Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ನಾರಿಯರ ಕೈಗೆ ಅಕ್ಷರದ ಪಂಜನ್ನಿತ್ತವರು

ನಾರಿಯರ ಕೈಗೆ ಅಕ್ಷರದ ಪಂಜನ್ನಿತ್ತವರು

ಡಾ.ಬಿ. ಆರ್. ಮಂಜುನಾಥ್ಡಾ.ಬಿ. ಆರ್. ಮಂಜುನಾಥ್28 Feb 2022 2:38 PM IST
share
ನಾರಿಯರ ಕೈಗೆ ಅಕ್ಷರದ ಪಂಜನ್ನಿತ್ತವರು

ಭಾರತದ ಮಹಿಳಾ ಶಿಕ್ಷಣದ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಟ್ಟಿರುವ ಹೆಸರುಗಳೆಂದರೆ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ. ಆಧುನಿಕ ವಿಚಾರಗಳಿಂದ ಪ್ರೇರಿತರಾದ ಜ್ಯೋತಿಬಾ ತಮ್ಮ ಮಡದಿಗೆ ವಿದ್ಯಾಭ್ಯಾಸವನ್ನು ನೀಡಿದರು. ಸಾವಿತ್ರಿಬಾಯಿಯವರು ಶಿಕ್ಷಕ ತರಬೇತಿಯನ್ನು ಪಡೆದು ಶಿಕ್ಷಕಿಯಾದರು. 1848ರಲ್ಲಿ ಅವರು ಪುಣೆಯಲ್ಲಿ ಹೆಣ್ಣುಮಕ್ಕಳಿಗಾಗಿ ಶಾಲೆಯನ್ನು ತೆರೆದರು. ದೈಹಿಕ ದೌರ್ಜನ್ಯ, ಮಾನಸಿಕ ಕಿರುಕುಳ ಎಲ್ಲವನ್ನೂ ಎದುರಿಸಿ ಸಾವಿತ್ರಿಬಾಯಿ ಮುಂದೆ ನಡೆದದ್ದು ಒಂದು ವೀರಗಾಥೆಯೇ ಸರಿ, ಇದೇ ರೀತಿ ಬ್ರಿಟಿಷರ ಆಡಳಿತವಿದ್ದ ಕಲ್ಕತ್ತಾ ಪ್ರಾಂತದಲ್ಲೂ ಮಹಿಳಾ ಶಿಕ್ಷಣದ ಪ್ರಯತ್ನಗಳು ಆರಂಭವಾದವು. ಅದರಲ್ಲಿ ವಿದ್ಯಾಸಾಗರರು ವಹಿಸಿದ ಪಾತ್ರವನ್ನು ಈಗ ಗಮನಿಸೋಣ.

ಜಾನ್ ಎಲಿಯಟ್ ಡ್ರಿಂಕ್‌ವಾಟರ್ ಬೆಥೂನ್ ಎಂಬವರು ಇಂಗ್ಲೆಂಡಿನಲ್ಲಿ ವಕೀಲರಾಗಿದ್ದವರು ಭಾರತಕ್ಕೆ ಸರಕಾರಿ ಕೆಲಸದ ಮೇಲೆ ಬಂದರು. ಭಾರತದಲ್ಲಿ ಮಹಿಳಾ ಶಿಕ್ಷಣದ ಪ್ರಸರಣವಾಗಬೇಕೆಂದು ಗಾಢವಾಗಿ ಆಶಿಸಿದ ಅವರು ಈಶ್ವರಚಂದ್ರ ವಿದ್ಯಾಸಾಗರ್, ಮದನಮೋಹನ ತರ್ಕಾಲಂಕಾರ ಮೊದಲಾದವರೊಂದಿಗೆ ಕಲ್ಕತ್ತಾದಲ್ಲಿನ, ಇಂದು ಬೌಬಜಾರ್ ಎಂದು ಕರೆಯುವ ಸ್ಥಳದಲ್ಲಿ ಮೊದಲು ಮಹಿಳಾ ಶಾಲೆಯನ್ನು ಆರಂಭಿಸಿದರು. ಕ್ರಿಶ್ಚಿಯನ್ ಮಿಷನರಿಗಳ ಪ್ರಯತ್ನಗಳಿಂದ 1820ರ ದಶಕದ ವೇಳೆಗಾಗಲೇ ಅಲ್ಲಿಷ್ಟು ಇಲ್ಲಿಷ್ಟು ಮಹಿಳಾ ಶಿಕ್ಷಣದ ಪ್ರಯತ್ನಗಳು ನಡೆದಿದ್ದವು. ಆದರೆ ಅದಕ್ಕೆ ಜನಪ್ರಿಯತೆ ಸಿಗಲಿಲ್ಲ. ಮಿಷನರಿಗಳ ಮುಖ್ಯ ಧೋರಣೆಯೇ ಮತಾಂತರ ಎಂಬ ಭಾವನೆ ಸಮಾಜದಲ್ಲಿತ್ತು. ಕೆಲವು ಹಿಂದೂ ಸಮಾಜಸೇವಕರು ಸಹ ಅಷ್ಟಿಷ್ಟು ಪ್ರಯತ್ನಗಳನ್ನು ಮಾಡಿದರೂ ಅದು ಸಮಾಜದ ಮುಖ್ಯ ಪ್ರವಾಹದ ಮೇಲೆ ಪರಿಣಾಮ ಬೀರಿರಲಿಲ್ಲ.

