ರಶ್ಯಾ ಆಕ್ರಮಣದ ಕಾರಣ ಉಕ್ರೇನ್ ನಿಂದ 5 ಲಕ್ಷಕ್ಕೂ ಅಧಿಕ ಮಂದಿ ಪಲಾಯನ: ವಿಶ್ವಸಂಸ್ಥೆ

ukraine
ಜಿನೆವಾ, ಫೆ.28: ಕಳೆದ ವಾರ ರಶ್ಯಾ ಆಕ್ರಮಣ ನಡೆಸಿದಂದಿನಿಂದ ಸುಮಾರು 5 ಲಕ್ಷ ಜನ ಉಕ್ರೇನ್ ನಿಂದ ಪಲಾಯನ ಮಾಡಿದ್ದಾರೆ ಎಂದು ನಿರಾಶ್ರಿತರಿಗಾಗಿ ವಿಶ್ವಸಂಸ್ಥೆಯ ಸಂಸ್ಥೆ(ಯುಎನ್ಸಿಎಚ್ಆರ್) ಸೋಮವಾರ ಹೇಳಿದೆ.
2,81.000 ಜನ ಪೋಲಂಡ್ ದೇಶವನ್ನು ಪ್ರವೇಶಿಸಿದ್ದರೆ, 84,500ಕ್ಕೂ ಹೆಚ್ಚು ಮಂದಿ ಹಂಗರಿಗೆ, ಮೊಲ್ದೊವಾಗೆ ಸುಮಾರು 36,400, ರೊಮಾನಿಯಾಕ್ಕೆ 32,500ಕ್ಕೂ ಅಧಿಕ ಜನ, ಸ್ಲೊವಾಕಿಯಾಕ್ಕೆ ಸುಮಾರು 30,000 ಜನ ಪಲಾಯನ ಮಾಡಿದ್ದಾರೆ. ಇನ್ನೂ ಕೆಲವರು ಗಡಿಭಾಗದ ಸಮೀಪದ ಇತರ ದೇಶಗಳಲ್ಲಿ ಚದುರಿಹೋಗಿದ್ದಾರೆ ಎಂದು ಯುಎನ್ಸಿಎಚ್ಆರ್ ವಕ್ತಾರೆ ಶಬಿಯಾ ಮಂಟೂ ಹೇಳಿದ್ದಾರೆ.
ಈ ಮಧ್ಯೆ, ಉಕ್ರೇನ್ ನಿಂದ ನೂರಾರು ನಿರಾಶ್ರಿತರಿದ್ದ ಮತ್ತೊಂದು ರೈಲು ಸೋಮವಾರ ಈಶಾನ್ಯ ಪೋಲಂಡ್ನ ಪ್ರೆರ್ಮಿಸಿಲ್
ನಗರಕ್ಕೆ ಆಗಮಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಉಕ್ರೇನ್ ಗೆ ಶಸ್ತ್ರಾಸ್ತ್ರ ಪೂರೈಕೆ ಅತ್ಯಂತ ಅಪಾಯಕಾರಿ: ರಶ್ಯಾ ಹೇಳಿಕೆ
ಉಕ್ರೇನ್ ಮೇಲಿನ ಆಕ್ರಮಣವನ್ನು ಸೋಮವಾರ ಸಮರ್ಥಿಸಿಕೊಂಡಿರುವ ರಶ್ಯಾ, ಪಾಶ್ಚಿಮಾತ್ಯ ದೇಶಗಳು ಉಕ್ರೇನ್ ಗೆ ಭಾರೀ ಶಸ್ತ್ರಾಸ್ತ್ರ ಪೂರೈಸಿರುವುದು ರಶ್ಯಾದ ಭದ್ರತೆ ಮತ್ತು ಸ್ಥಿರತೆಗೆ ತೀವ್ರ ಅಪಾಯಕಾರಿಯಾದ್ದರಿಂದ ಆಕ್ರಮಣ ನಡೆಸದೆ ಅನ್ಯ ಆಯ್ಕೆ ಇರಲಿಲ್ಲ ಎಂದಿದೆ.
