‘ಮಿತ್ರ ಇಬ್ರಾಹಿಂ ವಿರುದ್ಧ ದನ ಕದ್ದ ಹೇಳಿಕೆ ಕೊಡದಿದ್ದಕ್ಕೆ ಜೈಲಿಗೆ ಹಾಕಿದರು'
ಗಂಗೊಳ್ಳಿ ಪೊಲೀಸರ ಸುಳ್ಳು ಪ್ರಕರಣದ ವಿರುದ್ಧ ಫ್ರಾನ್ಸಿಸ್ ಆಕ್ರೋಶ
ಉಡುಪಿ, ಫೆ. 28: ‘ಗೆಳೆಯ ಗಂಗೊಳ್ಳಿಯ ಮುಹಮ್ಮದ್ ಇಬ್ರಾಹಿಂಗೆ ಉಚಿತವಾಗಿ ಸಾಕಲು ನೀಡಿದ ದನವನ್ನು ಆತ ಕದ್ದುಕೊಂಡು ಹೋಗಿರುವುದಾಗಿ ಹೇಳಿಕೆ ನೀಡುವಂತೆ ಗಂಗೊಳ್ಳಿ ಎಸ್ಸೈ ನಂಜ ನಾಯ್ಕಿ ನಿರಂತರ ಕಿರುಕುಳ ನೀಡಿದ್ದು, ಇದಕ್ಕೆ ಒಪ್ಪದಿದ್ದ ನನ್ನ ಮೇಲೆ ಸುಳ್ಳು ಕೇಸು ದಾಖಲಿಸಿ ಜೈಲಿಗೆ ಹಾಕಿದರು. ಈ ರೀತಿ ನನಗೆ ಅನ್ಯಾಯ ಮಾಡಿರುವ ಗಂಗೊಳ್ಳಿ ಎಸ್ಸೈ ನಂಜ ನಾಯ್ಕಿ ವಿರುದ್ಧ ಪ್ರಕರಣ ದಾಖಲಿಸಲಾಗುವುದು’ ಎಂದು ಹೈನುಗಾರಿಕೆ ಹಾಗೂ ಇಲೆಕ್ಟ್ರಿಶಿಯನ್ ವೃತ್ತಿ ಮಾಡುತ್ತಿರುವ ತ್ರಾಸಿಯ ಫ್ರಾನ್ಸಿಸ್ ಅಲ್ಮೇಡಾ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಬ್ರಾಹಿಂಗೆ ಕಳೆದ ಡಿಸೆಂಬರ್ ತಿಂಗಳಲ್ಲಿ ನಾನು ಸಾಕಲು ದನದ ಕರುವನ್ನು ನೀಡಿದ್ದೆ. ಅವರು ಅದನ್ನು ಹಟ್ಟಿ ರಚಿಸಿ ಸಾಕುತ್ತಿದ್ದರು. ಮೂರು ದಿನಗಳ ಬಳಿಕ ಅಂದರೆ ಡಿ.26ರಂದು ಗಂಗೊಳ್ಳಿ ಪೊಲೀಸ್ ಠಾಣೆಯ ಎಸ್ಸೈ ನಂಜ ನಾಯ್ಕ ಹಾಗೂ ಸಿಬ್ಬಂದಿ ಇಬ್ರಾಹಿಂ ಮನೆಗೆ ಹೋಗಿ, ಕರು ಬಗ್ಗೆ ವಿಚಾರಿಸಿದ್ದರು. ಬಳಿಕ ಸಂಜೆ ಇಬ್ರಾಹಿಂ ಮತ್ತು ನನ್ನನು ಪೊಲೀಸರು ಠಾಣೆಗೆ ಕರೆಸಿದರು’ ಎಂದು ಮಾಹಿತಿ ನೀಡಿದರು.