ಇಂತಹ ಸಂದರ್ಭದಲ್ಲಿ ದೇಶೀಯ ಜನತೆಯನ್ನು ಸ್ತ್ರೀ ಶಿಕ್ಷಣದ ಕುರಿತು ಹುರಿದುಂಬಿಸಬೇಕೆಂಬ ಸದಾಶಯದಿಂದ ಡ್ರಿಂಕ್‌ವಾಟರ್ ಬೆಥೂನ್‌ರವರು ‘ಹಿಂದೂ ಶಾಲೆ’ ಎಂಬ ಹೆಸರಿನಲ್ಲಿಯೇ ಧರ್ಮನಿರಪೇಕ್ಷ, ಆಧುನಿಕ ಶಿಕ್ಷಣವನ್ನು ನೀಡುವಂತಹ ಹೆಣ್ಣುಮಕ್ಕಳ ಶಾಲೆಯನ್ನು ಆರಂಭಿಸಿದರು. ಅವರು ತಾವು ಸರಕಾರಿ ಸಮಿತಿಗಳಲ್ಲಿರುವಾಗಲೇ ಈಶ್ವರಚಂದ್ರ ವಿದ್ಯಾಸಾಗರರ ಉತ್ಸಾಹ, ಧ್ಯೇಯನಿಷ್ಠೆ, ಕಠಿಣಶ್ರಮಗಳನ್ನು ಗಮನಿಸಿದ್ದರು. ಅವರ ಅಧ್ಯಕ್ಷತೆಯಲ್ಲಿ ಆರಂಭವಾದ ಶಾಲೆಗೆ ವಿದ್ಯಾಸಾಗರರು 1850ರಲ್ಲಿ ಗೌರವ ಕಾರ್ಯದರ್ಶಿಗಳಾದರು. ಶಾಲೆಯ ಬಗ್ಗೆ ಅತ್ಯಂತ ಮುತುವರ್ಜಿ ವಹಿಸುತ್ತಿದ್ದ ಬೆಥೂನ್‌ರವರು 1851ರಲ್ಲಿ ಹಳ್ಳಿಗಾಡಿಗೆ ಇದೇ ಉದ್ದೇಶಕ್ಕಾಗಿ ಭೇಟಿ ನೀಡಿದಾಗ ಮಳೆಗೆ ಸಿಕ್ಕಿ ನ್ಯುಮೋನಿಯಾಗೆ ಬಲಿಯಾದರು. ವಿದ್ಯಾಸಾಗರರು ಕಾರ್ಯದರ್ಶಿಗಳಾದ ಎಂಟು ತಿಂಗಳಲ್ಲೇ ಈ ದುರಂತ ಸಂಭವಿಸಿತ್ತು. ಮುಂದೆ ಇದೇ ಶಾಲೆಯನ್ನು ಬೆಥೂನ್ ಶಾಲೆ ಎಂದು ಹೆಸರಿಸಲಾಯಿತು. ಸರಕಾರದಿಂದ ಸಿಕ್ಕಿದ ಅಷ್ಟಿಷ್ಟು ನೆರವಿನೊಂದಿಗೆ ಶಾಲೆಯನ್ನು ನಡೆಸಿಕೊಂಡು ಹೋಗಲಾಯಿತು. ಈ ಪ್ರಕ್ರಿಯೆಯಲ್ಲಿ ವಿದ್ಯಾಸಾಗರರು ತಮ್ಮ ಮನಸ್ಸಿಗೆ ತುಂಬಾ ಹತ್ತಿರವಾದ ಸ್ತ್ರೀ ಶಿಕ್ಷಣ ಪ್ರಸರಣದ ಬಗ್ಗೆ ಅನುಭವವನ್ನು ಸಂಪಾದಿಸಿಕೊಂಡರು.

ಬೆಥೂನ್‌ರ ಶಾಲೆ ಆರಂಭವಾದಾಗ ಅದಕ್ಕೆ ಹೆಣ್ಣುಮಕ್ಕಳನ್ನು ಕರೆತರುವುದು ಒಂದು ಸಾಹಸವಾಗಿತ್ತು. ಈಗಲೂ ಹೆಣ್ಣುಮಕ್ಕಳಿಗೆ ವಿದ್ಯೆ ಏಕೆ ಎನ್ನುವ ಭಾವನೆ ಅನೇಕ ವಲಯಗಳಲ್ಲಿ ಸುಪ್ತವಾಗಿ ಉಳಿದಿದೆ. ಆಗಂತೂ ಹೆಣ್ಣುಮಕ್ಕಳು ಹೊಸ್ತಿಲಿನಿಂದ ಹೊರಗೆ ಹೋದರೆ ಕೆಟ್ಟುಹೋದಾರು ಎಂಬ ಭಯ, ಕೆಡದಿದ್ದರೂ ಕೆಟ್ಟುಹೋಗಿದ್ದಾರೆ ಎಂಬ ಕೆಟ್ಟ ಹೆಸರಿಡುತ್ತಾರೆ ಎಂಬ ಆತಂಕ. ಬಂಗಾಳದಲ್ಲಿಯೂ ಎಂತಹ ಮೌಢ್ಯವಿತ್ತೆಂದರೆ, ಅಕ್ಷರ ಕಲಿತ ಹುಡುಗಿಯರು ವಿಧವೆಯರಾಗುತ್ತಾರೆ ಎಂಬ ನಂಬಿಕೆ ಇತ್ತು. ಶಾಲೆಗೆ ಯಾರಾದರೂ ಕೆಲವರು ಮೊದಲಿಗೆ ಸೇರಿದರೆ ನಂತರ ಅವರ ಯಶಸ್ಸನ್ನು ನೋಡಿ ಇತರರೂ ಮೆಲ್ಲಗೆ ಮುಂದೆ ಬರಬಹುದು. ಆದರೆ, ‘ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?’

