಪಾಲಿ ಚಕಾಂಕರ್, ಅತ್ಯಾಚಾರ ನಡೆದಿಲ್ಲ ಹಾಗೂ ಗರ್ಭಿಣಿ ಅಲ್ಲ ಎಂದು ದಿಶಾ ಸಾಲಿಯಾನ್ ಅವರ ಮರಣೋತ್ತರ ಪರೀಕ್ಷೆ ವರದಿ ತಿಳಿಸಿದೆ ಎಂದು ಮಲ್ವಾನಿ (ಮುಂಬೈ) ಪೊಲೀಸರು ಆಯೋಗಕ್ಕೆ ತಿಳಿಸಿದ್ದಾರೆ ಎಂದರು. ಸಾವಿನ ಬಳಿಕ ದಿಶಾ ಸಾಲಿಯಾನ್ ಅವರ ಚಾರಿತ್ರ ವಧೆಗೆ ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿ ಸಾಲಿಯಾನ್ ಅವರ ಹೆತ್ತವರು ಆಯೋಗಕ್ಕೆ ದೂರು ನೀಡಿದ್ದರು. ತಮ್ಮ ಪುತ್ರಿಯ ಸಾವಿನ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ತಪ್ಪು ಮಾಹಿತಿಯ ಪೋಸ್ಟ್ ಹಾಕುತ್ತಿರುವ ನಾರಾಯಣ ರಾಣೆ ಹಾಗೂ ನಿತೇಶ್ ರಾಣೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದರು.







