ಎಸ್ಕಾಂ ಲೈನ್‌ಮನ್‌ಗಳ ವಿಮೆ 50 ಲಕ್ಷ ರೂ.ಗೆ ಹೆಚ್ಚಳ: ಸಚಿವ ಸುನೀಲ್ ಕುಮಾರ್
ಉಡುಪಿ ಕೆಪಿಟಿಸಿಎಲ್ ಸಭಾಭವನ ಉದ್ಘಾಟನೆ

ಉಡುಪಿ, ಫೆ. 28: ಕೆಪಿಟಿಸಿಎಲ್ ಲೈನ್‌ಮನ್‌ಗಳಂತೆ ರಾಜ್ಯದ ಎಲ್ಲಾ ಎಸ್ಕಾಂಗಳ ಲೈನ್‌ಮನ್‌ಗಳಿಗೂ 50 ಲಕ್ಷ ರೂ. ವಿಮಾ ಯೋಜನೆಯನ್ನು ಜಾರಿಗೊಳಿಸುವ ನಿರ್ಧಾರ ಮಾಡಲಾಗಿದ್ದು, ಶೀಘ್ರವೇ ಇದು ಅನುಷ್ಠಾನ ಗೊಳ್ಳಲಿದೆ ಎಂದು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರ ಸಂಘದ ವತಿಯಿಂದ ಉಡುಪಿಯ ಕುಂಜಿಬೆಟ್ಟಿನ ಮೆಸ್ಕಾಂ ಕಾಲನಿಯಲ್ಲಿ ನಿರ್ಮಾಣಗೊಂಡ ರಾಜ್ಯದ 24ನೇ ಸಭಾಭವನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಯಾವಾಗಲೂ ಅಪಾಯವನ್ನು ಎದುರಿಸಿ ಕೆಲಸ ಮಾಡುವ ಲೈನ್‌ಮನ್‌ಗಳು ಅಥವಾ ಪವರ್‌ಮೆನ್‌ಗಳ ಮೇಲೆ ನನಗೆ ಪ್ರೀತಿ ಜಾಸ್ತಿ. ಈಗಾಗಲೇ ಕೆಪಿಟಿಸಿಎಲ್ ಲೈನ್‌ಮನ್‌ಗಳಿಗೆ 50 ಲಕ್ಷ ರೂ.ಗಳ ವಿಮಾ ಸೌಲಭ್ಯವಿದೆ. ಅದರಂತೆ ಈಗ 25 ಲಕ್ಷ ರೂ. ಇರುವ ಎಲ್ಲಾ ಎಸ್ಕಾಂಗಳ ಲೈನ್‌ಮನ್‌ಗಳ ವಿಮಾ ಮೊತ್ತವನ್ನೂ 50 ಲಕ್ಷರೂ.ಗಳಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದರು.
ಇನ್ನು ನೌಕರರ ಬೇಡಿಕೆಯಾದ ಪಿಂಚಣಿ ಕುರಿತಂತೆ ಮಾತನಾಡಿದ ಸಚಿವರು ಆರ್ಥಿಕ ಪರಿಣಾಮ, ಕಂಪೆನಿಯ ಲಾಭ-ನಷ್ಟಗಳನ್ನು ನೋಡಿಕೊಂಡು ಪಿಂಚಣಿ ವ್ಯವಸ್ಥೆಯಲ್ಲಿ ನೌಕರರ ಹಿತಾಸಕ್ತಿಯನ್ನು ಕಾಪಾಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಅಲ್ಲದೇ ಹೋಲ್ದಿಂಗ್ ಕಂಪೆನಿಯ ಪ್ರಾರಂಭ, ಅಂತರ್ ಕಂಪೆನಿ ಹಾಗೂ ಅಂತರ್ಜಿಲ್ಲಾ ವರ್ಗಾವಣೆಯ ಕುರಿತು ಸಹ ಎಲ್ಲಾ ನಿಟ್ಟಿನಲ್ಲಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದ ಸುನಿಲ್ ಕುಮಾರ್, ಇಂಧನ ಇಲಾಖೆಯು ಇಂದು ದೊಡ್ಡ ಮಟ್ಟದ ಸವಾಲುಗಳನ್ನು ಎದುರಿಸುತ್ತಿದೆ. ವಿದ್ಯುತ್‌ಗೆ ಜನರ ಬೇಡಿಕೆ ಹೆಚ್ಚುತ್ತಿದೆ. ಸರಬರಾಜು ವ್ಯವಸ್ಥೆ ಇನ್ನಷ್ಟು ಉತ್ತಮಗೊಳ್ಳಬೇಕಿದೆ. ಸಚಿವನಾಗಿ ಪ್ರಾರಂಭದಲ್ಲೇ ತಾನು ಪ್ರಾರಂಭಿಸಿದ 100 ದಿನ ಕಾರ್ಯಕ್ರಮ ಯಶಸ್ವಿಗೊಳ್ಳುವಂತೆ ಎಲ್ಲಾ ನೌಕರರು ಶ್ರಮಿಸಿದ್ದಾರೆ. ಮುಂದಿನ ಬಜೆಟ್‌ನಲ್ಲಿ ಇಲಾಖೆಯ ಕೆಲವು ಕಾರ್ಯಕ್ರಮಗಳನ್ನು ಜೋಡಿಸುವ ಪ್ರಯತ್ನ ಮಾಡಲಾಗಿದೆ. ಇದರೊಂದಿಗೆ ಇಲಾಖೆಯ ನೌಕರರ ಬೇಡಿಕೆಗೂ ಆದ್ಯತೆ ಸಿಗುತ್ತದೆ. ಹೀಗಾಗಿ ನೀವ್ಯಾರು ಆತಂಕಗೊಳ್ಳಬೇಕಿಲ್ಲ. ಇದನ್ನೊಂದು ಜನಸ್ನೇಹಿ ಇಲಾಖೆಯನ್ನಾಗಿಸಲು ಎಲ್ಲರೂ ಸಹಕರಿಸಿ ಎಂದರು.