ಇಂತಹ ಸಂದರ್ಭದಲ್ಲಿ ವಿದ್ಯಾಸಾಗರರ ಆಪ್ತ ಮಿತ್ರರೂ, ಶಾಲೆಯ ಸಂಘಟಕರಲ್ಲೊಬ್ಬರೂ ಆದ ಮದನಮೋಹನ ತರ್ಕಾಲಂಕಾರರು ಮುಂದೆ ಬಂದರು. ಅವರು ತಮ್ಮ ಮಕ್ಕಳಾದ ಭುವನಮಾಲಾ ಮತ್ತು ಕುಂದಮಾಲಾರನ್ನು ಶಾಲೆಗೆ ಸೇರಿಸಿದರು. ಸಮಾಜದ ಸಂಪ್ರದಾಯವಾದಿಗಳು, ಕುಹಕಿಗಳು ಇದರ ವಿರುದ್ಧ ತೀವ್ರವಾದ ಪ್ರಚಾರವನ್ನು ಕೈಗೊಂಡರು. ಅಂದಿನ ಕಾಲದ ಕೆಲವು ಪತ್ರಿಕೆಗಳು ಸಹ ಕೀಳು ಅಭಿರುಚಿಯ ಪರೋಕ್ಷ ನಿಂದನೆಗಳನ್ನು ಮಾಡಿದವೆಂದರೆ ಪರಿಸ್ಥಿತಿಯ ಗಂಭೀರತೆ ಅರ್ಥವಾದೀತು. ಈಗ ಈ ಶಾಲೆಗಳನ್ನು ಮುಂದುವರಿಸುವುದು ದೊಡ್ಡ ಸಾಹಸವೇ ಆಯಿತು. ಆದರೆ ಬೆಥೂನ್‌ರು ಮತ್ತು ವಿದ್ಯಾಸಾಗರರು ಇಬ್ಬರೂ ಸ್ವಭಾವತಃ ತುಂಬಾ ಅಂತಃಕರಣದ ಜನ. ಅವರು ವಿದ್ಯಾರ್ಥಿನಿಯರನ್ನು ತಮ್ಮ ಮಕ್ಕಳು ಎಂಬಂತೆ ಗಾಢವಾಗಿ ಪ್ರೀತಿಸುತ್ತಿದ್ದರು. ಅವರು ಶಾಲೆಗೆ ನಿಯತವಾಗಿ ಭೇಟಿ ಕೊಡುತ್ತಿದ್ದರು. ಮಕ್ಕಳಿಗೆ ಆಟದ ಸಾಮಾನುಗಳನ್ನು ಕೊಂಡೊಯ್ಯುತ್ತಿದ್ದರು. ತಾವೂ ಪುಟ್ಟ ಹುಡುಗರಂತೆ ಅವರ ಜೊತೆಯಲ್ಲಿ ಆಡುತ್ತಿದ್ದರು. ಬೆಥೂನ್‌ರು ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಿ ಅವರ ತುಂಟಾಟಗಳನ್ನು ನಗುನಗುತ್ತಾ ಸಹಿಸಿಕೊಳ್ಳುತ್ತಿದ್ದರು.

ಮಕ್ಕಳನ್ನು ಶಾಲೆಗೆ ಕರೆತರಲು ಸುಂದರವಾದ ಗಾಡಿಗಳನ್ನು ಗೊತ್ತುಮಾಡಲಾಯಿತು. ವಿದ್ಯಾಸಾಗರರು ಧಾರ್ಮಿಕ ಪರಂಪರೆಯಲ್ಲಿ ನಂಬಿಕೆಯಿಟ್ಟ ಪೋಷಕರನ್ನು ಪ್ರೇರೇಪಿಸಲು ಗಾಡಿಗಳ ಮೇಲೆ ಸ್ತ್ರೀ ಶಿಕ್ಷಣದ ಪರವಾದ ಶಾಸ್ತ್ರಗಳ ಶ್ಲೋಕವನ್ನು ಬರೆಸಿದರು. ‘ಹೆಣ್ಣುಮಕ್ಕಳಿಗೂ ಸಹ ಗಂಡು ಮಕ್ಕಳಿಗೆ ನೀಡುವಂತೆಯೇ ಶಿಕ್ಷಣ ನೀಡಬೇಕು. ಅದು ಕರ್ತವ್ಯ’ ಎಂಬುದು ಅದರ ತಾತ್ಪರ್ಯ. ಕ್ರಮೇಣ ಶಾಲೆಯ ಪರಿಸ್ಥಿತಿ ಸುಧಾರಿಸಿತು.

1853ರಲ್ಲಿ ವಿದ್ಯಾಸಾಗರರು ತಮ್ಮ ಸ್ವಂತ ಊರಾದ ಬೀರ್‌ಸಿಂಘಾದಲ್ಲಿ ಶಾಲೆಯೊಂದನ್ನು ಆರಂಭಿಸಿದರು. ಇದಕ್ಕಾಗಿ ತಮ್ಮದೇ ಜಾಗದಲ್ಲಿ ಸ್ವಂತ ಹಣದಿಂದ ಕಟ್ಟಡ ಕಟ್ಟಿಸಿಕೊಟ್ಟರು. ಸಂಜೆಯಲ್ಲಿ ರೈತರಿಗಾಗಿ ವಿಶೇಷ ರಾತ್ರಿಶಾಲೆ ಆರಂಭವಾಯಿತು. ಜೊತೆಜೊತೆಗೆ ಹೆಣ್ಣುಮಕ್ಕಳ ಶಾಲೆಯೂ ಆರಂಭವಾಯಿತು. ಶಾಲಾ ಸಿಬ್ಬಂದಿಯ ವೇತನಕ್ಕಾಗಿ 300ರೂ.ಗಳು, ಮಕ್ಕಳ ಪಾಟಿ-ಪುಸ್ತಕಕ್ಕೆ ನೂರು ರೂ.ಗಳು, ಹೆಣ್ಣುಮಕ್ಕಳ ಶಾಲೆಗೆ ಐವತ್ತು ರೂ.ಗಳನ್ನು ಅವರು ತಮ್ಮ ಸ್ವಂತ ಸಂಪಾದನೆಯಿಂದಲೇ ಕೊಡುತ್ತಿದ್ದರು. ಜೊತೆಗೆ ಒಂದು ಉಚಿತ ಚಿಕಿತ್ಸಾಲಯವನ್ನೂ ಆರಂಭಿಸಿ ಜನರಿಗೆ ಔಷಧಿಗಳನ್ನು ಪುಕ್ಕಟೆಯಾಗಿ ನೀಡುತ್ತಿದ್ದರು. ಆಗಷ್ಟೇ ಅವರ ವೇತನವು 150 ರೂ.ಗಳಿಂದ 300 ರೂ.ಗಳಿಗೆ ಏರಿತ್ತು. ಜೊತೆಗೆ ಮುದ್ರಣಾಲಯದಿಂದ ತಿಂಗಳಿಗೆ 400-500 ರೂ.ಗಳು ದೊರಕುತ್ತಿದ್ದವು. ತಮ್ಮ ಬದುಕನ್ನು ತೀರಾ ಸರಳವಾಗಿ ನಡೆಸುತ್ತಾ, ಖರ್ಚನ್ನು ಮಿತಗೊಳಿಸಿಕೊಂಡು ಅವರು ತಮ್ಮ ಹೃದಯಕ್ಕೆ ಹತ್ತಿರವಾದ ಕಾರ್ಯಗಳಿಗೆ ಹಣವನ್ನು ವಿನಿಯೋಗ ಮಾಡುತ್ತಿದ್ದರು.

