ಭಾರತೀಯರಿಗೆ ವೀಸಾ ಪಡೆಯಲು ವೈಯಕ್ತಿಕ ಸಂದರ್ಶನ ಮನ್ನಾ ಮಾಡಿದ ಅಮೆರಿಕ

ವಾಷಿಂಗ್ಟನ್, ಫೆ.27: ಅಮೆರಿಕದ ವೀಸಾ ಪಡೆಯಲು ಅಗತ್ಯವಿರುವ ವೈಯಕ್ತಿಕ ಸಂದರ್ಶನ ಪ್ರಕ್ರಿಯೆಯನ್ನು ಈ ವರ್ಷದ ಡಿಸೆಂಬರ್ 31ರವರೆಗೆ ಭಾರತೀಯರಿಗೆ ಮನ್ನಾ ಮಾಡಲಾಗಿದೆ ಎಂದು ಅಮೆರಿಕದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.
ವಿದ್ಯಾರ್ಥಿಗಳು (ಎಫ್-1, ಎಂ-1, ಶೈಕ್ಷಣಿಕ ಜೆ ವೀಸಾ), ಉದ್ಯೋಗಿಗಳು( ಎಚ್-1, ಎಚ್-2, ಎಚ್-3 ಮತ್ತು ವೈಯಕ್ತಿಕ ವೀಸಾ), ಸಾಂಸ್ಕೃತಿಕ ಮತ್ತು ಅಸಾಮಾನ್ಯ ಸಾಮರ್ಥ್ಯ(ಒ, ಪಿ ಮತ್ತು ಕ್ಯೂ ವೀಸಾ)ದ ವೀಸಾಕ್ಕೆ ಅರ್ಜಿ ಸಲ್ಲಿಸುವವರು ಈ ಅವಕಾಶಕ್ಕೆ ಅರ್ಹರಾಗಿರುತ್ತಾರೆ. ಅಮೆರಿಕದ ವಿದೇಶಾಂಗ ಸಚಿವಾಲಯದ ದಕ್ಷಿಣ ಮಧ್ಯ ಏಶ್ಯಾ ವಿಭಾಗದ ಸಹಾಯಕ ಕಾರ್ಯದರ್ಶಿ ಡೊನಾಲ್ ಲು ಈ ಮಾಹಿತಿ ನೀಡಿದ್ದಾರೆ ಎಂದು ಎಂದು ಭಾರತೀಯ ಸಮುದಾಯದ ಮುಖಂಡ, ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರಿಗೆ ಏಶ್ಯನ್ ಅಮೆರಿಕನ್ನರ ವಿಷಯದಲ್ಲಿ ಸಲಹೆಗಾರರಾಗಿರುವ ಅಜಯ್ ಜೈನ್ ಭುಟೋರಿಯಾ ಹೇಳಿದ್ದಾರೆ.
ಈ ವಿಸ್ತರಿತ ಮನ್ನಾದ ಸೌಲಭ್ಯ ಪಡೆಯುವವರು ಅರ್ಜಿ ಸಲ್ಲಿಸುವ ದೇಶದ ನಿವಾಸಿ ಅಥವಾ ಪ್ರಜೆಯಾಗಿರಬೇಕು. ಅಲ್ಲದೆ ಈ ಹಿಂದೆ ಯಾವುದಾದರೊಂದು ವಿಭಾಗದಲ್ಲಿ ಅಮೆರಿಕದ ವೀಸಾ ಪಡೆದಿರಬೇಕು ಮತ್ತು ಅವರ ವೀಸಾ ಅರ್ಜಿ ತಿರಸ್ಕೃತಗೊಂಡಿರಬಾರದು ಅಥವಾ ವೀಸಾ ಪಡೆಯಲು ಅನರ್ಹರೆಂದು ಗುರುತಿಸಿಕೊಂಡಿರಬಾರದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.