ನೆರೆಯ ದೇಶವನ್ನು ನಿಶ್ಯಸ್ತ್ರೀಕರಣಗೊಳಿಸುವ ಹಕ್ಕು ರಶ್ಯಾಕ್ಕೆ ಇದೆ. ಯಾಕೆಂದರೆ ಇದು ರಶ್ಯಾ ದೇಶದ ಭದ್ರತೆ ಮತ್ತು ಸ್ಥಿರತೆಗೆ ಎದುರಾಗಿರುವ ಅಪಾಯದ ಪ್ರಶ್ನೆಯಾಗಿದೆ ಎಂದು ಪುಟಿನ್ ಅವರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ. ರಶ್ಯಾದ ಕುರಿತು ಯುರೋಪಿಯನ್ ಯೂನಿಯನ್ ದ್ವೇಷದ ವರ್ತನೆ ತೋರುತ್ತಿದೆ. ನಾವು ಉಕ್ರೇನ್ನ ಪ್ರಜೆಗಳನ್ನು ರಕ್ಷಿಸುವ ವಿಶೇಷ ಸೇನಾ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಹಲವು ಪ್ರಜೆಗಳನ್ನು ಉಕ್ರೇನ್ ಆಡಳಿತ ಯುದ್ಧರಂಗದಲ್ಲಿ ಮಾನವ ಗುರಾಣಿಯಂತೆ ಬಳಸಿಕೊಳ್ಳುತ್ತಿದೆ. ಉಕ್ರೇನ್ ಸರಕಾರದ ತಪ್ಪು ನಿರ್ಧಾರಗಳಿಗೆ ಅಲ್ಲಿನ ಪ್ರಜೆಗಳು ಬಲಿಪಶುಗಳಾಗುತ್ತಿದ್ದಾರೆ. ಬಹುತೇಕ ರಶ್ಯನ್ನರು ಉಕ್ರೇನ್ ನಲ್ಲಿ ಸಂಬಂಧಿಕರನ್ನು ಹೊಂದಿದ್ದಾರೆ. ಆ ದೇಶದಲ್ಲಿ ಸರಕಾರ ನಡೆಸುತ್ತಿರುವ ಪ್ರಕ್ರಿಯೆಗಳಿಂದ ರಶ್ಯನ್ನರ ಹೃದಯ ವೇದನೆಯಿಂದ ತುಂಬಿ ಹೋಗಿದೆ ಎಂದು ಪೆಸ್ಕೋವ್ ಹೇಳಿದ್ದಾರೆ.
ಉಕ್ರೇನ್ ಸಂಘರ್ಷದ ಕುರಿತ ತುರ್ತು ಚರ್ಚೆಗೆ
ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿ ಅನುಮೋದನೆ
ಉಕ್ರೇನ್ ಮೇಲಿನ ರಶ್ಯಾದ ಆಕ್ರಮಣದ ಕುರಿತು ತುರ್ತು ಚರ್ಚೆ ನಡೆಯಬೇಕೆಂಬ ಪ್ರಸ್ತಾವನೆಯನ್ನು ವಿಶ್ವಸಂಸ್ಥೆಯ ಮಾನವಹಕ್ಕು ಸಮಿತಿ ಸೋಮವಾರ ಅನುಮೋದಿಸಿದ್ದು ಇದರೊಂದಿಗೆ, ರಶ್ಯಾಕ್ಕೆ ವಿಶ್ವಸಂಸ್ಥೆಯಲ್ಲಿ ಮತ್ತೊಂದು ಹಿನ್ನಡೆಯಾದಂತಾಗಿದೆ ಎಂದು ಮೂಲಗಳು ಹೇಳಿವೆ.
