ಚಿಕ್ಕಮಗಳೂರು: ಬಂಧಿತ ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿಗೆ ಮತ್ತೆ ನ್ಯಾಯಾಂಗ ಬಂಧನ

ಚಿಕ್ಕಮಗಳೂರು, ಫೆ.28: ಕೇರಳದಲ್ಲಿ ಬಂಧನಕ್ಕೊಳಗಾಗಿದ್ದ ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿ ಅವರನ್ನು ಫೆ.28ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದ ನರಸಿಂಹರಾಜಪುರ ಜೆಎಂಎಫ್‍ಸಿ ನ್ಯಾಯಾಲಯ ಸೋಮವಾರ ಮತ್ತೆ ಮಾ.7ವರೆಗೆ ಪೊಲೀಸ್ ವಶಕ್ಕೆ ನೀಡಿ ಸೋಮವಾರ ಆದೇಶಿಸಿದೆ.
ಫೆ.24ರಂದು ಬಿ.ಜಿ.ಕೃಷ್ಣಮೂರ್ತಿ ಅವರನ್ನು ಶೃಂಗೇರಿ ಪೊಲೀಸರು ನರಸಿಂಹರಾಜಪುರ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದು, ಈ ವೇಳೆ ನ್ಯಾಯಾಧೀಶರು ಫೆ.28ರವರೆಗೂ ಶೃಂಗೇರಿ ಪೊಲೀಸರ ವಶಕ್ಕೆ ನೀಡಿ ಆದೇಶ ಹೊರಡಿಸಿದ್ದರು.
ಸೋಮವಾರ ಶೃಂಗೇರಿ ತಾಲೂಕಿನ ಕುಂಚೇಬೈಲಿನಲ್ಲಿ ನಕ್ಸಲ್ ಪರ ಕರಪತ್ರ ಹಂಚಿಕೆ ಮತ್ತು ಗಂಡಘಟ್ಟದಲ್ಲಿ ಕೆಸೆಮುಡಿ ವೆಂಕಟೇಶ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎರಡು ಪ್ರಕರಣ ಸಂಬಂಧ ಸೋಮವಾರ ಮತ್ತೆ ನಕ್ಸಲ್ ಮುಖಂಡ ಬಿ.ಜಿ.ಕೃಷ್ಣಮೂರ್ತಿ ಅವರನ್ನು ಪೊಲೀಸರು ನರಸಿಂಹರಾಜಪುರ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಪೊಲೀಸರು ಹಾಜರುಪಡಿಸಿದ್ದರು.
ಪ್ರಕರಣವನ್ನು ಪರಿಶೀಲಿಸಿದ ನ್ಯಾಯಾಧೀಶರು ಬಿ.ಜಿ.ಕೃಷ್ಣಮೂರ್ತಿಯವರನ್ನು ಮಾ.7ರವರೆಗೂ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದರು. ಇದೇ ವೇಳೆ ಆರೋಪಿ ಪರ ವಕೀಲ ವಿ.ಪಿ.ನಟಶೇಖರ್ ಜಾಮೀನು ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಬಿ.ಜಿ.ಕೃಷ್ಣಮೂರ್ತಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಆವರಣದಲ್ಲಿ ಬೀಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಡಿವೈಎಸ್ಪಿ ಅನಿಲ್‍ಕುಮಾರ್ ನೇತೃತ್ವದಲ್ಲಿ ಶೃಂಗೇರಿ, ನರಸಿಂಹರಾಜಪುರ, ಕೊಪ್ಪ ತಾಲೂಕಿನ ಇನ್‍ಸ್ಪೆಕ್ಟರ್‍ಗಳನ್ನು ಬಂದೋಬಸ್ತ್‍ಗೆ ನಿಯೋಜಿಸಲಾಗಿತ್ತು.
ಕೇರಳ ರಾಜ್ಯದ ವಯನಾಡಿನ ಸುಲ್ತಾನ್‍ಬತೇರಿ ಪ್ರದೇಶದಲ್ಲಿ ಎಟಿಎಸ್(ಭಯೋತ್ಪಾದನೆ ನಿಗ್ರಹ ದಳ) 2021ರ ನ.9ರಂದು ಬಿಬಿಜಿಕೆ ಅವರನ್ನು ಬಂಧಿಸಿದ್ದರು. ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿರುವ ಆರೋಪದಡಿಯಲ್ಲಿ ಫೆ.24ರಂದು ಅವರನ್ನು ಶೃಂಗೇರಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಬೇಕಿತ್ತು. ಆದರೆ, ಶೃಂಗೇರಿ ನ್ಯಾಯಾಲಯದ ನ್ಯಾಯಾಧೀಶರು ರಜೆಯಲ್ಲಿದ್ದ ಕಾರಣ ನರಸಿಂಹ ರಾಜಪುರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ನ್ಯಾಯಾಲಯ ಫೆ.28ರವರೆಗೆ ಬಿಜಿಕೆಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದು, ಸೋಮವಾರ ಪೊಲೀಸರು ಮತ್ತೆ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು.
ಬಿ.ಜಿ.ಕೃಷ್ಣಮೂರ್ತಿಯನ್ನು ನೋಡಲು ಬಂದ ಅಮ್ಮ ಮತ್ತು ಅಕ್ಕ: ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆಗಳಿಗೆ ಸಂಬಂಧಿಸಿದ 2 ಪ್ರಕರಣಗಳ ಸಂಬಂದ ಸೋಮವಾರ ಪೊಲೀಸರು ಬಿ.ಜಿ.ಕೃಷ್ಣಮೂರ್ತಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ವಿಚಾರ ತಿಳಿಯುತ್ತಿದ್ದಂತೆ ಬಿ.ಜಿ.ಕೃಷ್ಣಮೂರ್ತಿ ಅವರ ತಾಯಿ ಸುಶೀಲಮ್ಮ ಮತ್ತು ಅಕ್ಕ ಶ್ರೀಲಕ್ಷ್ಮೀ ನ್ಯಾಯಾಲಯದ ಆವರಣಲ್ಲಿ ಬಿ.ಜಿ.ಕೃಷ್ಣಮೂರ್ತಿಯವರನ್ನು ಭೇಟಿಯಾದರು. ಈ ವೇಳೆ ಕೆಲ ಹೊತ್ತು ಮಾತುಕತೆಯನ್ನೂ ನಡೆಸಿದರು.







