ಸೌಹಾರ್ದ ಟ್ರೋಫಿ ಕ್ರಿಕೆಟ್ ಪಂದ್ಯಾಟ; ಮಹಾಲಿಂಗೇಶ್ವರ ಕಾರ್ಕಳ ತಂಡ ಪ್ರಥಮ

ಕಾರ್ಕಳ : ನಿರಂತರವಾಗಿ ಕ್ರೀಡೆಯಲ್ಲಿ ತೊಡಗಿಸಿಕೊಂಡಲ್ಲಿ ದೈಹಿಕ ಸಾಮರ್ಥ ವೃದ್ಧಿಯೊಂದಿಗೆ ಆರೋಗ್ಯ ಕಾಪಾಡಲು ಸಾಧ್ಯ. ಯುವ ಸಮುದಾಯ ಕ್ರೀಡೆಗೆ ಹೆಚ್ಚಿನ ಒತ್ತು ನೀಡಬೇಕು. ಯುವಕರಲ್ಲಿ ಕ್ರೀಡೆ ಕುರಿತು ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಗಾಂಧಿ ಮೈದಾನವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.
ಅವರು ಫೆ. 28ರಂದು ಸೌಹಾರ್ದ ಫ್ರೆಂಡ್ಸ್ ಕಾರ್ಕಳ ವತಿಯಿಂದ ಗಾಂಧಿ ಮೈದಾನದಲ್ಲಿ ನಡೆದ ಸೌಹಾರ್ದ ಟ್ರೋಫಿ-2022 ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಶಿವತಿಕೆರೆ ಶ್ರೀ ಉಮಾಮಹೇಶ್ವರ ದೇವಸ್ಥಾನದ ಮೊಕ್ತೇಸರ ಸುರೇಂದ್ರ ಶೆಟ್ಟಿ ಮಾತನಾಡಿ, ಕ್ರೀಡೆಯಿಂದ ಸಂಘಟನೆ ಸಾಧ್ಯ. ಸಂಘಟನೆ ಮೂಲಕ ಯುವಕರು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂದರು. ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ವಿಖ್ಯಾತ್ ಶೆಟ್ಟಿ ಮಾತನಾಡಿ, ಸೌಹಾರ್ದ ಫ್ರೆಂಡ್ಸ್ ಕಾರ್ಕಳ ತಂಡವು ಪ್ರತಿ ವರ್ಷ ಅತ್ಯಂತ ಅದ್ಧೂರಿಯಾಗಿ ಕ್ರಿಕೆಟ್ ಪಂದ್ಯಾಟ ನಡೆಸುವುದರೊಂದಿಗೆ ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಉತ್ತಮ ಬೆಳವಣಿಗೆಯೆಂದರು.
ವೇದಿಕೆಯಲ್ಲಿ ಪುರಸಭಾ ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್, ಪತ್ರಕರ್ತ ರಾಮಚಂದ್ರ ಬರೆಪ್ಪಾಡಿ, ಪುರಸಭಾ ಸದಸ್ಯರಾದ ಪ್ರತೀಮಾ ರಾಣೆ, ಪ್ರದೀಪ್, ಉಚ್ಚಂಗಿ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಸುರೇಂದ್ರ, ಬಂಟ್ಸ್ ಯುವ ಸಂಘದ ಅಧ್ಯಕ್ಷ ಅವಿನಾಶ್ ಜಿ. ಶೆಟ್ಟಿ, ಕರಾವಳಿ ಟೂರ್ಸ್ ಮತ್ತು ಟ್ರಾವೆಲ್ಸ್ ಮಾಲಕ ಪ್ರಶಾಂತ್ ಶೆಟ್ಟಿ, ಅಶೋಕ್ ಮಡಿವಾಳ, ಸೌಹಾರ್ದ ಫ್ರೆಂಡ್ಸ್ ನ ತೌಸಿಫ್ ಹಾಗೂ ವಿಜಿತ್ ಉಪಸ್ಥಿತರಿದ್ದರು. ಅಶ್ರಫ್ ಕಾರ್ಯಕ್ರಮ ನಿರ್ವಹಿಸಿದರು.
ಅಸಹಾಯಕರ ಬಾಳಿಗೆ ಬೆಳಕಾಗಿರುವ ಸುರಕ್ಷಾ ಸೇವಾಶ್ರಮದ ಆಯಿಷಾ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.
ಮಹಾಲಿಂಗೇಶ್ವರ ಕಾರ್ಕಳ ತಂಡ ಪ್ರಥಮ
ಫೆ. 25 ರಿಂದ 27ರವರೆಗೆ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ 20 ತಂಡಗಳು ಭಾಗವಹಿಸಿದ್ದು, ಮಹಾಲಿಂಗೇಶ್ವರ ಕಾರ್ಕಳ ತಂಡ ಪ್ರಥಮ ಸ್ಥಾನ ಪಡೆಯಿತು. ಇಲೆವೆನ್ ಸ್ಟಾರ್ ಕಾರ್ಕಳ ತಂಡ ದ್ವಿತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡಿತು. ಇಲೆವೆನ್ ಸ್ಟಾರ್ ತಂಡದ ಪ್ರಫುಲ್ ಸರಣಿ ಶ್ರೇಷ್ಠ ಹಾಗೂ ಮಹಾಲಿಂಗೇಶ್ವರ ತಂಡದ ಇಲಿಯಾಸ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.