ರಶ್ಯಾ ಮಾನವಹಕ್ಕು ಸಹಿತ ವ್ಯಾಪಕ ಯುದ್ಧಾಪರಾಧ ಎಸಗಿದೆ ಎಂಬ ಉಕ್ರೇನ್ ನ ವಾದವನ್ನು ಪುರಸ್ಕರಿಸಿದ ಮಾವವ ಹಕ್ಕು ಸಮಿತಿ, ಈ ಕುರಿತ ಚರ್ಚೆಯ ಪರ ಮತ ಚಲಾಯಿಸಿದೆ. ಜಿನೆವಾದಲ್ಲಿ ಆರಂಭವಾದ ವಿಶ್ವಸಂಸ್ಥೆ ಮಾನವಹಕ್ಕು ಸಮಿತಿಯ ವಾರ್ಷಿಕ ಅಧಿವೇಶನದಲ್ಲಿ ರಶ್ಯಾದ ಆಕ್ರಮಣದ ವಿಷಯಕ್ಕೆ ಆದ್ಯತೆ ನೀಡಬೇಕೆಂಬ ಉಕ್ರೇನ್ ನಿಲುವಿಗೆ ಬಹುತೇಕ ದೇಶಗಳು ಬೆಂಬಲ ಸೂಚಿಸಿವೆ. ಸಭೆಯಲ್ಲಿ ಮಾತನಾಡಿದ ಸ್ವಿಝರ್ಲ್ಯಾಂಡ್ ಗೆ ಉಕ್ರೇನ್ ನ ರಾಯಭಾರಿ ಯೆವೆನಿಲಾ ಫಿಲಿಪೆಂಕೊ, ಹಲವಾರು ನಾಗರಿಕರ ಹತ್ಯೆಗೆ ಮತ್ತು ಸಾವಿರಾರು ಜನ ದೇಶದಿಂದ ಪಲಾಯನ ಮಾಡಲು ಕಾರಣವಾದ ರಶ್ಯಾದ ದಾಳಿ ಕೇವಲ ಉಕ್ರೇನ್ ನ ಮೇಲಿನ ಆಕ್ರಮಣವಲ್ಲ, ಇದು ವಿಶ್ವಸಂಸ್ಥೆಯ ಪ್ರತಿಯೊಂದು ಸದಸ್ಯ ದೇಶಗಳ ಮೇಲಿನ, ವಿಶ್ವಸಂಸ್ಥೆಯ ಮಾನವಹಕ್ಕು ಸಮಿತಿಯ ತತ್ವಾದರ್ಶದ ಮೇಲಿನ ಆಕ್ರಮಣವಾಗಿದೆ ಎಂದರು.
ಉಕ್ರೇನ್ ಹೇಳಿಕೆಯನ್ನು ನಿರಾಕರಿಸಿದ ರಶ್ಯಾ, ಚರ್ಚೆಗೆ ಆಗ್ರಹಿಸುವ ನಿರ್ಣಯದ ಪರ ಮತದಾನ ನಡೆಯಬೇಕೆಂದು ಆಗ್ರಹಿಸಿತು. ಮತದಾನದಲ್ಲಿ ಪಾಲ್ಗೊಂಡ 47 ಸದಸ್ಯ ದೇಶಗಳಲ್ಲಿ 29 ದೇಶಗಳು ಉಕ್ರೇನ್ ಪರ ನಿಂತವು. ರಶ್ಯಾ, ಚೀನಾ ಸಹಿತ 5 ದೇಶಗಳು ನಿರ್ಣಯದ ವಿರುದ್ಧ ಮತ ಚಲಾಯಿಸಿದರೆ, 13 ದೇಶಗಳು(ಬಹುತೇಕ ಆಫ್ರಿಕಾ ದೇಶಗಳು) ಮತದಾನದಲ್ಲಿ ಪಾಲ್ಗೊಳ್ಳಲಿಲ್ಲ. ಮಾನವ ಹಕ್ಕು ಸಮಿತಿಯಲ್ಲಿ ರಶ್ಯಾ ಏಕಾಂಗಿಯಾಗಿರುವುದನ್ನು ಈ ಫಲಿತಾಂಶ ಸಾಬೀತುಪಡಿಸಿದೆ .ರಶ್ಯಾದ ಕ್ರೂರ ಆಕ್ರಮಣವನ್ನು ಅಂತರಾಷ್ಟ್ರೀಯ ಸಮುದಾಯ ಒಗ್ಗಟ್ಟಿನಿಂದ ಖಂಡಿಸಿದೆ ಎಂದು ಅಮೆರಿಕದ ರಾಯಭಾರಿ ಶೆಬಾ ಕ್ರಾಕರ್ ಹೇಳಿದ್ದಾರೆ.