‘ನನ್ನ ಹತ್ತಿರ ಕರು ನೀಡಿರುವ ಬಗ್ಗೆ ಪೊಲೀಸರು ಪ್ರಶ್ನಿಸಿದ್ದು, ಇಬ್ರಾಹಿಂಗೆ ನಾನೇ ಉಚಿತವಾಗಿ ನೀಡಿದ್ದೇನೆ ಎಂದು ಹೇಳಿದೆ. ಬಳಿಕ ರಾತ್ರಿ 11 ಗಂಟೆ ವೇಳೆ ಇಬ್ರಾಹಿಂ ಮನೆಗೆ ಪೊಲೀಸರು ಹೋಗಿ ಅಲ್ಲಿದ್ದ ಕರುವನ್ನು ಗಾಡಿಯಲ್ಲಿ ಹಾಕಿ ಠಾಣೆಗೆ ತಂದರು. ಬಳಿಕ ನನ್ನನ್ನು ರಾತ್ರಿ 2 ಗಂಟೆಗೆ ಮನೆಗೆ ಕಳುಹಿಸಿದರು. ಮರುದಿನ ಮಂಕಿ ಕ್ರಾಸ್ ಬಳಿ ಇಬ್ರಾಹಿಂನನ್ನು ಕರೆದೊಯ್ದ ಪೊಲೀಸರು, ಅವರಿಗೆ ಜೀಪಿನಿಂದ ಇಳಿದು ಓಡಲು ಸೂಚಿಸಿದರು. ರಿವಾಲ್ವರನ್ನು ಅವರ ತಲೆಗೆ ಇಟ್ಟು ಓಡುವಂತೆ ಗದರಿಸಿ ನಕಲಿ ಎನ್‌ಕೌಂಟರ್‌ಗೆ ಯತ್ನಿಸಿದರು. ಆದರೆ ಅವರು ಓಡಿಲ್ಲ’ ಎಂದು ಫ್ರಾನ್ಸಿಸ್ ತಿಳಿಸಿದ್ದಾರೆ.
ಠಾಣೆಯಲ್ಲಿದ್ದ ಕರುವನ್ನು ಹಿಡಿದುಕೊಂಡು ಬರುವಂತೆ ನನ್ನಲ್ಲಿ ಪೊಲೀಸರು ತಿಳಿಸಿದರು. ನಾನು ಕರುವಿನೊಂದಿಗೆ ಹೋದಾಗ, ಬಜರಂಗದಳದ ಕಾರ್ಯಕರ್ತರು ಇದ್ದರು. ಅಲ್ಲಿ ಕರುವಿನ ಫೋಟೋವನ್ನು ತೆಗೆದು ಈ ಕರುವನ್ನು ಇಬ್ರಾಹಿಂ ಕದ್ದು ತಂದಿರುವ ರೀತಿಯಲ್ಲಿ ಬಿಂಬಿಸಿದರು. ಬಳಿಕ ಅವರನ್ನು ಪೊಲೀಸರು ಬಂಧಿಸಿದ್ದರು. ನನ್ನನ್ನು ಮನೆಗೆ ಕಳುಹಿಸಿದರು.
ಒಂದು ತಿಂಗಳ ನಂತರ ಪೊಲೀಸರು ನನ್ನನ್ನು ಠಾಣೆಗೆ ಕರೆಸಿ ಈ ಕರುವನ್ನು ಇಬ್ರಾಹಿಂಗೆ ನೀನು ಮಾರಾಟ ಮಾಡಿಲ್ಲ ಎಂದು ಹೇಳಿಕೆ ನೀಡಿ ಪತ್ರಕ್ಕೆ ಸಹಿ ಹಾಕುವಂತೆ ತಿಳಿಸಿದರು. ಅದಕ್ಕೆ ನಾನು ಒಪ್ಪದಿದ್ದಕ್ಕೆ ಗಂಗೊಳ್ಳಿ ಪೊಲೀಸರು ನನ್ನ ಮೇಲೂ ಪ್ರಕರಣ ದಾಖಲಿಸಿ ಫೆ.18ರಂದು ಬಂಧಿಸಿದರು. ಜೈಲಿನಲ್ಲಿದ್ದ ನಾನು ಫೆ.21ರಂದು ಜಾಮೀನಿ ಮೇಲೆ ಬಿಡುಗಡೆಯಾಗಿ ಬಂದಿದ್ದೇನೆ. ಈ ಸಂಬಂಧ ಪೊಲೀಸರು ನನಗೆ ಸಾಕಷ್ಟು ದೌರ್ಜನ್ಯ ಎಸಗಿದ್ದಾರೆ ಎಂದು ಫ್ರಾನ್ಸಿಸ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಫ್ರಾನ್ಸಿಸ್ ಪುತ್ರಿ ಸಬಿನಾ, ಅತ್ತಿಗೆ ಪ್ರಮೀಳಾ ಹಾಜರಿದ್ದರು.
