ಉಕ್ರೇನ್ ನಲ್ಲಿರುವ ಭಾರತೀಯರ ಸ್ಥಳಾಂತರ ಕಾರ್ಯಾಚರಣೆಯನ್ನು ರಾಜಕೀಯಗೊಳಿಸುವುದು ಬೇಡ: ಹೆಚ್.ಡಿ. ದೇವೇಗೌಡ

ಬೆಂಗಳೂರು: ಯುದ್ಧಗ್ರಸ್ತ ಯುಕ್ರೇನ್ ದೇಶದಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆಯನ್ನು ರಾಜಕೀಯಗೊಳಿಸುವುದು ಬೇಡ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೆಗೌಡ ಕರೆ ನೀಡಿದ್ದಾರೆ.
“ಸಂಘರ್ಷಮಯ ಉಕ್ರೇನಿನಲ್ಲಿ ಸಿಲುಕಿರುವ ಭಾರತದ ಯುವ ನಾಗರಿಕರು ತಮ್ಮ ತೆರವು ಕಾರ್ಯಾಚರಣೆಗಾಗಿ ಮನವಿ ಮಾಡುತ್ತಿರುವ ವಿಡಿಯೋ ನಾನು ನೋಡುತ್ತಿದ್ದೇನೆ. ಅವರ ಅಳಲು ನೋಡಿದರೆ ಹೃದಯ ಕಲಕುತ್ತದೆ. ಸುರಕ್ಷಿತವಾಗಿ ಮನೆಗೆ ಮರಳುವ ಅವರ ತೀವ್ರ ಸಂಕಟ ನನಗೆ ಅರ್ಥವಾಗುತ್ತದೆ. ಆದರೆ, ಆ ದೇಶದಲ್ಲಿ ಯುದ್ಧವು ಉಲ್ಬಣಿಸಿರುವಾಗ, ಅಲ್ಲಿನ ನೆಲದಲ್ಲಿ ಅನಿಶ್ಚತತೆ ಮನೆ ಮಾಡಿರುವಾಗ, ಕಾರ್ಯಾಚರಣೆಗಳ ಕೊಂಡಿಗಳು ಹದ ತಪ್ಪಿರುವಾಗ ತಮ್ಮ ಕೆಲಸದಲ್ಲಿ ಮಾತ್ರ ಗಮನ ಹರಿಸಲು ನಮ್ಮ ರಾಯಭಾರ ಕಛೇರಿಯ ಸಿಬ್ಬಂದಿಗಳಿಗೆ ನಾವು ಬೆಂಬಲಿಸಬೇಕು” ಎಂದು ತಿಳಿಸಿದರು.
“ಇಂತಹ ಕಾರ್ಯಾಚರಣೆಗಳು ಸೂಕ್ಷ್ಮವೂ, ಕಠಿಣವೂ ಆಗಿರುತ್ತದೆ ಎಂದು ನನ್ನ ಅನುಭವದಿಂದ ನಾನು ಬಲ್ಲೆ. ತೆರವು ಕಾರ್ಯಾಚರಣೆಯನ್ನು ರಾಜಕೀಯಗೊಳಿಸುವುದು ಬೇಡ. ಇದು ತೆರವು ಕಾರ್ಯಚರಣೆಯಲ್ಲಿ ತೊಡಗಿರುವವರ ಮನೋಸ್ಥೈರ್ಯ ಕುಗ್ಗಿಸುತ್ತದೆ. ಈ ಬಿಕ್ಕಟ್ಟಿನ ಅವಧಿಯಲ್ಲಿ ಅಂಕ ಗಳಿಸಲು ಪ್ರಯತ್ನಿಸುವುದು ನಮ್ಮನ್ನು ಕೆಟ್ಟದಾಗಿ ಕಾಣಿಸುತ್ತದೆ. ಎಲ್ಲರೂ ಜೊತೆಗೂಡಿ ಕೆಲಸ ಮಾಡುವ” ಎಂದು ಹೆಚ್ ಡಿ ದೇವೇಗೌಡ ಅವರು ಟ್ವೀಟ್ ಮೂಲಕ ಕರೆ ನೀಡಿದ್ದಾರೆ.
ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆ ತಂದಿರುವುದಾಗಿ ಕೇಂದ್ರ ಸರ್ಕಾರದ ವ್ಯಾಪಕ ಪ್ರಚಾರ ನಡೆಯುತ್ತಿರುವ ನಡುವೆಯೇ, ಉಕ್ರೇನಿನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ನಮಗೆ ಸರ್ಕಾರದ ಯಾವ ಸಹಾಯವೂ ಸಿಗುತ್ತಿಲ್ಲ, ನಮ್ಮನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಸರ್ಕಾರಕ್ಕೆ ಒತ್ತಾಯಿಸಿ ಎಂದು ಗೋಳು ತೋಡಿಕೊಳ್ಳುವ ಸರಣಿ ವಿಡಿಯೋಗಳು ವೈರಲ್ ಆಗುತ್ತಿದೆ ಎಂದರು.
ಈ ಹಿನ್ನೆಲೆಯಲ್ಲಿ ಬಿಜೆಪಿ ಸಂಸದ ವರುಣ್ ಗಾಂಧಿ ಸೇರಿದಂತೆ ಹಲವಾರು ನಾಯಕರು ಸರ್ಕಾರದ ನಿಷ್ಕ್ರಿಯತೆಯನ್ನು ಪ್ರಶ್ನಿಸಲು ಆರಂಭಿಸಿದ್ದರು. ಈ ನಡುವೆ ಹಿರಿಯ ರಾಜಕಾರಣಿ ದೇವೇಗೌಡ ಅವರು ತೆರವು ಕಾರ್ಯಾಚರಣೆಯನ್ನು ರಾಜಕೀಯಗೊಳಿಸಬೇಡಿ ಎಂದು ಕರೆ ನೀಡಿದ್ದಾರೆ.
It will demoralise those conducting the operation. Scoring points at this hour of crisis will make us look bad. Let us work together.3/3#Ukraine #Evacuation
— H D Devegowda (@H_D_Devegowda) February 28, 2022







