ಹೆಣ್ಣುಮಕ್ಕಳ ವಿವಾಹ ವಯಸ್ಸು ಏರಿಕೆಯಿಂದ ಯಾವ ಪ್ರಯೋಜನವೂ ಇಲ್ಲ: ಆರೆಸ್ಸೆಸ್ ಮಹಿಳಾ ಘಟಕ

ಹೊಸದಿಲ್ಲಿ: ಹೆಣ್ಣುಮಕ್ಕಳು ಸೂಕ್ತ ಶಿಕ್ಷಣ ಪಡೆದ ಬಳಿಕ ವಿವಾಹವಾಗಬೇಕು. ಆದರೆ ವಿವಾಹ ವಯಸ್ಸು ಏರಿಕೆಯಿಂದ ಅಪೇಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಿಲ್ಲ ಎಂದು ಆರೆಸ್ಸೆಸ್‌ನ ಮಹಿಳಾ ಘಟಕವಾದ ರಾಷ್ಟ್ರೀಯ ಸೇವಿಕಾ ಸಮಿತಿ ಅಭಿಪ್ರಾಯಪಟ್ಟಿದೆ.
ರಾಷ್ಟ್ರೀಯ ಸ್ವಯಂಸೇವಕರ ಸಂಘದ ಪ್ರತಿನಿಧಿ ಸಭಾದ ಮೂರು ದಿನಗಳ ಅಧಿವೇಶನ ಮಾರ್ಚ್ 11ರಿಂದ ಆರಂಭವಾಗುವ ಹಿನ್ನೆಲೆಯಲ್ಲಿ ಸಂಘದ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ. ಹೆಣ್ಣುಮಕ್ಕಳ ವಿವಾಹದ ವಯಸ್ಸನ್ನು 18 ರಿಂದ 21 ವರ್ಷಕ್ಕೆ ಹೆಚ್ಚಿಸುವ ಪ್ರಸ್ತಾವ ಸೇರಿದಂತೆ ಹಲವು ವಿಷಯಗಳು ಈ ಸಭೆಯಲ್ಲಿ ಚರ್ಚೆಗೆ ಬರುವ ನಿರೀಕ್ಷೆ ಇದೆ.
ಕಳೆದ ಚಳಿಗಾಲದ ಅಧಿವೇಶನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಸ್ಮೃತಿ ಇರಾನಿ, ಹೆಣ್ಣುಮಕ್ಕಳ ವಿವಾಹ ವಯಸ್ಸನ್ನು 18 ರಿಂದ 21 ವರ್ಷಕ್ಕೆ ಹೆಚ್ಚಿಸುವ ಮಸೂದೆಯನ್ನು ಮಂಡಿಸಿದ್ದರು. ಆದರೆ ಮಸೂದೆಯನ್ನು ವಿಸ್ತೃತ ಚರ್ಚೆಗಾಗಿ ಸಂಸದೀಯ ಸ್ಥಾಯಿ ಸಮಿತಿಗೆ ಪರಾಮರ್ಶೆಗೆ ನೀಡಲಾಗಿದೆ.
ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಹಾಗೂ ಗಂಡುಮಕ್ಕಳಿಗೆ ಸಮಾನ ಅವಕಾಶ ನೀಡುವ ನಿಟ್ಟಿನಲ್ಲಿ ಈ ಪ್ರಸ್ತಾವಿತ ಮಸೂದೆ ಮಹತ್ವದ ಹೆಜ್ಜೆ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸರ್ಕಾರ ಬಿಂಬಿಸಿದೆ. "ಸೂಕ್ತವಾಗಿ ಬೆಳೆಸಿದ ಬಳಿಕ ಹಾಗೂ ಶಿಕ್ಷಣ ನೀಡಿದ ಬಳಿಕ ಹೆಣ್ಣುಮಕ್ಕಳು ವಿವಾಹವಾಗಬೇಕು. ಈ ಮೂಲಕ ಅವರು ಸಶಕ್ತರಾಗಬೇಕು" ಎಂದು ಪ್ರಸ್ತಾವವನ್ನು ವಿರೋಧಿಸಿ ಪ್ರಚಾರ್ ಪ್ರಮುಖ್ ಸುನಿಲಾ ಸೋಹ್ವಾನಿ ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರದ ನಡೆ ಬಗ್ಗೆ ಪ್ರಶ್ನಿಸಿದಾಗ, ನಮ್ಮ ಸಂಘಟನೆ ಸಮಾಜದ ವಿವಿಧ ಮೂಲಗಳಿಂದ ಪ್ರತಿಕ್ರಿಯೆಗಳನ್ನು ಪಡೆದಿದ್ದು, ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ ಎಂದು ಹೇಳಿದರು.
ವಿವಾಹದಂಥ ಸಾಮಾಜಿಕ ವಿಚಾರದಲ್ಲಿ ಹೆಣ್ಣುಮಕ್ಕಳ ವಿವಾಹ ವಯಸ್ಸಿನ ಏರಿಕೆ ಅಪೇಕ್ಷಿತ ಫಲಿತಾಂಶ ನೀಡದು. ಬದಲಾಗಿ ವಿಸ್ತೃತ ಚರ್ಚೆ ನಡೆಸುವ ಮೂಲಕ ಸಾರ್ವಜನಿಕ ಜಾಗೃತಿ ಮೂಡಿಸಬೇಕು ಎಂದು ಅವರು ಸಲಹೆ ಮಾಡಿದರು.







