ಉಕ್ರೇನ್ ನಾಗರಿಕರ ಆಕ್ರೋಶಕ್ಕೆ ಕಾರಣವಾದ ಭಾರತದ ನಿಲುವು : ವಿದ್ಯಾರ್ಥಿಗಳ ಅಳಲು

ಹೊಸದಿಲ್ಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಉಕ್ರೇನ್ ವಿರುದ್ಧದ ರಷ್ಯಾ ದಾಳಿಯನ್ನು ಖಂಡಿಸುವ ನಿರ್ಣಯ ಮೇಲಿನ ಮತದಾನದಿಂದ ಭಾರತ ದೂರ ಉಳಿದಿರುವುದು ಯುದ್ಧಪೀಡಿತ ದೇಶದಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳಿಗೆ ಉರುಳಾಗಿ ಪರಿಣಿಸಿದೆ.
ಭಾರತ ಮತದಾನದಿಂದ ಹೊರಗುಳಿದ ಹಿನ್ನೆಲೆಯಲ್ಲಿ ಗಡಿ ರಕ್ಷಣಾ ಸಿಬ್ಬಂದಿ ಭಾರತೀಯ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎನ್ನುವುದು ಅವರ ಅಳಲು.
ಯುದ್ಧಪೀಡಿತ ಉಕ್ರೇನ್- ಪೋಲಂಡ್ ಗಡಿ ಸಮೀಪ ಚೆಕ್‌ಪೋಸ್ಟ್‌ಗಳಲ್ಲಿ ತಮಗೆ ಕಿರುಕುಳ ನೀಡಲಾಗುತ್ತಿದೆ ಎಂದು ಅತಂತ್ರರಾಗಿರುವ ಭಾರತೀಯ ವಿದ್ಯಾರ್ಥಿಗಳು ಆಪಾದಿಸಿದ್ದಾರೆ. ಮೈಕೊರೆಯುವ ಚಳಿಯಲ್ಲಿ ಅನ್ನ- ನೀರು, ವಸತಿ ಅಥವಾ ಸುರಕ್ಷಿತವಾಗಿ ತೆರಳುವ ಮಾರ್ಗವನ್ನೂ ಕಲ್ಪಿಸದೇ ಒತ್ತೆಯಾಳುಗಳ ರೀತಿ ನಮ್ಮನ್ನು ನಡೆಸಿಕೊಳ್ಳಲಾಗುತ್ತಿದೆ ಎಂದು ದೂರಿದ್ದಾರೆ.
ಉಕ್ರೇನ್ ಸೈನಿಕರು ಎಚ್ಚರಿಕೆಯ ಸಂಕೇತವಾಗಿ ಗುಂಡು ಹಾರಿಸುವುದು ಮತ್ತು ಭಾರತೀಯ ವಿದ್ಯಾರ್ಥಿಗಳ ಗುಂಪನ್ನು ಚದುರಿಸಲು ಬಲ ಪ್ರಯೋಗ ಮಾಡುತ್ತಿರುವ ವೀಡಿಯೊವನ್ನು ವಿದ್ಯಾರ್ಥಿಗಳು ಶೇರ್ ಮಾಡಿದ್ದಾರೆ.
ಭಾರತೀಯ ವಿದ್ಯಾರ್ಥಿನಿಯೊಬ್ಬರನ್ನು ಸೈನಿಕರು ತಳ್ಳುತ್ತಿರುವ ಚಿತ್ರಣ ಮತ್ತೊಂದು ವೀಡಿಯೊದಲ್ಲಿದೆ. ಈ ವಿದ್ಯಾರ್ಥಿನಿ ಸೈನಿಕರ ಕಾಲಿಗೆ ಬಿದ್ದು ಗಡಿ ದಾಟಲು ಅವಕಾಶ ನೀಡುವಂತೆ ಬೇಡುತ್ತಿರುವ ದೃಶ್ಯ ಮನ ಕಲುಕುವಂತಿದೆ. ಉಕ್ರೇನ್ ನಾಗರಿಕರು ಕೂಡಾ ಭಾರತೀಯ ವಿದ್ಯಾರ್ಥಿಗಳ ಬಗ್ಗೆ ದ್ವೇಷಭಾವನೆ ಹೊಂದಿದ್ದಾರೆ ಎಂದು ಹಲವು ವಿದ್ಯಾರ್ಥಿಗಳು ಆಪಾದಿಸಿದ್ದಾರೆ.
ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಹಲವು ವಿಶ್ವವಿದ್ಯಾನಿಲಯಗಳಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಸುರಕ್ಷಿತವಾಗಿ ತಾಯ್ನಾಡಿಗೆ ಬರಲು ಹರಸಾಸಹ ಮಾಡುತ್ತಿದ್ದು, ಪೋಲಂಡ್ ಗಡಿಯಲ್ಲಿ ಅತಂತ್ರರಾಗಿದ್ದಾರೆ.
ರೈಲು, ಕಾರು ಅಥವಾ ಬಸ್‌ನಲ್ಲಿ ಯುದ್ಧಪೀಡಿತ ಪ್ರದೇಶಗಳಿಂದ ತಪ್ಪಿಸಿಕೊಂಡಿರುವ ಹಲವು ವಿದ್ಯಾರ್ಥಿಗಳು ದೇಶದ ಗಡಿಬೇಲಿ ದಾಟಲು ಹಲವು ಮೈಲುಗಳನ್ನು ನಡೆದಿದ್ದಾರೆ.
ರವಿವಾರ ಮಧ್ಯಾಹ್ನದ ವೇಳೆಗೆ 250 ಭಾರತೀಯ ವಿದ್ಯಾರ್ಥಿಗಳು ಚೆಕ್ ಪಾಯಿಂಟ್ ಮೂಲಕ ಪೋಲಂಡ್‌ಗೆ ಬಂದಿದ್ದಾರೆ ಎಂದು ಇಂಡೋ- ಪೋಲಿಷ್ ಚೇಂಬರ್ ಆಫ್ ಕಾಮರ್ಸ್‌ನ ಉಪಾಧ್ಯಕ್ಷ ಅಮಿತ್ ಲತ್ ಹೇಳಿದ್ದಾರೆ.
ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರಕ್ಕೆ ಅವರು ಪೋಲಂಡ್‌ನಲ್ಲಿ ಭಾರತೀಯ ರಾಯಭಾರ ಕಚೇರಿ ಜತೆ ನಿಕಟ ಸಂಪರ್ಕದಲ್ಲಿದ್ದಾರೆ. ಈ ವಿದ್ಯಾರ್ಥಿಗಳನ್ನು ಪೋಲೆಂಡ್‌ನ ಹೋಟೆಲ್‌ನಲ್ಲಿ ಇರಿಸಲಾಗಿದೆ. ಇನ್ನೂ ಉಕ್ರೇನ್‌ನಲ್ಲಿರುವ ಸಾವಿರಾರು ಮಂದಿಯ ಬಗ್ಗೆ ಅವರು ಆತಂಕಿತರಾಗಿದ್ದಾರೆ.