‘ದನ ಸಾಕಲು ಕೊಟ್ಟಿರುವುದು’
‘ನನ್ನ ತಂದೆಗೆ ಪೊಲೀಸರು ಅವಾಚ್ಯ ಶಬ್ದಗಳಿಂದ ಬೈದು ಸಾಕಷ್ಟು ದೌರ್ಜನ್ಯ ಎಸಗಿದರು. ಆದರೂ ನನ್ನ ತಂದೆ, ಅವರ ಗೆಳೆಯ ಇಬ್ರಾಹಿಂ ಅವರನ್ನು ಕಳ್ಳನನ್ನಾಗಿ ಮಾಡಲು ಒಪ್ಪಲಿಲ್ಲ. ಅದಕ್ಕಾಗಿ ಜೈಲಿಗೆ ಕೂಡ ಹೋಗಿ ಬಂದರು’ ಎಂದು ಫ್ರಾನ್ಸಿಸ್ ಮಗಳು ಸಬಿನಾ ತಿಳಿಸಿದರು.
‘ನೀನು ಇಬ್ರಾಹಿಂಗೆ ದನ ಕೊಟ್ಟಿಲ್ಲ ಮತ್ತು ನಿನ್ನನ್ನು ಠಾಣೆಯಲ್ಲಿ ಕುಳ್ಳಿರಿಸಿಲ್ಲ ಎಂಬ ಪತ್ರಕ್ಕೆ ಸಹಿ ಹಾಕಲು ಪೊಲೀಸರು ನನ್ನ ತಂದೆ ಒತ್ತಾಯಿಸಿದ್ದರು. ಆದರೆ ಅವರು ಸಹಿ ಹಾಕಲು ಒಪ್ಪಿಲ್ಲ. ಸಹಿ ಹಾಕಿದರೆ ಆತ ಕಳ್ಳನಾಗುತ್ತಾನೆ, ನೀವು ಸೇಫ್ ಆಗಿರುತ್ತೀರಿ ಎಂದು ಪೊಲೀಸರು ಹೇಳಿದಾಗ, ನನ್ನ ತಂದೆ, ಆ ರೀತಿಯ ಸೇಫ್ ನನಗೆ ಬೇಕಾಗಿಲ್ಲ. ನನ್ನ ಗೆಳೆಯ ಕಳ್ಳ ಆಗುವುದು ನನಗೆ ಇಷ್ಟ ಇಲ್ಲ. ನಾನು ದನವನ್ನು ಸಾಕಲು ಕೊಟ್ಟಿರುವುದು ಎಂದು ತಂದೆ ಹೇಳಿದರು’ ಎಂದು ಸಬಿನಾ ತಿಳಿಸಿದರು.
‘ಪ್ರಕರಣದಲ್ಲಿ ನನಗೆ ಅನ್ಯಾಯ ಆಗಿದೆ. ನನಗೆ ನ್ಯಾಯ ಸಿಗಬೇಕಾಗಿದೆ. ಆದುದರಿಂದ ನಾನು ಎಸ್ಸೈ ನಂಜ ನಾಯ್ಕಾ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸುತ್ತೇನೆ. ನಾನು ದನವನ್ನು ಇಬ್ರಾಹಿಂಗೆ ಸಾಕಲು ಕೊಟ್ಟಿದ್ದೇನೆ ಹೊರತು ಮಾಂಸ ಮಾಡಲು ಅಲ್ಲ. ತಪ್ಪು ಮಾಡಿದ ಎಸ್ಸೈಗೆ ತಕ್ಕ ಕಾನೂನಾತ್ಮಕ ಶಿಕ್ಷೆ ಸಿಗಬೇಕು’
-ಫ್ರಾನ್ಸಿಸ್ ಡಿ ಅಲ್ಮೇಡಾ ತ್ರಾಸಿ