ಪಠ್ಯಕ್ರಮದಲ್ಲಿ ನಾಡಿನ ವೀರ ಮಹಿಳೆಯರ ಕುರಿತ ಪಾಠಗಳ ಅಳವಡಿಕೆಗೆ ಕ್ರಮ: ಸಿಎಂ ಬೊಮ್ಮಾಯಿ

ಹುಬ್ಬಳ್ಳಿ, ಫೆ.28: ಮುಂದಿನ ಪೀಳಿಗೆಗೆ ನಾಡಿನ ವೀರ ಮಹಿಳೆಯರಾದ ಬೆಳವಾಡಿ ಮಲ್ಲಮ್ಮ, ಕೆಳದಿ ಚನ್ನಮ್ಮ, ಕಿತ್ತೂರು ಚನ್ನಮ್ಮ, ರಾಣಿ ಅಬ್ಬಕ್ಕ ಅವರ ಕುರಿತಾದ ಪಾಠಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಅವರು ಇಂದು ಬೆಳವಾಡಿ ಮಲ್ಲಮ್ಮ ಮರಾಠಾ ಸೈನ್ಯದ ವಿರುದ್ಧ ಜಯಗಳಿಸಿದ 374ನೇ ವರ್ಷಾಚರಣೆಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ನಿನ್ನೆ ಕೆಳದಿ ಚನ್ನಮ್ಮ ನ ಪಟ್ಟಾಭಿಷೇಕದ 350 ನೇ ವರ್ಷದ ಆಚರಣೆಯನ್ನೂ ಮಾಡಿದ್ದೇವೆ. ಕರ್ನಾಟಕಕ್ಕೆ ಮಹಿಳೆಯರ ಕೊಡುಗೆ ಅಪಾರವಾಗಿದೆ. ಅದು ಇಂದಿನ ಪೀಳಿಗೆಗೆ ತಿಳಿಸಬೇಕು. ಕಿತ್ತೂರು ರಾಣಿ ಚೆನ್ನಮ್ಮ ಮೊದಲುಗೊಂಡು ಮಹಿಳೆಯರ ಪಾತ್ರವನ್ನು ಪ್ರಮುಖವಾಗಿ ಯುವಜನಾಂಗ ಕ್ಕೆ ತಿಳಿಸುವ ಕೆಲಸವಾಗಬೇಕು. ಮುಂದಿನ ವರ್ಷ ಬೆಳವಾಡಿಯಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಗಳನ್ನು ಆಯೋಜಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್, ಶಾಸಕ ಅರುಣ್ ಶಾಹಪುರ, ಮಾಜಿ ಶಾಸಕ ಮೋಹನ್ ಲಿಂಬಿಕಾಯಿ ಮತ್ತು ಇತರರು ಉಪಸ್ಥಿತರಿದ್ದರು.






