ಉಕ್ರೇನ್ ನಲ್ಲಿ ಅತಂತ್ರರಾಗಿರುವ ಎಲ್ಲ ಭಾರತೀಯರನ್ನು ಸರಕಾರವು ತೆರವುಗೊಳಿಸಲಿದೆ: ಪ್ರಧಾನಿ ಮೋದಿ

ಪ್ರಧಾನಿ ಮೋದಿ
ಬಸ್ತಿ (ಉ.ಪ್ರ),ಫೆ.27: ಉಕ್ರೇನ್ನಲ್ಲಿ ಸಿಕ್ಕಿಹಾಕಿಕೊಂಡಿರುವ ಎಲ್ಲ ಭಾರತೀಯ ಪ್ರಜೆಗಳನ್ನು ಸ್ವದೇಶಕ್ಕೆ ಮರಳಿ ಕರೆತರಲು ಸರಕಾರವು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ರವಿವಾರ ಇಲ್ಲಿ ತಿಳಿಸಿದರು.
ಇಲ್ಲಿ ರ್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ‘ಆಪರೇಷನ್ ಗಂಗಾ’ ಮೂಲಕ ಸಾವಿರಾರು ಭಾರತೀಯರನ್ನು ನಾವು ವಾಪಸ್ ಕರೆತರುತ್ತಿದ್ದೇವೆ. ಇನ್ನೂ ಉಕ್ರೇನ್ನಲ್ಲಿ ಅತಂತ್ರರಾಗಿರುವ ನಮ್ಮ ಮಕ್ಕಳನ್ನು ವಾಪಸ್ ಕರೆತರಲಾಗುವುದು,ಅವರಿಗಾಗಿ ಸರಕಾರವು ಹಗಲಿರುಳು ಶ್ರಮಿಸುತ್ತಿದೆ. ತೊಂದರೆಗಳು ಎದುರಾದಾಗಲೆಲ್ಲ ನಮ್ಮ ಪ್ರಜೆಗಳನ್ನು ಮರಳಿ ಕರೆತರಲು ಎಲ್ಲ ಪ್ರಯತ್ನಗಳನ್ನು ಮಾಡಿದ್ದೇವೆ ’ ಎಂದು ಹೇಳಿದರು.
‘ದಶಕಗಳ ಕಾಲ ಈ ‘ಪರಿವಾರವಾದಿಗಳು’ ನಮ್ಮ ಸೇನೆಯನ್ನು ವಿದೇಶಗಳ ಮೇಲೆ ಅವಲಂಬಿತವಾಗಿರುವಂತೆ ಮಾಡಿದ್ದವು ಮತ್ತು ಭಾರತದ ರಕ್ಷಣಾ ಕ್ಷೇತ್ರವನ್ನು ನಾಶಗೊಳಿಸಿದ್ದವು. ಆದರೆ ಇಂದು ಉತ್ತರ ಪ್ರದೇಶದಲ್ಲಿ ರಕ್ಷಣಾ ಕಾರಿಡಾರ್ ಸ್ಥಾಪನೆಯಾಗುತ್ತಿದೆ ’ ಎಂದರು.
ಸಮಾಜವಾದಿ ಪಕ್ಷದ ನಾಯಕರ ವಿರುದ್ಧ ದಾಳಿ ನಡೆಸಿದ ಮೋದಿ, ಭಯೋತ್ಪಾದಕರ ಬಗ್ಗೆ ಸಹಾನುಭೂತಿಯನ್ನು ಹೊಂದಿರುವವರು ಎಂದಿಗೂ ದೇಶವನ್ನು ಬಲಿಷ್ಠವಾಗಿಸಲಾರರು. ರಾಜ್ಯಗಳು ಬಲಿಷ್ಠಗೊಂಡಾಗ ಮಾತ್ರ ನಮ್ಮ ದೇಶವು ಬಲಿಷ್ಠಗೊಳ್ಳುತ್ತದೆ.ಉತ್ತರ ಪ್ರದೇಶವು ಬಲಿಷ್ಠಗೊಂಡಾಗ ಮಾತ್ರ ನಮ್ಮ ದೇಶವು ಬಲಿಷ್ಠಗೊಳ್ಳುತ್ತದೆ. ತಮ್ಮ ಕುಟುಂಬಗಳ ಖಜಾನೆಗಳಲ್ಲಿ ಹಣವಿದೆ ಎನ್ನುವುದೊಂದೇ ಈ ಪರಿವಾರವಾದಿಗಳ ಏಕೈಕ ಸೂತ್ರವಾಗಿದೆ. ಈ ಕುಟುಂಬಗಳು ನಮ್ಮ ದೇಶವನ್ನೆಂದಿಗೂ ಬಲಿಷ್ಠಗೊಳ್ಳಲು ಬಿಡುವುದಿಲ್ಲ. ಅವರು ದಬ್ಬಾಳಿಕೆ ನಡೆಸುವವರು,ಗೂಂಡಾಗಳು ಮತ್ತು ಮಾಫಿಯಾಗಳನ್ನು ಬಲಿಷ್ಠರಾಗಿಸುತ್ತಾರೆ ’ಎಂದರು.
