ಹಿಜಾಬ್ ವಿವಾದ ಬಗ್ಗೆ ರಾಜ್ಯಪಾಲರು ಮಧ್ಯಪ್ರವೇಶಿಸಲಿ: ಎಂ.ಎಸ್.ಮುಹಮ್ಮದ್

ಬಂಟ್ವಾಳ, ಫೆ.28: ಹಿಜಾಬ್ ಕುರಿತು ನ್ಯಾಯಾಲಯವು ನೀಡಿದ ಮಧ್ಯಂತರ ತೀರ್ಪನ್ನು ಸರಿಯಾಗಿ ಅರ್ಥೈಸದೆ ರಾಜ್ಯ ಸರಕಾರವು ನೀಡಿರುವ ಆದೇಶದಿಂದ ಮುಸ್ಲಿಮ್ ವಿದ್ಯಾರ್ಥಿನಿಯರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯಪಾಲರು ಮಧ್ಯ ಪ್ರವೇಶಿಸಿ ಸರಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಮನವಿ ನೀಡಲಾಗಿದೆ ಎಂದು ಜಿಪಂ ಮಾಜಿ ಸದಸ್ಯ ಎಂ.ಎಸ್.ಮುಹಮ್ಮದ್ ತಿಳಿಸಿದರು.
ಅವರು ಸೋಮವಾರ ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ನ್ಯಾಯಾಲಯದ ಮಧ್ಯಂತರ ಆದೇಶವು ಸಮವಸ್ತ್ರ ಇರುವ ಶಾಲಾ - ಕಾಲೇಜುಗಳಿಗೆ ಅನ್ವಯವಾಗುತ್ತಿದೆ. ಆದರೆ ಸರಕಾರ ಖಾಸಗಿ ಕಾಲೇಜುಗಳು, ಸಮವಸ್ತ್ರ ನಿಯಮ ಇಲ್ಲದೇ ಇರುವ ಶಿಕ್ಷಣ ಸಂಸ್ಥೆಗಳು ಹಾಗೂ ಮುಸ್ಲಿಂ ವಸತಿ ಶಾಲೆಗಳಲ್ಲೂ ಹಿಜಾಬ್ ನಿಷೇಧಿಸಲು ಆದೇಶ ನೀಡಿರುತ್ತದೆ. ಇದರಿಂದ ಸಮಾಜದಲ್ಲಿ ಅಭದ್ರತೆಯ ವಾತಾವರಣದ ಜತೆಗೆ ನಮ್ಮ ಧಾರ್ಮಿಕ ಸ್ವಾತಂತ್ರ‍್ಯಕ್ಕೂ ಧಕ್ಕೆಯಾಗುತ್ತಿದೆ. ಇಂತಹ ವಿವಾದದಿಂದ ಹಲವು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ರಾಜ್ಯಪಾಲರು ಮಧ್ಯ ಪ್ರವೇಶಿಸಿ ಸೂಕ್ತ ನಿರ್ದೇಶನ ನೀಡಿ ಸಮಸ್ಯೆ ಬಗೆಹರಿಸಲು ಸುನ್ನಿ ಮ್ಯಾನೇಜ್‌ಮೆಂಟ್ ಅಸೋಸಿಯೇಶನ್ (ಎಸ್‌ಎಂಎ) ಬಂಟ್ವಾಳ ವಲಯ ಸಮಿತಿಯಿಂದ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ನೀಡಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಸ್‌ಎಂಎ ಪದಾಧಿಕಾರಿಗಳಾದ ಸಿ.ಎಚ್.ಅಬೂಬಕ್ಕರ್, ರಫೀಕ್ ಝಹರಿ, ಹೈದರಾಲಿ ಮಂಚಿ ಉಪಸ್ಥಿತರಿದ್ದರು.