1855ರ ಹೊತ್ತಿಗೆ ಸರಕಾರದಿಂದ ಅನುದಾನ ಪಡೆದ ಇಂಗ್ಲಿಷ್ ಹಾಗೂ ದೇಶಭಾಷೆಗಳ ಶಾಲೆಗಳನ್ನು ದೇಶದ ವಿವಿಧ ಭಾಗಗಳಲ್ಲಿ ಆರಂಭಿಸುವ ಯೋಜನೆ ರೂಪಿಸುವ ಸಂದರ್ಭ ಬಂತು. ಇದರ ಬಗ್ಗೆ ಒಂದು ವರದಿಯನ್ನು ನೀಡಲು ವಿದ್ಯಾಸಾಗರರನ್ನು ಕೇಳಿಕೊಳ್ಳಲಾಯಿತು. ಅವರು ನೀಡಿದ ವರದಿಯು ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಯಿತು. ಸರಕಾರವು ವಿದ್ಯಾಸಾಗರರನ್ನು ಶಾಲೆಗಳ ವಿಶೇಷ ಇನ್‌ಸ್ಪೆಕ್ಟರ್ ಸಹ ಆಗಿರಬೇಕೆಂದು ಕೇಳಿಕೊಂಡಿತು. ಸಂಸ್ಕೃತ ಕಾಲೇಜಿನ ಪ್ರಾಂಶುಪಾಲರಾಗಿದ್ದ ವಿದ್ಯಾಸಾಗರರು ಈಗ ಎರಡೂ ಹುದ್ದೆಗಳನ್ನು ನಿಭಾಯಿಸಬೇಕಾಯಿತು. ಅವರ ಸಂಬಳವೇನೋ 500 ರೂ. ಮಾಸಿಕಕ್ಕೆ ಏರಿತು.

ಈಗ ತಮ್ಮ ಮೇಲ್ವಿಚಾರಣೆಯಿದ್ದ ನಾಲ್ಕು ದೊಡ್ಡ ಜಿಲ್ಲೆಗಳಲ್ಲೂ ಅನೇಕ ಶಾಲೆಗಳನ್ನು ಆರಂಭಿಸಲು ವಿದ್ಯಾಸಾಗರರು ಅತ್ಯಂತ ಶಕ್ತ್ಯುತ್ಸಾಹಗಳಿಂದ ಓಡಾಡಲಾರಂಭಿಸಿದರು. ಹಿಂದೆ 1844-46ರ ಅವಧಿಯಲ್ಲಿ ಅವರು ವೈಸ್‌ರಾಯ್ ಹಾರ್ಡಿಂಗ್‌ರನ್ನೇ ಹೊಸ ದೇಶಭಾಷಾ ಶಾಲೆಗಳನ್ನು ತೆರೆಯಲು ಪ್ರಭಾವಿಸಿದ್ದರು ಮತ್ತು ತತ್ಫಲವಾಗಿ ಅಗ 101 ಶಾಲೆಗಳು ಆರಂಭವಾಗಿದ್ದವು. ಆ ಶಾಲೆಗಳ ಆರಂಭದ ಅಭಿಯಾನದಲ್ಲಿ ಅದು ಹೇಗೋ ವಿದ್ಯಾಸಾಗರರು ತೊಡಗಿ ಕೊಂಡಿದ್ದರು. ಅದರಿಂದ ಅವರಿಗೆ ಅಪಾರವಾದ ಅನುಭವವೂ ದಕ್ಕಿತ್ತು.

ಸರಕಾರಕ್ಕೆ ಮತ್ತೊಂದು ವರದಿಯನ್ನು ಸಲ್ಲಿಸಿದಾಗ ವಿದ್ಯಾಸಾಗರರು ಶಿಕ್ಷಕರ ತರಬೇತಿಗಾಗಿಯೇ ಒಂದು ‘ನಾರ್ಮಲ್ ಸ್ಕೂಲ್’ ಅನ್ನು ಆರಂಭಿಸಬೇಕೆಂದು ಸೂಚಿಸಿದರು. ಸರಕಾರವು ಅವರ ಸಲಹೆಯನ್ನು ಸ್ವೀಕರಿಸಿ ಸಂಸ್ಥೆಯನ್ನು ಅವರೇ ನಿರ್ವಹಿಸಬೇಕೆಂದು ಕೇಳಿಕೊಂಡಿತು. ವಿದ್ಯಾಸಾಗರರು ಅಂದಿನ ದಿನಗಳಲ್ಲಿ ವಿಜ್ಞಾನ ಕ್ಷೇತ್ರಕ್ಕೆ ಗಣನೀಯ ಕಾಣಿಕೆ ನೀಡಿದ್ದ ತಮ್ಮ ಅತ್ಯಂತ ಪ್ರಿಯಮಿತ್ರರಾದ ಅಕ್ಷಯ್ ಕುಮಾರ ದತ್ತರನ್ನು ಮೊದಲ ಪ್ರಾಂಶುಪಾಲರಾಗಲು ಕೇಳಿಕೊಂಡರು. ಸಂಸ್ಥೆ ಬಹಳ ಸಮರ್ಥವಾಗಿ ಕೆಲಸಮಾಡಿ ಬಂಗಾಳಿ ಶಿಕ್ಷಣ ಕ್ಷೇತ್ರಕ್ಕೆ ಗಮನಾರ್ಹ ಕಾಣಿಕೆ ನೀಡಿತು. ಈ ಎಲ್ಲ ಕೆಲಸಗಳ ನಡುವೆಯೇ ಅವರು ‘ವರ್ಣಪರಿಚಯ ಭಾಗ-1 ಮತ್ತು ಭಾಗ 2ನ್ನು’, ‘ಚರಿತ್ರಾವಳಿ’ಯನ್ನು, ‘ಶಾಕುಂತಲ’ವನ್ನು ಬರೆದು ತಮ್ಮ ನಾಡಿನ ಶಿಕ್ಷಣ ಹಾಗೂ ಸಾಹಿತ್ಯಕ್ಕೆ ಮೌಲ್ಯಯುತ ಕಾಣಿಕೆಯನ್ನು ನೀಡಿದರು.

ಇನ್‌ಸ್ಪೆಕ್ಟರ್ ಆಗಿದ್ದಾಗ ವಿದ್ಯಾಸಾಗರರು ಅತ್ಯಂತ ದೂರದ ಗ್ರಾಮಗಳಿಗೆ, ದುರ್ಗಮ ಪ್ರಾಂತಗಳಿಗೆ ಹೋಗುತ್ತಿದ್ದರು. ಅಧಿಕಾರಿಗಳು ಅಂತಹ ಸಂದರ್ಭದಲ್ಲಿ ಮೇನಾದಲ್ಲಿ ಪ್ರಯಾಣಿಸುವುದು ವಾಡಿಕೆ. ಆದರೆ ವಿದ್ಯಾಸಾಗರರು ಮೇನಾಗೆ ಕಾಯುತ್ತಿರಲಿಲ್ಲ. ಅನೇಕ ಬಾರಿ ನಡೆದೇ ಸಾಗಿಬಿಡುತ್ತಿದ್ದರು. ಮೇನೆಯಲ್ಲಿ ಹೋಗುವಾಗಲೂ ದಾರಿಯಲ್ಲಿ ವೃದ್ಧರು, ರೋಗಿಗಳು ಕಂಡರೆ ಅವರು ಕೂಡಲೇ ಕೆಳಗಿಳಿದು ಮೇನಾ ಸೌಕರ್ಯವನ್ನು ಅವರಿಗೆ ನೀಡಿ ತಾವು ನಡೆದೇ ಹೋಗಿಬಿಡುತ್ತಿದ್ದರು. ಅವರಿಗೆ ನಡಿಗೆ ಸಲೀಸಾದ ಕೆಲಸ!

1857ರಲ್ಲಿ ಕಲ್ಕತ್ತಾ ವಿಶ್ವವಿದ್ಯಾನಿಲಯ ಆರಂಭವಾಯಿತು. ಅದನ್ನು ಮುನ್ನಡೆಸಲು ನೇಮಿಸಲ್ಪಟ್ಟ ಕೈಬೆರಳೆಣಿಕೆಯಷ್ಟು ಭಾರತೀಯರಲ್ಲಿ ವಿದ್ಯಾಸಾಗರರೂ ಒಬ್ಬರಾಗಿದ್ದರು. ಆರ್ಟ್ಸ್, ಕಾನೂನು, ವೈದ್ಯಕೀಯ ಮತ್ತು ಸಿವಿಲ್ ಇಂಜಿನಿಯರಿಂಗ್ ಉಪವಿಭಾಗಗಳನ್ನು ಶುರು ಮಾಡಲಾಯಿತು. ಅಂದಿನ ದಿನಗಳಲ್ಲಿ ಬಿ.ಎ. ಪದವಿಯಲ್ಲಿ ಭಾಷೆ, ಮಾನವಿಕ ಶಾಸ್ತ್ರಗಳು ಹಾಗೂ ವಿಜ್ಞಾನ ಎಲ್ಲವೂ ಇರುತ್ತಿದ್ದವು. ಈ ವಿಭಾಗದ ಬೋಧನಾ ವಿಷಯಗಳು, ಪಠ್ಯಕ್ರಮವನ್ನು ರೂಪಿಸುವಲ್ಲಿ ವಿದ್ಯಾಸಾಗರರದ್ದು ಮುಖ್ಯ ಪಾತ್ರವಾಗಿತ್ತು. ಸಂಸ್ಕೃತ ಕಾಲೇಜಿನಲ್ಲಿ ಯಶಸ್ವಿಯಾಗಿದ್ದ ಅನೇಕ ಕ್ರಮಗಳು ಇಲ್ಲಿಯೂ ಸೇರಿದವು ಎಂಬುದು ಗಮನಾರ್ಹ.

