ರಶ್ಯಾದ 4,300 ಯೋಧರ ಮೃತ್ಯು: ಉಕ್ರೇನ್ ಹೇಳಿಕೆ
"ಶಾಲೆ, ಆಂಬ್ಯುಲೆನ್ಸ್, ಶಿಶುವಿಹಾರದ ಮೇಲೆ ರಶ್ಯಾ ಬಾಂಬ್ ದಾಳಿ"

ಕೀವ್, ಫೆ.27: ಉಕ್ರೇನ್ ಮೇಲಿನ ಆಕ್ರಮಣದಲ್ಲಿ ಇದುವರೆಗೆ ರಶ್ಯಾದ 4,300 ಯೋಧರು ಮೃತಪಟ್ಟಿರುವುದಾಗಿ ಮಾಹಿತಿ ಲಭಿಸಿದೆ. ಈ ಅಂಕಿಅಂಶವನ್ನು ಸ್ಪಷ್ಟಪಡಿಸಿಕೊಳ್ಳಲಾಗುತ್ತಿದೆ ಎಂದು ಉಕ್ರೇನ್ನ ಸಹಾಯಕ ರಕ್ಷಣಾ ಸಚಿವೆ ಹ್ಯಾನಾ ಮಲ್ಯಾರ್ ರವಿವಾರ ಹೇಳಿದ್ದಾರೆ.
ರಶ್ಯಾದ 146 ಟ್ಯಾಂಕ್ಗಳು, 27 ಯುದ್ಧವಿಮಾನ ಮತ್ತು 26 ಹೆಲಿಕಾಪ್ಟರ್ಗಳನ್ನು ಹೊಡೆದುರುಳಿಸಲಾಗಿದೆ ಎಂದವರು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಶಾಲೆ, ಆಂಬ್ಯುಲೆನ್ಸ್, ಶಿಶುವಿಹಾರದ ಮೇಲೆ ರಶ್ಯಾ ಬಾಂಬ್ ದಾಳಿ: ಉಕ್ರೇನ್ ಅಧ್ಯಕ್ಷ
ಜನವಸತಿ ಪ್ರದೇಶ, ಶಾಲೆ, ಶಿಶುವಿಹಾರ, ಆಂಬ್ಯುಲೆನ್ಸ್ ಹೀಗೆ ಎಲ್ಲದರ ಮೇಲೂ ರಶ್ಯಾ ಬಾಂಬ್ ದಾಳಿ ನಡೆಸುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆಂಸ್ಕಿ ರವಿವಾರ ಹೇಳಿದ್ದಾರೆ.
ಕಳೆದ ರಾತ್ರಿ ಉಕ್ರೇನ್ ನ ಪಾಲಿಗೆ ಮತ್ತೊಂದು ಕ್ರೂರ ರಾತ್ರಿಯಾಗಿತ್ತು. ಜನವಸತಿ ಪ್ರದೇಶ, ನಾಗರಿಕ ಮೂಲಸೌಕರ್ಯ ವ್ಯವಸ್ಥೆ ಇತ್ಯಾದಿ ಪ್ರತಿಯೊಂದರ ಮೇಲೂ ಅವರು ಬಾಂಬ್ ದಾಳಿ ನಡೆಸಿದರು. ಆಕ್ರಮಣಕಾರರು ಸ್ವೀಕಾರಾರ್ಹ ಗುರಿ ಅಲ್ಲ ಎಂದು ಪರಿಗಣಿಸದ ಒಂದೇ ಒಂದು ವಸ್ತುವೂ ದೇಶದಲ್ಲಿ ಇಲ್ಲ. ಶಿಶುವಿಹಾರ, ವಸತಿ ಸಮುಚ್ಛಯ, ಆಂಬ್ಯುಲೆನ್ಸ್ಗಳ ಮೇಲೂ ಆಕ್ರಮಣ ನಡೆಸಿದ್ದಾರೆ. ಎಲ್ಲರ ವಿರುದ್ಧವೂ, ಜೀವಿಸಿರುವ ಎಲ್ಲರ ವಿರುದ್ಧವೂ ಅವರು ದಾಳಿ ನಡೆಸುತ್ತಿದ್ದಾರೆ ಎಂದು ಝೆಲೆಂಸ್ಕಿ ಟ್ವೀಟ್ ಮಾಡಿದ್ದಾರೆ.
ಉಕ್ರೇನ್ ನ ವ್ಯಾಸಿಲಿಕಿವ್, ಕಿವ್, ಚೆರ್ನಿಗಿವ್, ಸುಮಿ, ಖಾರ್ಕಿವ್ ಹಾಗೂ ಇತರ ಹಲವು ನಗರಗಳಲ್ಲಿ ಯಾವುದೇ ಸೇನಾ ನೆಲೆಗಳಿಲ್ಲ. ಆದರೂ ಈ ನಗರಗಳನ್ನು ಗುರಿಯಾಗಿಸಿ ಅವರು ಬಾಂಬ್ ಮತ್ತು ಕ್ಷಿಪಣಿ ದಾಳಿ ನಡೆಸಿದ್ದಾರೆ. ನಾಗರಿಕ ಸ್ಥಳಗಳ ಮೇಲೆ ಇಂತಹ ದಾಳಿ ಈ ಹಿಂದೆ 2ನೇ ವಿಶ್ವಯುದ್ಧದ ಸಂದರ್ಭ ನಡೆದಿತ್ತು ಎಂದವರು ಹೇಳಿದ್ದಾರೆ.