ಉಕ್ರೇನ್ ಕುರಿತ ಚರ್ಚೆ ಗುರುವಾರ ನಡೆಯಲಿದ್ದು 140ಕ್ಕೂ ದೇಶಗಳ ಉನ್ನತ ಸಚಿವರು ಹಾಗೂ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಚರ್ಚೆಯಲ್ಲಿ ಮಂಡಿಸಲಾಗುವ ಕರಡು ನಿರ್ಣಯವನ್ನು ಉಕ್ರೇನ್ ಸೋಮವಾರದ ಚರ್ಚೆ ಸಂದರ್ಭ ಪ್ರಸ್ತುತಪಡಿಸಿದೆ. ಉಕ್ರೇನ್ ಮೇಲಿನ ಆಕ್ರಮಣದ ಸಂದರ್ಭ ರಶ್ಯಾ ನಡೆಸಿರುವ ಮಾನವ ಹಕ್ಕು ಉಲ್ಲಂಘನೆ, 2014ರಲ್ಲಿ ಉಕ್ರೇನ್ ನ ಕ್ರಿಮಿಯಾ ಪ್ರಾಂತವನ್ನು ರಶ್ಯಾ ಆಕ್ರಮಿಸಿಕೊಂಡಿರುವುದು, ಉಕ್ರೇನ್ನಲ್ಲಿನ ಪ್ರತ್ಯೇಕತಾವಾದಿ ಅಭಿಯಾನಕ್ಕೆ ರಶ್ಯಾದ ನೆರವು ಸಹಿತ ಹಲವು ವಿಷಯಗಳ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಈ ನಿರ್ಣಯದಲ್ಲಿ ಆಗ್ರಹಿಸಲಾಗಿದೆ.
ಸಭೆಯ ಪ್ರಾರಂಭದಲ್ಲಿ ಮಾತನಾಡಿದ ವಿಶ್ವಸಂಸ್ಥೆ ಮಾನವ ಹಕ್ಕು ಸಮಿತಿಯ ಮುಖ್ಯಸ್ಥೆ ಮಿಷೆಲ್ ಬ್ಯಾಶ್ಲೆಟ್, ನಾವೀಗ ಅತ್ಯಂತ ನಿರ್ಣಾಯಕ ಬಿಂದುವಿನಲ್ಲಿ ಇದ್ದೇವೆ ಎಂದರು. ರಶ್ಯಾದ ಆಕ್ರಮಣ ಆರಂಭವಾದ ಪ್ರಾರಂಭದ 5 ದಿನದಲ್ಲೇ 7 ಮಕ್ಕಳ ಸಹಿತ 100ಕ್ಕೂ ಅಧಿಕ ಪ್ರಜೆಗಳು ಮೃತಪಟ್ಟ ಮಾಹಿತಿ ಲಭಿಸಿದೆ. ಈ ಅಂಕಿಅಂಶ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದರು. 16 ಮಕ್ಕಳ ಸಹಿತ 350ಕ್ಕೂ ಅಧಿಕ ಮಂದಿ ಮೃತಪಟ್ಟಿರುವುದಾಗಿ ಉಕ್ರೇನ್ನ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಈ ಮಧ್ಯೆ, ರಶ್ಯಾದ ವಿದೇಶ ಸಚಿವ ಸೆರ್ಗೆಯ್ ಲಾವ್ರೋವ್ ಮಂಗಳವಾರ ಸ್ವಿಝರ್ಲ್ಯಾಂಡ್ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿ ಸಭೆಯಲ್ಲಿ ಪಾಲ್ಗೊಳ್ಳುವ ಕಾರ್ಯಕ್ರಮವಿದೆ. ಆದರೆ, ಸ್ವಿಝರ್ಲ್ಯಾಂಡಿನೊಂದಿಗೆ ಗಡಿ ಹಂಚಿಕೊಂಡಿರುವ ಯುರೋಪಿಯನ್ ಯೂನಿಯನ್ ರಶ್ಯಾದ ವಿಮಾನಗಳಿಗೆ ತನ್ನ ವಾಯುಕ್ಷೇತ್ರವನ್ನು ಮುಚ್ಚಿರುವುದರಿಂದ ಸಮಸ್ಯೆ ಎದುರಾಗಿದೆ. ಸಮಸ್ಯೆ ಇತ್ಯರ್ಥಕ್ಕೆ ನೆರವಾಗುವಂತೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ರಶ್ಯಾ ಮತ್ತು ಯುರೋಪಿಯನ್ ಯೂನಿಯನ್ ಅಧಿಕಾರಿಗಳಿಗೆ ಕರೆ ಮಾಡಿ ವಿನಂತಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿಯಿಂದ ರಶ್ಯಾದ ಸದಸ್ಯತ್ವನ್ನು ರದ್ದುಪಡಿಸುವಂತೆ ಜಿನೆವಾದ ಪ್ರಮುಖ ಮಾನವಹಕ್ಕು ಸಂಘಟನೆಗಳು ವಿಶ್ವಸಂಸ್ಥೆಯನ್ನು ಆಗ್ರಹಿಸಿವೆ.