ಮುಖ್ಯಅತಿಥಿಯಾಗಿ ಭಾಗವಹಿಸಿದ ಕೆಪಿಟಿಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕಿ ಡಾ.ಎನ್.ಮಂಜಳ ಮಾತನಾಡಿ, ಐದು ಎಸ್ಕಾಂಗಳಲ್ಲಿ ಮೆಸ್ಕಾಂ ಪ್ರಥಮ ಸ್ಥಾನದಲ್ಲಿದೆ. ಸಮರ್ಥವಾದ ಆರ್ಥಿಕ ನಿರ್ವಹಣೆ ಇದಕ್ಕೆ ಕಾರಣ. ಸದ್ಯ ಪ್ರತಿ ವರ್ಷ 400 ಮಂದಿ ಲೈನ್‌ಮೆನ್‌ಗಳು ಸಾಯುತಿದ್ದು, ಅಷ್ಟೇ ಮಂದಿ ಅಂಗವಿಕಲರಾಗುತಿದ್ದಾರೆ. ಇದನ್ನು ತಪ್ಪಿಸಲು ಪ್ರಯತ್ನಿಸಿ ಎಸ್ಕಾಂಗಳಲ್ಲಿ ಯಾವುದೇ ಅವಘಡಗಳಾಗದಂತೆ ನೋಡಿಕೊಳ್ಳಬೇಕು ಎಂದರು.
ಎಸ್ಕಾಂಗಳಲ್ಲಿ ಜಾರಿಗೊಳಿಸಿದ 100 ದಿನಗಳ ಕಾರ್ಯಕ್ರಮಗಳು ಯಶಸ್ವಿಯಾಗಿವೆ. ಬೆಳಕು ಕಾರ್ಯಕ್ರಮದಲ್ಲಿ ಕೇವಲ 24 ಗಂಟೆಗಳಲ್ಲಿ ಹಾಳಾದ ಟ್ರಾನ್ಸ್‌ಫಾರ್ಮರ್‌ಗಳನ್ನು ಬದಲಿಸಲಾಗುತ್ತಿವೆ. ಕೆಪಿಟಿಸಿಎಲ್‌ನ 60 ಸ್ಟೇಶನ್‌ಗಳಲ್ಲಿ 1.5 ಲಕ್ಷ ರೈತರಿಗೆ 7 ಗಂಟೆಗಳ ಕಾಲ ನಿರಂತರ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಕೆ.ರಘುಪತಿ ಭಟ್ ಭಾಗವಹಿಸಿ ಮಾತನಾಡಿದರು. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ಅಧ್ಯಕ್ಷ, ಎಸ್ಕಾಂ ಕಂಪೆನಿಗಳ ನಿರ್ದೇಶಕ ಟಿ.ಆರ್. ರಾಮಕೃಷ್ಣಯ್ಯ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನಿರ್ದೇಶಕ ಮಹೇಶ್ ಕರ್ಜಗಿ, ನಿಗಮದ ಪ್ರಸರಣ ನಿರ್ದೇಶಕ ಬಿ.ಆರ್.ಚಂದ್ರಶೇಖರಯ್ಯ, ಹಣಕಾಸು ನಿರ್ದೇಶಕ ಸಿದ್ಲಿಲಿಂಗಪ್ಪ ತೇಲಿ, ಮೆಸ್ಕಾಂ ತಾಂತ್ರಿಕ ನಿರ್ದೇಶಕಿ ಡಿ. ಪದ್ಮಾವತಿ, ಉಡುಪಿ ನಗರಸಭಾ ಸದಸ್ಯೆ ಗೀತಾ ಶೇಟ್, ಮೆಸ್ಕಾಂ ಉಡುಪಿ ವೃತ್ತದ ಅಧೀಕ್ಷಕ ಇಂಜಿನಿಯರ್ ನರಸಿಂಹ ಪಂಡಿತ್ ಮುಂತಾದವರು ಉಪಸ್ಥಿತರಿದ್ದರು.
ಕವಿಪ್ರನಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಆರ್.ರಾಜಾ ನಾಯ್ಕ ಅತಿಥಿಗಳನ್ನು ಸ್ವಾಗತಿಸಿದರೆ, ಟಿ.ಆರ್.ರಾಮಕೃಷ್ಣಯ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು.