ಉಕ್ರೇನ್ ನಿಂದ ಭಾರತೀಯರನ್ನು ತೆರವುಗೊಳಿಸಲು ಸ್ಪೈಸ್ ಜೆಟ್ ನಿಂದ ವಿಶೇಷ ವಿಮಾನ

ಹೊಸದಿಲ್ಲಿ, ಫೆ. 28: ರಷ್ಯಾದ ಸೇನೆಯ ಆಕ್ರಮಣದ ನಡುವೆ ಉಕ್ರೇನ್ನಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ತೆರವುಗೊಳಿಸಲು ಸ್ಪೈಸ್ ಜೆಟ್ನ ವಿಶೇಷ ವಿಮಾನಗಳು ಹಂಗೇರಿಯಾದ ರಾಜಧಾನಿ ಬುಡಾಪೆಸ್ಟ್ನಿಂದ ಶುಕ್ರವಾರ ಕಾರ್ಯಾಚರಣೆ ನಡೆಸಲಿವೆ. ಸೇನಾ ಕಾರ್ಯಾಚರಣೆ ಆರಂಭವಾದ ಬಳಿಕ ಫೆ. 24ರಿಂದ ಉಕ್ರೇನ್ನ ವಾಯು ಯಾನ ಕ್ಷೇತ್ರವನ್ನು ಮುಚ್ಚಿರುವುದರಿಂದ ಉಕ್ರೇನ್ನೊಂದಿಗೆ ಗಡಿ ಹಂಚಿಕೊಂಡಿರುವ ರೊಮಾನಿಯಾ ಹಾಗೂ ಹಂಗೇರಿಯಿಂದ ತನ್ನ ಪ್ರಜೆಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಭಾರತ ಶನಿವಾರ ಆರಂಭಿಸಿವೆ.
ಟಾಟಾ ಸಮೂಹದ ಮಾಲಕತ್ವದ ಏರ್ ಇಂಡಿಯಾ ಇದುವರೆಗೆ ಐದು ತೆರವು ಕಾರ್ಯಾಚರಣೆ ವಿಮಾನದ ಮೂಲಕ ಒಟ್ಟು 1,156 ಮಂದಿ ಭಾರತದ ಪ್ರಜೆಗಳನ್ನು ತೆರವುಗೊಳಿಸಿದೆ. ಏರ್ ಇಂಡಿಯಾದ 6ನೇ ವಿಮಾನದ ಮೂಲಕ ಸೋಮವಾರ ಸಂಜೆ 240 ಭಾರತೀಯ ಪ್ರಜೆಗಳನ್ನು ಭಾರತಕ್ಕೆ ಕರೆ ತಂದಿದೆ. ಸುಮಾರು 14,000 ಭಾರತೀಯರು, ಮುಖ್ಯವಾಗಿ ಕಾಲೇಜು ವಿದ್ಯಾರ್ಥಿಗಳು ಪ್ರಸ್ತುತ ಉಕ್ರೇನ್ನಲ್ಲಿ ಸಿಲುಕಿಕೊಂಡಿದ್ದಾರೆ. ದಿಲ್ಲಿಯಿಂದ ಸೋಮವಾರ ಸಂಜೆ ವಿಶೇಷ ವಿಮಾನ ನಿರ್ಗಮಿಸಿದೆ ಎಂದು ಸ್ಪೈಸ್ ಜೆಟ್ ಹೇಳಿದೆ.