ಈ ಹೊತ್ತಿಗೆ ವಿದ್ಯಾ ಸಾಗರರ ಹಿತಚಿಂತಕರೂ, ಆತ್ಮೀಯರೂ ಆಗಿದ್ದ ಶಿಕ್ಷಣ ಮಂಡಳಿಯ ಕಾರ್ಯದರ್ಶಿಗಳಾದ ಡಾ. ಮೌಅತ್ ಇಂಗ್ಲೆಂಡಿಗೆ ವಾಪಸಾಗಿದ್ದರು. ಈಗ ಆ ಕಚೇರಿಯನ್ನು ‘ಡೈರೆಕ್ಟರ್ ಆಫ್ ಪಬ್ಲಿಕ್ ಇನ್‌ಸ್ಟ್ರಕ್ಷನ್’ ಎಂದು ಕರೆದು ಅದಕ್ಕೆ ಡಬ್ಲೂ.ಜಿ. ಯಂಗ್ ಎಂಬವರನ್ನು ನೇಮಕ ಮಾಡಲಾಯಿತು. ಯಂಗ್‌ರವರು ಹೆಸರಿಗೆ ತಕ್ಕಂತೆ ತರುಣರು ಮಾತ್ರವಲ್ಲ ಎಳಸು ಸಹ, ಅವರಿಗೆ ಇಂತಹ ಹುದ್ದೆಯನ್ನು ನಿಭಾಯಿಸಲು ಬೇಕಾದ ಅನುಭವವಾಗಲೀ, ವಿದ್ಯಾಸಾಗರ ರಂಥವರನ್ನು ಸರಿಯಾಗಿ ನಡೆಸಿಕೊಂಡುಹೋಗುವ ಪ್ರಬುದ್ಧತೆಯಾಗಲೀ ಇರಲಿಲ್ಲ. ಆದರೆ ವಿದ್ಯಾಸಾಗರರ ಇನ್ನೊಬ್ಬ ಸನ್ಮಿತರಾದ ಲೆಫ್ಟಿನೆಂಟ್ ಗವರ್ನರ್ ಹ್ಯಾಲಿಡೇ ಮಾತ್ರ ಎಲ್ಲರಿಗೂ ಮೇಲೆ ಇದ್ದರು ಎಂಬುದು ಸಮಾಧಾನದ ವಿಷಯವಾಗಿತ್ತು.

ಆಗಿನ ಸರಕಾರದ ಇಚ್ಛೆಯ ಮೇರೆಗೆ ವಿದ್ಯಾಸಾಗರರು ಇನ್ನಷ್ಟು ಶಾಲೆಗಳನ್ನು ತೆರೆಯುತ್ತಾ ಹೋದರು. ಅನನುಭವಿಯಾದ ಯಂಗ್ ಇದನ್ನು ವಿರೋಧಿಸಿದರು. ವಿಷಯ ಹ್ಯಾಲಿಡೇ ಅವರ ಬಳಿಗೆ ಹೋಯಿತು! ಹ್ಯಾಲಿಡೇ ವಿದ್ಯಾಸಾಗರರ ಧೋರಣೆಯನ್ನು ಬೆಂಬಲಿಸಿದರು. ಕಡೆಗೆ ಸರಕಾರವು ವಿದ್ಯಾಸಾಗರರ ನಿಲುವನ್ನು ಎತ್ತಿಹಿಡಿಯಿತು. ಇದು ತನಗಾದ ವೈಯಕ್ತಿಕ ಮುಖಭಂಗ ಎಂದು ಯಂಗ್ ಭಾವಿಸಿದರು. ಸೇಡಿನ ಭಾವನೆ ಕಿಡಿಯಾಡಲಾರಂಭಿಸಿತು. ಇನ್ನೊಮ್ಮೆ ವಿದ್ಯಾಸಾಗರರು ಶಾಲೆಗಳ ಕಾರ್ಯನಿರ್ವಹಣೆಯ ಬಗ್ಗೆ ನಿಯತವಾಗಿ ವರದಿಗಳನ್ನು ಸಲ್ಲಿಸಿದಾಗ, ಅದರಲ್ಲಿ ತನಗೆ ವೈಯಕ್ತಿಕವಾಗಿ ಅನುಕೂಲವಾಗುವಂತಹ ಕೆಲವು ಅಂಶಗಳನ್ನು ಸೇರಿಸಲು ಯಂಗ್ ಕೇಳಿಕೊಂಡರು. ಆದರೆ ಸತ್ಯನಿಷ್ಠರಾದ ವಿದ್ಯಾಸಾಗರರು ಅದಕ್ಕೆ ಒಪ್ಪಲಿಲ್ಲ. ಕುಪಿತರಾದ ಯಂಗ್, ಪ್ರತೀಕಾರಕ್ಕೆ ಕಾಯುತ್ತಿದ್ದರು.

ವಿದ್ಯಾಸಾಗರರ ಅಸಾಧಾರಣ ಮುಂದೊಡಗು ಹಾಗೂ ದಕ್ಷತೆಗಳಿಂದಾಗಿ ಅವರ ಯಾವುದೇ ಕಾರ್ಯಕ್ರಮಕ್ಕೆ ಸರಕಾರ ಇಲ್ಲವೆನ್ನುತ್ತಿರಲಿಲ್ಲ. ಗವರ್ನರ್ ಹ್ಯಾಲಿಡೇ ಅವರಿಗಂತೂ ವಿದ್ಯಾಸಾಗರರ ನಿಸ್ವಾರ್ಥ ಮುಂದೊಡಗಿನ ಬಗ್ಗೆ ಪೂರ್ತಿ ವಿಶ್ವಾಸವಿತ್ತು. ಹೀಗಾಗಿ ಅನೇಕ ತೀರ್ಮಾನಗಳು ಅಧಿಕೃತವಾಗಿ ನಡೆಯದಿದ್ದರೂ, ಪರಸ್ಪರ ನಂಬಿಕೆಯ ಮೇಲೆ ಅನೌಪಚಾರಿಕವಾಗಿ ನಡೆದುಕೊಂಡುಹೋಗುತ್ತಿತ್ತು. ಹೀಗಾಗಿ ವಿದ್ಯಾರ್ಥಿನಿಯರಿಗಾಗಿ ಹೊಸ ಶಾಲೆಗಳನ್ನು ತೆರೆಯುವ ಪ್ರಸ್ತಾಪವನ್ನು ವಿದ್ಯಾಸಾಗರರು ಮುಂದಿಟ್ಟಾಗ ಹ್ಯಾಲಿಡೇಯವರು ಅದಕ್ಕೆ ಮೌಖಿಕವಾಗಿ ಸಮಿತಿಯನ್ನು ನೀಡಿದರು. ವಿದ್ಯಾಸಾಗರರು ನಾಲ್ಕೂ ಜಿಲ್ಲೆಗಳಲ್ಲಿ ಸಂಚರಿಸಿ 35 ಹೆಣ್ಣುಮಕ್ಕಳ ಶಾಲೆಗಳನ್ನು ಆರಂಭಿಸಿದರು. ಅವು ಚೆನ್ನಾಗಿ ನಡೆಯಲಾರಂಭಿಸಿದವು. ಅವುಗಳಿಗೆ ಸರಕಾರದಿಂದ ಇನ್ನೂ ಹಣ ಬಿಡುಗಡೆಯಾಗಿರಲಿಲ್ಲ. ಆದರೆ ಶಿಕ್ಷಕರನ್ನು ನೇಮಿಸಿಯಾಗಿತ್ತು. ಬಡ ಮೇಷ್ಟರುಗಳ ಸಂಬಳವನ್ನು ಬಾಕಿ ಉಳಿಸಿಕೊಳ್ಳುವಂತಿರಲಿಲ್ಲ. ವಿದ್ಯಾಸಾಗರರು ತಮ್ಮ ಹಣದಿಂದಲೇ ಸುಮಾರು ಮೂರೂವರೆ ಸಾವಿರ ರೂಪಾಯಿಗಳನ್ನು ಖರ್ಚು ಮಾಡಿದ್ದರು. ಏತನ್ಮಧ್ಯೆ ಇಂಗ್ಲೆಂಡ್‌ನಲ್ಲಿ ಸರಕಾರದ ಬದಲಾವಣೆಯಾಯಿತು. ಭಾರತದ ಕುರಿತಾದ ನೀತಿಗಳು ಬದಲಾಗಲಾರಂಭಿಸಿದವು. ಇನ್ನು ಮುಂದೆ ಶಿಕ್ಷಣದ ವೆಚ್ಚವನ್ನು ಕಡಿತಗೊಳಿಸಬೇಕೆಂಬ ಸೂಚನೆ ಇಲಾಖೆಗೆ ಬಂತು. ಇಂತಹ ಅವಕಾಶಕ್ಕೇ ಕಾಯುತ್ತಿದ್ದ ಯಂಗ್, ವಿದ್ಯಾಸಾಗರರು ಆರಂಭಿಸಿದ ಶಾಲೆಗಳಿಗೆ ಲಿಖಿತ ಅನುಮತಿ ಇಲ್ಲವೆಂಬ ಕಾರಣ ನೀಡಿ ಅನುದಾನವನ್ನು ನಿರಾಕರಿಸಿ ಹಣ ನೀಡುವ ಬಗ್ಗೆ ‘ಸಾಧ್ಯವಿಲ್ಲ’ ಎಂದು ನಿಲುವು ತೆಗೆದುಕೊಂಡರು.

