ಭಾರತೀಯ ತೆರವಿಗಾಗಿ ಉಕ್ರೇನ್ನ ನೆರೆಯ ದೇಶಗಳಿಗೆ ತೆರಳಲಿರುವ ಸಿಂಧಿಯಾ ಸಹಿತ ನಾಲ್ವರು ಕೇಂದ್ರ ಸಚಿವರು

ಆಪರೇಷನ್ ಗಂಗಾ
ಹೊಸದಿಲ್ಲಿ,ಫೆ.28: ವಿದ್ಯಾರ್ಥಿಗಳು ಸೇರಿದಂತೆ ಉಕ್ರೇನ್ನಲ್ಲಿ ಅತಂತ್ರರಾಗಿರುವ ಸಾವಿರಾರು ಭಾರತೀಯರನ್ನು ತೆರವುಗೊಳಿಸಲು ನಡೆಸುತ್ತಿರುವ ‘ಆಪರೇಷನ್ ಗಂಗಾ’ದ ಉಸ್ತುವಾರಿಗಾಗಿ ನಾಲ್ವರು ಕೇಂದ್ರ ಸಚಿವರನ್ನು ಯುದ್ಧಗ್ರಸ್ತ ದೇಶದ ನೆರೆರಾಷ್ಟ್ರಗಳಿಗೆ ಕಳುಹಿಸಲು ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಸಚಿವರು ಭಾರತ ಸರಕಾರದ ವಿಶೇಷ ರಾಯಭಾರಿಗಳಾಗಿ ತೆರಳಲಿದ್ದಾರೆ.
ನಾಗರಿಕ ವಾಯುಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಅವರು ರೊಮೇನಿಯಾ ಮತ್ತು ಮೊಲ್ಡೋವಾದಲ್ಲಿ,ಕಾನೂನು ಮತ್ತು ನ್ಯಾಯ ಸಚಿವ ಕಿರಣ ರಿಜಿಜು ಅವರು ಸ್ಲೊವಾಕಿಯಾದಲ್ಲಿ,ವಸತಿ,ನಗರ ವ್ಯವಹಾರಗಳು,ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಹಂಗೆರಿಯಲ್ಲಿ ಹಾಗೂ ಸಹಾಯಕ ರಸ್ತೆ ಸಾರಿಗೆ,ಹೆದ್ದಾರಿಗಳು ಮತ್ತು ನಾಗರಿಕ ವಾಯುಯಾನ ಸಚಿವ ಜ.ವಿ.ಕೆ.ಸಿಂಗ್ ಅವರು ಪೋಲಂಡ್ನಲ್ಲಿ ತೆರವು ಕಾರ್ಯಾಚರಣೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲಿದ್ದಾರೆ.
ಈ ನಾಲ್ವರು ಸಚಿವರಲ್ಲದೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ದೋವಲ್, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್,ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಪಿ.ಕೆ.ಮಿಶ್ರಾ,ಸಂಪುಟ ಕಾರ್ಯದರ್ಶಿ ರಾಜೀವ ಗಾಬಾ,ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ ಶ್ರಿಂಗ್ಲಾ ಮತ್ತು ಇತರ ಹಿರಿಯ ಅಧಿಕಾರಿಗಳೂ ಉಕ್ರೇನ್ ಬಿಕ್ಕಟ್ಟು ಕುರಿತ ಸಭೆಯಲ್ಲಿ ಭಾಗವಹಿಸಿದ್ದರು.
ಕಳೆದ ವಾರ ರಷ್ಯದಿಂದ ಆಕ್ರಮಣಕ್ಕೊಳಗಾಗಿರುವ ಉಕ್ರೇನ್ನಲ್ಲಿ ಸಾವಿರಾರು ವಿದ್ಯಾರ್ಥಿಗಳು ಸಿಕ್ಕಿಕೊಂಡಿದ್ದಾರೆ. ಈ ಪೈಕಿ ಹೆಚ್ಚಿನ ವಿದ್ಯಾರ್ಥಿಗಳು ಪೋಲಂಡ್ ಮತ್ತು ರೊಮೇನಿಯಾದೊಂದಿಗಿನ ಉಕ್ರೇನ್ ಗಡಿಗಳಿಗೆ ತಲುಪಿದ್ದಾರಾದರೂ ಈ ರಾಷ್ಟ್ರಗಳನ್ನು ಪ್ರವೇಶಿಸಲು ಅವರಿಗೆ ಅವಕಾಶ ನೀಡಲಾಗುತ್ತಿಲ್ಲ. ಈ ವಿದ್ಯಾರ್ಥಿಗಳು ನೆರವು ಯಾಚಿಸಿರುವ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಅವರೆಲ್ಲ ಅಸಹಾಯಕ ಸ್ಥಿತಿಯಲ್ಲಿ ಮೈ ಕೊರೆಯುವ ಚಳಿಯಲ್ಲಿ ಸೀಮಿತ ಆಹಾರ ಮತ್ತು ನೀರಿನೊಂದಿಗೆ ದಿನಗಳನ್ನು ದೂಡುತ್ತಿದ್ದಾರೆ.
ವಿದ್ಯಾರ್ಥಿಗಳ ತೆರವು ಕಾರ್ಯಾಚರಣೆಯಲ್ಲಿ ನೆರವಾಗಲು ಸರಕಾರವು ಪಶ್ಚಿಮ ಉಕ್ರೇನಿನ ಉಝುರದ್ನಿಂದ ಹಂಗೆರಿಯ ಬುಡಾಪೆಸ್ಟ್ ಗೆ ಪರ್ಯಾಯ ರೈಲು ಮಾರ್ಗವನ್ನು ಗುರುತಿಸಿದೆ. ಪೋಲಂಡ್ ಗಡಿಯಿಂದ ವಿದ್ಯಾರ್ಥಿಗಳ ತೆರವು ಕಾರ್ಯಾಚರಣೆ ಸಮಸ್ಯೆಯನ್ನುಂಟು ಮಾಡಿದೆ,ಏಕೆಂದರೆ ಉಕ್ರೇನ್ ಪ್ರಜೆಗಳು ಸೇರಿದಂತೆ ಸಾವಿರಾರು ಜನರು ಆ ಮಾರ್ಗವನ್ನು ಬಳಸುತ್ತಿದ್ದಾರೆ. ಉಝುರುದ್ನಿಂದ ಪ್ರತಿ ಎರಡು ಗಂಟೆಗೆ ಹಂಗೆರಿಯ ರಾಜಧಾನಿ ಬುಡಾಪೆಸ್ಟ್ಗೆ ರೈಲು ಸಂಚರಿಸುತ್ತಿದ್ದು,ಈ ಮಾರ್ಗವನ್ನು ಬಳಸಿಕೊಳ್ಳುವಂತೆ ಭಾರತೀಯ ಪ್ರಜೆಗಳಿಗೆ ಸೂಚಿಸಲಾಗಿದೆ ಎಂದು ಶ್ರಿಂಗ್ಲಾ ರವಿವಾರ ತಿಳಿಸಿದ್ದರು.