ದುರ್ಬಲ ಸಮುದಾಯಗಳ ಮತದಾರರು 2014,2017 ಮತ್ತು 2019ರಲ್ಲಿ ಈ ಪರಿವಾರವಾದಿಗಳಿಗೆ ಸೋಲುಣಿಸಿದ್ದಾರೆ. 2022ರ ವಿಧಾನಸಭಾ ಚುನಾವಣೆಗಳಲ್ಲಿ ತಮ್ಮ ಸ್ವಂತ ಸ್ಥಾನಗಳನ್ನು ಉಳಿಸಿಕೊಳ್ಳುವುದೂ ಈ ಪರಿವಾರವಾದಿಗಳಿಗೆ ಕಷ್ಟವಾಗುತ್ತಿದೆ ಎಂದು ಪ್ರಧಾನಿ ಹೇಳಿದರು.
‘ನಾವು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಈ ಬಗ್ಗೆ ಅವರು (ಪ್ರತಿಪಕ್ಷ) ಎಂದಿಗೂ ಗಮನ ಹರಿಸಲಿಲ್ಲ. ಈಗ ಕಬ್ಬಿನ ನೆರವಿನಿಂದ ಎಥೆನಾಲ್ ತಯಾರಿಸಬಹುದು. ನಮ್ಮ ಸರಕಾರವು ಎಥೆನಾಲ್ ಸ್ಥಾವರಗಳ ಜಾಲವನ್ನು ಸ್ಥಾಪಿಸುತ್ತಿದೆ ’ಎಂದ ಅವರು,ಈ ಜನರು ಪ್ರತಿಯೊಂದೂ ವ್ಯವಹಾರದಲ್ಲಿ ಕಮಿಷನ್ ಅನ್ನು ಮಾತ್ರವೇ ಬಯಸುತ್ತಾರೆ. ಅವರು ಭಾರತವನ್ನು ಆತ್ಮನಿರ್ಭರವನ್ನಾಗಿಸಲು ಬಯಸುವುದಿಲ್ಲ. ಇದುವೇ ರಾಷ್ಟ್ರಭಕ್ತಿ ಮತ್ತು ಪರಿವಾರ ಭಕ್ತಿ ನಡುವಿನ ವ್ಯತ್ಯಾಸವಾಗಿದೆ ಎಂದರು.
ಪಿಪ್ರೈಚ್ನಲ್ಲಿ ಡಿಸ್ಟಿಲರಿಯೊಂದನ್ನು ಸ್ಥಾಪಿಸಲಾಗಿದ್ದು,ಅಲ್ಲಿ ಪ್ರತಿದಿನ ನೂರಾರು ಲೀ.ಎಥೆನಾಲ್ ಅನ್ನು ಉತ್ಪಾದಿಸಲಾಗುವುದು. ಸರಕಾರವು ದೇಶದಲ್ಲಿ ನೂರಾರು ಜೈವಿಕ ಅನಿಲ ಸ್ಥಾವರಗಳನ್ನು ಸ್ಥಾಪಿಸುತ್ತಿದ್ದು,ಆಕಳ ಸೆಗಣಿ ಮತ್ತು ಮನೆಗಳಿಂದ ಸಂಗ್ರಹಿತ ತ್ಯಾಜ್ಯಗಳನ್ನು ಅವುಗಳಲ್ಲಿ ಬಳಸಲಾಗುವುದು ಎಂದು ಮೋದಿ ತಿಳಿಸಿದರು.