ಇದು ವಿದ್ಯಾಸಾಗರರಿಗೆ ಆಘಾತಕಾರಿ ಯಾಗಿತ್ತು. ಅವರು ಒಂದು ದೀರ್ಘಕಾಲದ ರಿವಾಜು ಹಾಗೂ ವಿಶ್ವಾಸಗಳ ಆಧಾರದ ಮೇಲೆ ಹೆಚ್ಚಿನ ಉತ್ಸಾಹದಿಂದ ಕೆಲಸ ಮಾಡಿದ್ದರು. ಅವರು ನಡೆದದ್ದೆಲ್ಲವನ್ನೂ ವಿವರಿಸಿ ದೀರ್ಘವಾಗಿ ಪತ್ರ ಬರೆದರು. ತಾವು ಪ್ರತಿಯೊಂದು ಶಾಲೆಯನ್ನು ಆರಂಭಿಸುವ ಮುನ್ನ ಮತ್ತು ನಂತರ ವರದಿ ಸಲ್ಲಿಸಿರುವುದನ್ನು ನೆನಪಿಸಿದರು. ಆಗ ಯಂಗ್‌ರೂ ಸೇರಿದಂತೆ ಯಾವ ಮೇಲಧಿಕಾರಿಯೂ ಅದನ್ನು ವಿರೋಧಿಸುವುದಿರಲಿ, ಪ್ರಶ್ನಿಸಿಯೂ ಇರಲಿಲ್ಲ ಎಂಬುದನ್ನು ನೆನಪಿಸಿದರು. ಆದರೆ ಸೇಡಿಗಾಗಿ ಹಾತೊರೆಯುತ್ತಿದ್ದ ಯಂಗ್ ಯಾವುದಕ್ಕೂ ಒಪ್ಪಲಿಲ್ಲ. ಹ್ಯಾಲಿಡೇಯವರು ಮಾತ್ರ ನಡೆದ ‘ಅಚಾತುರ್ಯ’ದಲ್ಲಿ ಎಲ್ಲರದ್ದೂ ಪಾಲಿದೆ ಎಂದು ವಿವರಿಸಿ ಸರಕಾರಕ್ಕೆ ಪತ್ರ ಬರೆದರು. ವೈಯಕ್ತಿಕವಾಗಿ ಅವರು ವಿದ್ಯಾಸಾಗರರಿಗೆ, ‘ನನ್ನ ಮೇಲೆಯೇ ನ್ಯಾಯಾಲಯದಲ್ಲಿ ದಾವಾ ಹಾಕಿರಿ. ಅದರಿಂದಲಾದರೂ ಸರಕಾರ ನಿಮಗೆ ಹಣ ನೀಡುವಂತಾಗಲಿ’ ಎಂದರು. ವಿದ್ಯಾಸಾಗರರು ‘ನಾನು ಎಂದಿಗೂ ನ್ಯಾಯಾಲಯದ ಮೆಟ್ಟಿಲು ಹತ್ತಿಲ್ಲ. ಈಗ ನಿಮ್ಮಂಥವರ ಮೇಲೆ ದಾವಾ ಹೂಡಲೇ! ಸಾಧ್ಯವಿಲ್ಲ’ ಎಂದುಬಿಟ್ಟರು. ಹ್ಯಾಲಿಡೇಯವರ ಪ್ರಯತ್ನಗಳಿಂದ ಮುಂದೆ ವಿದ್ಯಾಸಾಗರರಿಗೆ ಒಂದಷ್ಟು ಹಣ ವಾಪಸಾಯಿತು. ಆದರೆ ವಿದ್ಯಾಸಾಗರರಿಗೆ ಇನ್ನು ಮುಂದೆ ತಾವು ಯಂಗ್‌ನಂತಹ ಅಧಿಕಾರಿಯ ಕೈಕೆಳಗೆ ಕೆಲಸ ಮಾಡುವುದು ಸಾಧ್ಯವಿಲ್ಲ ಎನಿಸಿತು. ಅವರು ಯಾರು ಎಷ್ಟೇ ಒತ್ತಾಯಿಸಿದರೂ, ಮೇಲಧಿಕಾರಿಗಳು ರಾಜಿಗೆ ಯತ್ನಿಸಿದರೂ, ಕಡೆಗೆ ದುರಹಂಕಾರಿಯಾಗಿದ್ದ ಯಂಗ್‌ರೇ ಸೂಚಿಸಿದರೂ ರಾಜಿನಾಮೆಯನ್ನು ವಾಪಸ್ ತೆಗೆದುಕೊಳ್ಳಲು ಒಪ್ಪಲಿಲ್ಲ. ಸರಕಾರಿ ನೌಕರಿಯ ನೊಗದಿಂದ ಬಿಡಿಸಿಕೊಂಡು ಸ್ವಾತಂತ್ರ್ಯದ ಸವಿಯನ್ನು ಅನುಭವಿಸುತ್ತಾ ಇನ್ನು ಬದುಕನ್ನು ಸಂಪೂರ್ಣವಾಗಿ ಸ್ವತಂತ್ರ, ಸಾಮಾಜಿಕ ಸೇವೆಗೆ ಮುಡಿಪಾಗಿಡಲು ನಿರ್ಧರಿಸಿ ಹೊರಬಂದರು!

ನಿಯಮಗಳು, ಕಟ್ಟುಪಾಡುಗಳ ಹೆಸರಿನಲ್ಲಿ ಯಾವಾಗ ಒಂದು ಅಧಿಕಾರಶಾಹಿ ನಾಯಕತ್ವವು ನಮ್ಮ ಸೃಜನಶೀಲತೆಗೆ ಕಡಿವಾಣ ಹಾಕಲೆತ್ನಿಸುತ್ತದೋ, ಯಾವಾಗ ವೈಯಕ್ತಿಕ ಪ್ರತಿಷ್ಠೆಯು ನಿಸ್ವಾರ್ಥ ಮುಂದೊಡಗಿಗೆ ಅಡ್ಡಿಯುಂಟುಮಾಡುತ್ತದೋ, ನಮ್ಮನ್ನು ಕೀಳು ಜಗಳಗಳಿಗೆ, ಪಿತೂರಿಗಳಿಗೆ ಬಲಿಮಾಡಲೆತ್ನಿಸುತ್ತದೋ ಆಗ ಸ್ವಾಭಿಮಾನಿಗಳಾದವರು, ಧ್ಯೇಯನಿಷ್ಠರಾಗಿ ಕೆಲಸವನ್ನು ಮುಂದುವರಿಸಲು ಇಚ್ಛಿಸುವವರು ಹೇಗೆ ಸ್ವತಂತ್ರವಾಗಿ, ದಿಟ್ಟತನದಿಂದ ವರ್ತಿಸಬೇಕು ಎಂಬುದಕ್ಕೆ ವಿದ್ಯಾಸಾಗರರು ತಮ್ಮ ಬದುಕಿನಲ್ಲಿ ಅನೇಕ ಬಾರಿ ನಿದರ್ಶನವನ್ನು ಒದಗಿಸಿದ್ದಾರೆ. ಇಷ್ಟಾಗಿ ಅವರು ತಾವು ಆರಂಭಿಸಿದ್ದ ಮಹಿಳಾ ಶಾಲೆಗಳು ನಿಂತುಹೋಗಲು ಬಿಡಲಿಲ್ಲ. ಅವರು ಸ್ತ್ರೀಶಿಕ್ಷಣ ನಿಧಿಯನ್ನು ಸ್ಥಾಪಿಸಿ, ಸಾರ್ವಜನಿಕರಿಂದ ಹಣ ಸಂಗ್ರಹ ಮಾಡಿ ಅವುಗಳನ್ನು ಇನ್ನೂ ಚೆನ್ನಾಗಿ ನಡೆಸಿಕೊಂಡುಹೋದರು.

share
ಡಾ.ಬಿ. ಆರ್. ಮಂಜುನಾಥ್
ಡಾ.ಬಿ. ಆರ್. ಮಂಜುನಾಥ್
Next Story
X