ಪೊಲಿಯೋ ಲಸಿಕೆ: ಉಡುಪಿ ಜಿಲ್ಲೆಯಲ್ಲಿ ಶೇ.99.73 ಸಾಧನೆ

ಉಡುಪಿ, ಫೆ.28: ಜಿಲ್ಲೆಯ 0-5 ವರ್ಷದೊಳಗಿನ ಮಕ್ಕಳಿಗೆ ನೀಡುವ ಒಂದು ಡೋಸ್ ಪಲ್ಸ್ ಪೋಲಿಯೊ ಲಸಿಕೆಯಲ್ಲಿ ಉಡುಪಿ ಜಿಲ್ಲೆ ಶೇ.99.73ರ ಸಾಧನೆ ಮಾಡಿದೆ. ಜಿಲ್ಲೆಯ ಒಟ್ಟು 73995 ಮಕ್ಕಳ ಪೈಕಿ ಸೋಮವಾರ ಸಂಜೆಯವರೆಗೆ ಒಟ್ಟು 73,794 ಮಕ್ಕಳಿಗೆ ಪೊಲಿಯೋ ಲಸಿಕೆ ಹಾಕುವ ಮೂಲಕ ಶೇ.99.73ರಷ್ಟು ಸಾಧನೆ ಮಾಡಲಾಗಿದೆ.
ಜಿಲ್ಲೆಯ ಗ್ರಾಮೀಣ ಪ್ರದೇಶದ 61105 ಮಕ್ಕಳ ಪೈಕಿ 60,496 ಮಕ್ಕಳಿಗೆ (ಶೇ.99) ಹಾಗೂ ನಗರ ಪ್ರದೇಶದ 12890 ಮಕ್ಕಳ ಗುರಿಯನ್ನು ಮೀರಿ ಎರಡು ದಿನಗಳಲ್ಲಿ ಒಟ್ಟು 13,298 ಮಕ್ಕಳಿಗೆ (ಶೇ.103.17) ಲಸಿಕೆ ಹಾಕಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಉಡುಪಿ ತಾಲೂಕಿನ 33,922 ಮಕ್ಕಳಲ್ಲಿ ಗುರಿ ಮೀರಿ ಒಟ್ಟು 34,458 (ಶೇ.101.58), ಕುಂದಾಪುರ ತಾಲೂಕಿನಲ್ಲಿ 27152 ಮಕ್ಕಳ ಪೈಕಿ 26,470 (ಶೇ.97.49) ಹಾಗೂ ಕಾರ್ಕಳ ತಾಲೂಕಿನಲ್ಲಿ 12,921 ಮಕ್ಕಳ ಪೈಕಿ 12,866 (ಶೇ.99.57) ಮಕ್ಕಳು ಲಸಿಕೆ ಪಡೆದುಕೊಂಡಿದ್ದಾರೆ.
ಐದು ವರ್ಷದೊಳಗಿನ ಮಕ್ಕಳಿಗೆ ನೀಡುವ ಈ ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮ ಮಾ.2ರವರೆಗೆ ನಡೆಯಲಿದ್ದು, ಆಶಾ ಹಾಗೂ ಆರೋಗ್ಯ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಲಸಿಕೆ ಪಡೆಯದ ಮಕ್ಕಳನ್ನು ಹುಡುಕಿ ಲಸಿಕೆ ನೀಡುವರು ಎಂದು ಪ್ರಕಟಣೆ ತಿಳಿಸಿದೆ.







